ಭಕ್ತ ಸಾಗರದಿಂದ ಹರಿಯಿತು ನಾಯಕನಹಟ್ಟಿ ತಿಪ್ಪೇಶನ ತೇರು

 

ಚಿತ್ರದುರ್ಗ, ನಿತ್ಯವಾಣಿ , ಮಾ. 29 , : ಮಧ್ಯ ಕರ್ನಾಟಕದ ಪ್ರಸಿದ್ಧ ಗುರುತಿಪ್ಪೇರುದ್ರಸ್ವಾಮಿ ಜಾತ್ರೆಯು ಮಾರ್ಚ್ 29ರ ಇಂದು ಜಾತ್ರೆಯ ವಿಧಿ, ವಿಧಾನ ಮತ್ತು ಸಾಂಪ್ರದಾಯಿಕವಾಗಿ ಮಧ್ಯಾನ್ಹ 3.59 ರ ವೇಳೆಗೆ ರಥೋತ್ಸವ ನಡೆಯಿತು.

ಜಾತ್ರೆಯ ಇತಿಹಾಸದಲ್ಲಿ ಮೊದಲಬಾರಿಗೆ ಹೊರಗಿನ ಭಕ್ತರನ್ನು ನಿರ್ಬಂಧಿಸಿ ಜಾತ್ರೆ ಮಾಡಲು ಜಿಲ್ಲಾಡಳಿತ ನಿರ್ಧರಿಸಿದ ಹಿನ್ನಲೆಯಲ್ಲಿ ಲಕ್ಷಾಂತರ ಭಕ್ತರ ಆಗಮನದಿಂದ ಪುನೀತಗೊಳ್ಳುತ್ತಿದ್ದ ನಾಯಕನಹಟ್ಟಿ ತಿಪ್ಪೇಶನ ಜಾತ್ರೆ ಈ ಭಾರಿ ತೀರ ಸರಳವಾಗಿ ನಡೆಯಿತು.

ಕೊರೊನಾ ಸೋಂಕಿನ ಎರಡನೇ ಅಲೆ ಕಾಣಿಸಿಕೊಂಡಿದ್ದರಿಂದ ಜಾತ್ರಾ ಮಹೋತ್ಸವವನ್ನು ಸರಳವಾಗಿ ಆಚರಿಸಲು ಜಿಲ್ಲಾಡಳಿತ ನಿರ್ಧರಿಸಿತ್ತು. ಸ್ಥಳೀಯರಿಗೆ ಮಾತ್ರ ಅವಕಾಶ ಕಲ್ಪಿಸಿ ಹೊರಗಿ ಭಕ್ತರ ಪ್ರವೇಶಕ್ಕೆ ನಿರ್ಬಂಧ ವಿಧಿಸಿತ್ತು. ಲಕ್ಷಾಂತರ ಜನರು ಸೇರುತ್ತಿದ್ದ ಜಾತ್ರೆಗೆ ಸಾವಿರಾರು ಭಕ್ತರು ಬಂದಿದ್ದರು.

ಕೊರೊನಾ ಕಾರಣ ಜಿಲ್ಲಾಡಳಿತ ಜಾತ್ರೆಯನ್ನು ರದ್ದುಗೊಳಿಸಿ ಸರಳವಾಗಿ ಮತ್ತು ಸಂಪ್ರದಾಯಬದ್ಧವಾಗಿ ಚಿಕ್ಕ ರಥೋತ್ಸವಕ್ಕೆ ಅವಕಾಶ ನೀಡಿದ್ದು. ಅದಕ್ಕಾಗಿ ದೇವಾಲಯದ ಒಳಮಠ ಮತ್ತು ಹೊರಮಠದ ಆವರಣವನ್ನು ಸ್ವಚ್ಛಗೊಳಿಸಿ ವಿದ್ಯುತ್ ದೀಪಲಾಂಕಾರ ಮಾಡಲಾಗಿತು ರಥೋತ್ಸವದ ಅಂಗವಾಗಿ ಧಾರ್ಮಿಕ ಕೈಂಕರ್ಯಗಳು ಅಚ್ಚುಕಟ್ಟಾಗಿ ನೆರವೇರಿದವು. ಅಲಂಕೃತಗೊಂಡಿದ್ದ ಚಿಕ್ಕರಥವನ್ನು ಸಂಪ್ರದಾಯದಂತೆ ಬೆಳಿಗ್ಗೆ ಎಳೆಯಲಾಯಿತು. ಸೋಮವಾರ ಮಧ್ಯಾಹ್ನ 3ಕ್ಕೆ ರಥೋತ್ಸವದ ಬಳಿಗೆ ಬಂದ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಅವರು ದೊಡ್ಡರಥ ಎಳೆಯಲು ಅವಕಾಶ ಕಲ್ಪಿಸಿದರು. ಸಂತಸಗೊಂಡ ಜನರು ಭಕ್ತಿಪೂರ್ವಕವಾಗಿ ರಥ ಎಳೆದು ಪುನೀತರಾದರು.

ಜಾತ್ರೆಯ ಕೇಂದ್ರ ಬಿಂದುವೇ ದೊಡ್ಡರಥ. 75 ಟನ್ ತೂಕವಿರುವ ಹಾಗೂ 80 ಅಡಿ ಎತ್ತರವಿರುವ ರಥವು 5 ಚಕ್ರಗಳನ್ನು ಹೊಂದಿದೆ. ದೊಡ್ಡರಥ ಮತ್ತು ಚಿಕ್ಕರಥಕ್ಕೆ ಬಣ್ಣ ಬಣ್ಣದ ಬಾವುಟಗಳನ್ನು ಅಳವಡಿಸಲಾಗಿತ್ತು.ಮುಂಜಾಗ್ರತವಾಗಿ ಜಿಲ್ಲಾಡಳಿತ ಮಾಡಿದ ಮನವಿಗೆ ಸ್ಪಂದಿಸಿದ ಭಕ್ತರು ಮನೆಯಲ್ಲೇ ತಿಪ್ಫೇಶನಿಗೆ ಪೂಜೆ ಸಲ್ಲಿಸಿದರು. ಹೋಬಳಿಯ ಸುತ್ತಲಿನ ಭಕ್ತರು ಮಾತ್ರ ಆಗಮಿಸಿ ದೇವರಿಗೆ ಪೂಜೆ ಸಲ್ಲಿಸಿದರು.

ರಥದ ಗಾಲಿಗಳಿಗೆ ತೆಂಗಿನ ಕಾಯಿ ಒಡೆದು ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ರಥವನ್ನು ಪಾದಗಟ್ಟೆಯವರೆಗೆ ಎಳೆದೊಯ್ದು ಪೂಜೆ ಸಲ್ಲಿಸಲಾಯಿತು. ರಥವನ್ನು ಹಿಮ್ಮುಖವಾಗಿ ಎಳೆದು ಸಂಜೆ 6ಕ್ಕೆ ಸ್ವಸ್ಥಾನಕ್ಕೆ ತರಲಾಯಿತು. ಆಗ ಭಕ್ತರು ಹರ್ಷದಿಂದ ಚಪ್ಪಾಳೆ ತಟ್ಟಿ ಸಂಭ್ರಮಿಸಿದರು.

ಖುದ್ದು ಡಿಸಿ ಕವಿತಾ ಎಸ್.ಮನ್ನೀಕೆರಿ ಮತ್ತು ಎಸ್ಪಿ ಜಿ.ರಾಧಿಕಾ ಮೈಕ್ ಹಿಡಿದು ಭಕ್ತರಿಗೆ ಮಾಸ್ಕ್ ಧರಿಸಿ ಕೋವಿಡ್ ನಿಯಮ ಪಾಲಿಸಿ ಎಂದು ಮನವಿ ಮಾಡಿದರು. ಜಾತ್ರೆಯ ವಿಧಿ-ವಿಧಾನ ಮತ್ತು ಸಾಂಪ್ರದಾಯಿಕ ಪೂಜೆಯ ಜೊತೆಗೆ ಮಧ್ಯಾಹ್ನ 3.59ರ ವೇಳೆಗೆ ರಥೋತ್ಸವ ನಡೆಯಿತು. ಕೋವಿಡ್ ಭೀತಿಯ ನಡುವೆಯೂ ಜನರು ದೇವರನ್ನು ಕಣ್ತುಂಬಿಕೊಂಡು ಪುನೀತರಾದರು.