ಕೂದಲು ಬಾಚಿಕೊಂಡ ಮೇಲೆ ಅದು ಹರಡದಿರಲಿ ಎಂದು ಹೇರ್ ಸ್ಪ್ರೇ ಹಾಕುವುದು ಮಾಮೂಲು. ಆದರೆ ಈ ಮಹಿಳೆ ಮಾಡಿರುವ ಕೆಲಸ ನೋಡಿದರೆ ನಿಮಗೆ ನಗು ಬರುವುದು ಗ್ಯಾರಂಟಿ. ಹೇರ್ ಸ್ಪ್ರೇ ಖಾಲಿಯಾಯಿತೆಂದು ತಲೆಗೆ ಗೋರಿಲ್ಲಾ ಗ್ಲೂ ಹಚ್ಚಿಕೊಂಡ ಯುವತಿಯ ಕಥೆ ಏನಾಯಿತು ಎನ್ನುವುದನ್ನು ನೀವೇ ನೋಡಿ.
ಟೆಸ್ಸಿಕಾ ಬ್ರೌನ್ ಹೆಸರಿನ ಮಹಿಳೆ ಇನ್ಸ್ಟಾಗ್ರಾಂ ಇನ್ಫ್ಲೂಯೆನ್ಸರ್ ಜತೆಗೆ ಟಿಕ್ಟಾಕ್ ಸ್ಟಾರ್. ಆಕೆಯ ಹೇರ್ ಸ್ಪ್ರೇ ಇತ್ತೀಚೆಗೆ ಖಾಲಿ ಆಯಿತಂತೆ. ಅದಕ್ಕಾಗಿ ಆಕೆ ಗೋರಿಲ್ಲಾ ಗ್ಲೂ ಅನ್ನು ತಲೆಗೆ ಹಾಕಿಕೊಳ್ಳುವ ಉಪಾಯ ಮಾಡಿದ್ದಾಳೆ. ಅದರಂತೆ ಹಾಕಿಕೊಂಡಿದ್ದಾಳೆ ಕೂಡ. ಆ ಗ್ಲೂ ಹಾಕಿಕೊಂಡ ತಕ್ಷಣ ಆಕೆಯ ಕೂದಲು ತಲೆಗೆ ಗಟ್ಟಿಯಾಗಿ ಅಂಟಿಕೊಂಡಿದೆ. ಏನೇ ಮಾಡಿದರೂ ಒಂದೇ ಒಂದು ಕೂದಲೂ ಸಹ ಅಲುಗಾಡದಷ್ಟು ಗಟ್ಟಿಯಾಗಿ ಅಂಟಿಕೊಂಡಿದೆ. 15-20 ಬಾರಿ ಶಾಂಪು ಹಾಕಿ ತಲೆ ತೊಳೆದರೂ ಅಂಟು ಮಾತ್ರ ಬಿಟ್ಟುಕೊಂಡಿಲ್ಲ.
ಕೂದಲಿನ ಈ ಅವಸ್ಥೆಯನ್ನು ಟೆಸ್ಸಿಕಾ ಇನ್ಸ್ಟಾಗ್ರಾಂನಲ್ಲಿ ವಿಡಿಯೋ ಮಾಡಿ ಹಂಚಿಕೊಂಡಿದ್ದಾರೆ. ಟೆಸ್ಸಿಕಾಳ ವಿಡಿಯೋವನ್ನು ಮೊದಮೊದಲು ನೆಟ್ಟಿಗರು ತಮಾಷೆ ಎಂದೇ ತೆಗೆದುಕೊಂಡಿದ್ದಾರೆ. ಆದರೆ ಕಷ್ಟವನ್ನು ತಾಳಲಾರದೆ ಆಕೆ ಆಸ್ಪತ್ರೆಗೆ ಹೋಗಿ ಅಲ್ಲಿ ಚಿಕಿತ್ಸೆ ಪಡೆಯುತ್ತಿರುವ ಫೋಟೋ, ವಿಡಿಯೋವನ್ನೂ ಹಂಚಿಕೊಂಡ ನಂತರ ಜನರು ಅವಳಿಗೆ ಪಾಪವೆಂದು ಹೇಳತೊಡಗಿದ್ದಾರೆ.