ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗ ಜಿಲ್ಲೆಯ ಗ್ರಾಮ ಪಂಚಾಯ್ತಿ ಚುನಾವಣೆ ಕುರಿತು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಸುದ್ದಿಗೋಷ್ಠಿಯಲ್ಲಿ ಸಂಪೂರ್ಣ ಮಾಹಿತಿ ನಿಡಿದ್ದಾರೆ.
ಚುನಾವಣಾ ಆಯೋಗದ ಆದೇಶದಂತೆ ಚಿತ್ರದುರ್ಗ ಜಿಲ್ಲೆಯಲ್ಲೂ ಎರಡು ಹಂತಗಳಲ್ಲಿ ಮತದಾನ ಪ್ರಕ್ರಿಯೆ ನಡೆಯಲಿದೆ. ಮೊದಲ ಹಂತದಲ್ಲಿ ಚಿತ್ರದುರ್ಗ ತಾಲೂಕಿನ 38, ಹೊಸದುರ್ಗ ತಾಲೂಕಿನ 33 ಹಾಗು ಹೊಳಲ್ಕೆರೆ ತಾಲ್ಲೂಕಿನ 29 ಗ್ರಾಮ ಪಂಚಾಯ್ತಿಗೆ ಚುನಾವಣೆ ನಡೆಯಲಿದ್ದು ಒಟ್ಟು 100 ಗ್ರಾಮ ಪಂಚಾಯ್ತಿಯ 1753 ಸ್ಥಾನಗಳಿಗೆ ಡಿಸೆಂಬರ್ 22ರಂದು ಮಂಗಳವಾರ ಮತದಾನ ಪ್ರಕ್ರಿಯೆ ನಡೆಯಲಿದೆ.
ಎರಡನೇ ಹಂತದಲ್ಲಿ ಹಿರಿಯೂರು ತಾಲ್ಲೂಕಿನ 33, ಚಳ್ಳಕೆರೆ ತಾಲೂಕಿನ 40 ಹಾಗು ಮೊಳಕಾಲ್ಮೂರು ತಾಲೂಕಿನ 16 ಸೇರಿದಂತೆ ಒಟ್ಟು 89 ಗ್ರಾಮ ಪಂಚಾಯ್ತಿಯ 1668 ಸ್ಥಾನಗಳಿಗೆ ಡಿಸೆಂಬರ್ 27ರಂದು ಭಾನುವಾರ ಮತದಾನ ನಡೆಯಲಿದೆ.
ಮೊದಲ ಹಂತಕ್ಕೆ ಡಿಸೆಂಬರ್ 07ರಂದು ಚುನಾವಣಾ ಅಧಿಸೂಚನೆ ಹೊರಬೀಳಲಿದ್ದು, ಡಿಸೆಂಬರ್ 11ರವರೆಗೆ ನಾಮಪತ್ರ ಸಲ್ಲಿಸಬಹುದಾಗಿದೆ. ಡಿಸೆಂಬರ್ 12ರಂದು ನಾಮಪತ್ರ ಪರಿಶೀಲಿಸಲಿರುವ ಚುನಾವಣಾ ಆಯೋಗ, ಡಿಸೆಂಬರ್ 14ರಂದು ನಾಮಪತ್ರ ಹಿಂಪಡೆಯಲು ದಿನಾಂಕ ನಿಗಧಿಗೊಳಿಸಿದೆ.
ಡಿಸೆಂಬರ್ 22ರಂದು ನಡೆಯಲಿರುವ ಮೊದಲ ಹಂತದ ಚುನಾವಣೆ ಮುಗಿದ ಬಳಿಕ ಡಿಸೆಂಬರ್ 30ರಂದು ಮತ ಎಣಿಕೆಗೆ ದಿನಾಂಕ ನಿಗದಿಪಡಿಸಲಾಗಿದೆ.
ಎರಡನೇ ಹಂತದದ ಚುನಾವಣೆಗೆ ಡಿಸೆಂಬರ್ 11ರಂದು ಚುನಾವಣಾ ಅಧಿಸೂಚನೆ ಹೊರಬೀಳಲಿದ್ದು, ಡಿಸೆಂಬರ್ 16 ರವರೆಗೆ ನಾಮಪತ್ರ ಸಲ್ಲಿಸಲು ದಿನಾಂಕ ನಿಗಧಿಯಾಗಿದೆ. ಎರಡನೇ ಹಂತದ ಚುನಾವಣಾಯ ನಾಮಪತ್ರ ಪರಿಶೀಲನೆ ಡಿಸೆಂಬರ್ 17ರಂದು ನಡೆಯಲಿದ್ದು, ಡಿಸೆಂಬರ್ 19ರಂದು ನಾಮಪತ್ರ ಹಿಂಪಡೆಯಲು ಅವಕಾಶ ನೀಡಲಾಗಿದೆ.