ನಿತ್ಯವಾಣಿ,ಚಿತ್ರದುರ್ಗ, (ಜೂ.19) ; ಚಿತ್ರದುರ್ಗ ತಾಲ್ಲೂಕಿನ ಕಲ್ಲೇನಹಳ್ಳಿ ಗ್ರಾಮದಲ್ಲಿರುವ ಶ್ರೀ ಮರುಳುಸಿದ್ದೇಶ್ವರ ಮಠದ ವತಿಯಿಂದ ಕೊರೋನಾ ಸಂತ್ರಸ್ಥರಿಗೆ ನಿತ್ಯ ದಾಸೋಹ ನಡೆಸಲಾಗುತ್ತಿದೆ. ಶ್ರೀಮಠದ ಪೀಠಾಧ್ಯಕ್ಷರಾದ ಶ್ರೀ ತಿಪ್ಪೇರುದ್ರ ಸ್ವಾಮೀಜಿ ಅವರ ನೇತೃತ್ವದಲ್ಲಿ ಕಳೆದ 25 ದಿನಗಳಿಂದ ನಗರದ ಜಿಲ್ಲಾಸ್ಪತ್ರೆಯಲ್ಲಿ ಕೊರೋನ ಸಂತ್ರಸ್ಥರು, ಮತ್ತಿತರ ರೋಗಿಗಳಿಗೆ ಆಹಾರದ ಪೊಟ್ಟಣಗಳನ್ನು ನೀರು ವಿತರಣೆ ಮಾಡಲಾಗುತ್ತಿದೆ.ಕೊರೋನಾ ಸೋಂಕಿನ ಕಾರಣ ಜಿಲ್ಲೆಯಲ್ಲಿ ಲಾಕ್‍ಡೌನ್ ಜಾರಿ ಮಾಡಲಾಗಿತ್ತು. ಇದರಿಂದಾಗಿ ಚಿತ್ರದುರ್ಗ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಅಂಗಡಿ ಮುಂಗಟ್ಟುಗಳನ್ನು ಮುಚ್ಚಲಾಗಿತ್ತು. ಇದರಿಂದಾಗಿ ಅನಾರೋಗ್ಯದ ಕಾರಣ ಹಾಗೂ ಕೊರೋನಾ ಸೋಂಕಿಗೆ ತುತ್ತಾಗಿ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆ ಬರುವ ಜನರು ಸಂಕಷ್ಟಕ್ಕೆ ಸಿಲುಕಿದ್ದರು. ಇದನ್ನು ಮನಗಂಡ ತಿಪ್ಪೇರುದ್ರ ಸ್ವಾಮೀಜಿ ಅವರು ಬಡ ರೋಗಿಗಳಿಗೆ ಆಹಾರ ಪೂರೈಸುವ ಸಂಕಲ್ಪ ಮಾಡಿದರು.
ಅದರಂತೆ ಶ್ರೀಮಠದ ಟ್ರಸ್ಟ್ ವತಿಯಿಂದ ಆಹಾರ ತಯಾರಿಸಿ ಜಿಲ್ಲಾಸ್ಪತ್ರೆಗೆ ತಂದು ರೋಗಿಗಳು, ಅವರ ಸಂಬಂಧಿಕರಿಗೆ ವಿತರಿಸಲಾಗುತ್ತಿದೆ. ಪ್ರತಿದಿನ ಸುಮಾರು ನೂರಾರು ಮಂದಿ ಇದರ ಪ್ರಯೋಜನ ಪಡೆಯುತ್ತಿದ್ದಾರೆ. ಕಳೆದ ಏಳು ವರ್ಷದ ಹಿಂದೆ ಕಲ್ಲೇನಹಳ್ಳಿ ಸ್ಥಾಪಿತವಾದ ಶ್ರೀಮಠದಲ್ಲಿ ಪ್ರತಿ ಭಾನುವಾರ ಹಾಗೂ ಗುರುವಾರ ಅನ್ನದಾಸೋಹ ನಡೆಸಿಕೊಂಡು ಬರಲಾಗಿದೆ. ಶ್ರೀಮಠಕ್ಕೆ ಬರುವ ನೂರಾರು ಸಂಖ್ಯೆಯ ಭಕ್ತರು ಪ್ರಸಾದ ಸ್ವೀಕರಿಸುತ್ತಿದ್ದಾರೆ.
ಕೊರೋನಾ ಲಾಕ್‍ಡೌನ್ ಕಾರಣ ಶ್ರೀಮಠಕ್ಕೆ ಬರುತ್ತಿದ್ದ ಭಕ್ತರ ಸಂಖ್ಯೆ ಕಡಿಮೆಯಾಯಿತು. ಇದರಿಂದ ಶ್ರೀಮಠದಲ್ಲಿ ನಡೆಯುತ್ತಿದ್ದ ಅನ್ನದಾಸೋಹಕ್ಕೆ ತಾತ್ಕಾಲಿಕವಾಗಿ ತಡೆ ಉಂಟಾಯಿತು. ಶ್ರೀಮಠದಲ್ಲಿ ನಡೆಯುತ್ತಿದ್ದ ಅನ್ನದಾಸೋಹವನ್ನು ಸಂಕಷ್ಟದಲ್ಲಿರುವವರಿಗೆ ತಲುಪಿಸಬೇಕೆಂಬ ನಿರ್ಧಾರ ಮಾಡಲಾಯಿತು. ಅದರಂತೆ ಕೊರೋನಾ ಸಂತ್ರಸ್ಥರಿಗೆ, ಜಿಲ್ಲಾಸ್ಪತ್ರೆಯ ರೋಗಿಗಳಿಗೆ ನಿತ್ಯದಾಸೋಹ ನಡೆಸುತ್ತಾ ಬರಲಾಗಿದೆ.
ಶ್ರೀಮಠದ ಟ್ರಸ್ಟ್ ಅಧ್ಯಕ್ಷ ವೇದಮೂರ್ತಿ, ಉಪಾಧ್ಯಕ್ಷ ಹೇಮಣ್ಣ, ಸದಸ್ಯರಾದ ಎಸ್.ಕೆ.ಕುಮಾರ್, ಜಿ.ಓ.ಜಯಣ್ಣ, ಪಿ.ಸೂರಯ್ಯ, ಗ್ರಾ.ಪಂ. ಸದಸ್ಯ ಜೆ.ರಾಘವೇಂದ್ರ, ಜಿ.ಬಿ.ರಂಗನಾಥ್ ಮತ್ತಿತರರು ಈ ಅನ್ನದಾಸೋಹ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
ಸುದ್ದಿಗಾಗಿ, ಜಾಹೀರಾತಿಗಾಗಿ ,ನಿತ್ಯವಾಣಿ ಕನ್ನಡ ದಿನಪತ್ರಿಕೆ, ಸಂಪಾದಕರು ಎಸ್ ಟಿ ನವೀನ್ ಕುಮಾರ್, ಚಿತ್ರದುರ್ಗ, ಮೊಬೈಲ್ -9901254020