ಬೆಂಗಳೂರು: ಕೊರೊನಾ ಸೋಂಕಿನಿಂದ ಬಳಲುತ್ತಿದ್ದ ಕನ್ನಡ ಚಿತ್ರರಂಗದ ಹಿರಿಯ ಕಲಾವಿದ ಶನಿ ಮಹದೇವಪ್ಪ ವಿಧಿವಶರಾಗಿದ್ದಾರೆ. ನಗರದ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದ ಶನಿ ಮಹದೇವಪ್ಪ ಕೊನೆಯುಸಿರೆಳೆದಿದ್ದಾರೆ ಎಂದು ಪೋಷಕ ಕಲಾವಿದ ಡಿಂಗ್ರಿ ನಾಗರಾಜ್ ಮಾಹಿತಿ ಹಂಚಿಕೊಂಡಿದ್ದಾರೆ.
90 ವರ್ಷದ ಹಿರಿಯ ನಟ ಸುಮಾರು 500ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರು. ಮೇರು ನಟ ಡಾ ರಾಜ್ಕುಮಾರ್ ಜೊತೆಯಲ್ಲಿ 150 ಕ್ಕೂ ಹೆಚ್ಚು ಚಿತ್ರಗಳಲ್ಲಿ ಸಹ ನಟಿಸಿದ್ದರು. ಕವಿರತ್ನ ಕಾಳಿದಾಸ, ಭಕ್ತ ಕುಂಬಾರ, ಶ್ರೀನಿವಾಸ ಕಲ್ಯಾಣ ಸೇರಿದಂತೆ ಇತರೆ ಪ್ರಮುಖ ಚಿತ್ರಗಳಲ್ಲಿ ನಟಿಸಿದ್ದರು. ಹಿರಿಯ ಕಲಾವಿದ ಇಂದು ಸಂಜೆ 4 ಗಂಟೆಗೆ ಕೆಸಿ ಜನರಲ್ ಆಸ್ಪತ್ರೆಯಲ್ಲಿ ವಿಧಿ ವಶರಾಗಿದ್ದಾರೆ. ನಾಳೆ ಸುಮನಹಳ್ಳಿಯ ಚಿತಾಗಾರದಲ್ಲಿ ಮಹದೇವಪ್ಪರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.