ನಿತ್ಯವಾಣಿ, ಹೊಳಲ್ಕೆರೆ, ನ.02 : ಹೊಳಲ್ಕೆರೆ ಪುರಸಭಾ ಕಾರ್ಯಾಲಯದಲ್ಲಿ ಇಂದು ಪೌರಕಾರ್ಮಿಕರಿಗೆ ಆರೋಗ್ಯ ತಪಾಸಣೆ ಮತ್ತು ಆರೋಗ್ಯ ಕಾರ್ಡ್ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಪೌರಕಾರ್ಮಿಕರ ಆರೋಗ್ಯ ತಪಾಸಣೆ ನಡೆಸಲಾಯಿತು ಹಾಗೂ ಆಯುಷ್ಮಾನ್ ಆರೋಗ್ಯ ಕಾರ್ಡ್ ನೊಂದಣಿ ಮಾಡಿಸಲಾಯಿತು. ಹೊಳಲ್ಕೆರೆ ಪುರಸಭೆಯ ಮುಖ್ಯಾಧಿಕಾರಿ ಎ ವಾಸಿಂ, ಉಪಾಧ್ಯಕ್ಷರಾದ ಕೆ ಸಿ ರಮೇಶ್, ಆರೋಗ್ಯ ನಿರೀಕ್ಷಕರಾದ ಮಹಮದ್ ಶೌಕತ್ ಅಲಿ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗಳಾದ ಆರೋಗ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ್ ನಾಯ್ಕ್, ಆರೋಗ್ಯ ಕಾರ್ಯಕ್ರಮ ಅಧಿಕಾರಿ ಸಂತೋಷ್, ಸಮುದಾಯ ಆರೋಗ್ಯ ಅಧಿಕಾರಿ ಜಯಪ್ಪ, ಲಕ್ಷ್ಮಿ, ರೂಪ, ತಾಲ್ಲೂಕು ಆರೋ ಗ್ಯ ಅಧಿಕಾರಿ ಡಾ|| ರವಿಕುಮಾರ್ ಹಾಗೂ ಆಶಾ ಕಾರ್ಯಕರ್ತರು, ಆಯುಷ್ಮಾನ್ ಕಾರ್ಡ್ ನಿರ್ವಾಹಕರಾದ ಐಶ್ವರ್ಯ, ಭಾರತಿ, ರೂಪ ಇದ್ದರು.
ಮುಖ್ಯಾಧಿಕಾರಿ ಎ ವಾಸಿಂ ಈ ಸಂದರ್ಭದಲ್ಲಿ ಮಾತನಾಡಿ ಪೌರಕಾರ್ಮಿಕರ ಪ್ರತಿನಿತ್ಯದ ಜೀವನ ಕಸದೊಂದಿಗೇ ಸಾಗುತ್ತದೆ. ಸದಾ ತ್ಯಾಜ್ಯ ವಸ್ತುಗಳ ಸಂಪರ್ಕದಲ್ಲಿ ಇರುತ್ತಾರೆ. ಇದರಿಂದ ಅವರ ಆರೋಗ್ಯದ ಮೇಲೆ ಯಾವುದೇ ದುಷ್ಪರಿಣಾಮ ಆಗುವುದನ್ನು ತಡೆಗಟ್ಟಲು ಆಗಿಂದಾಗ್ಗೆ ಆರೋಗ್ಯ ತಪಾಸಣೆ ನಡೆಸಿ ಅಗತ್ಯ ಲಸಿಕೆಗಳನ್ನು, ವೈದ್ಯಕೀಯ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈಗಾಗಲೇ ಎಲ್ಲ ಕಾರ್ಮಿಕರಿಗೂ ಕೋವಿಡ್ ಲಸಿಕೆಗಳನ್ನು ಕೊಡಿಸಿ, ಬೂಸ್ಟರ್ ಡೋಸ್ ಸಹ ಹಾಕಿಸಲಾಗಿರುತ್ತದೆ. ಆಗಿಂದಾಗ್ಗೆ ಚಿತ್ರದುರ್ಗದ ಶ್ರೀ ಬಸವೇಶ್ವರ ಆಸ್ಪತ್ರೆಯಲ್ಲಿ ಪೌರಕಾರ್ಮಿಕರ ಸಂಪೂರ್ಣ ಆರೋಗ್ಯ ತಪಾಸಣೆ ನಡೆಸಿ ಅಗತ್ಯ ವೈದ್ಯಕೀಯ ಚಿಕಿತ್ಸೆ ಕೊಡಿಸಲಾಗುತ್ತಿದೆ. ಪೌರಕಾರ್ಮಿಕರಿಗೆ ಅಗತ್ಯ ಸುರಕ್ಷಾ ಧಿರಿಸುಗಳನ್ನು ಸಹ ನೀಡಲಾಗುತ್ತಿದೆ. ಪೌರಕಾರ್ಮಿಕರು ತಮ್ಮ ಆರೋಗ್ಯದ ಹಿತದೃಷ್ಟಿಯಿಂದ ತಾವು ತ್ಯಾಜ್ಯ ನಿರ್ವಹಣೆಯ ಕೆಲಸ ನಿರ್ವಹಿಸುವ ಸಂದರ್ಭದಲ್ಲಿ ಕಡ್ಡಾಯವಾಗಿ ಹ್ಯಾಂಡ್ ಗ್ಲೋವ್ಸ್, ಮಾಸ್ಕ್, ಗಂಬೂಟ್ ಗಳನ್ನು ಧರಿಸಿಯೇ ಕೆಲಸ ನಿರ್ವಹಿಸಬೇಕು ಎಂದು ಸೂಚಿಸಿದರು.
ಉಪಾಧ್ಯಕ್ಷರಾದ ಕೆ ಸಿ ರಮೇಶ್ ಮಾತನಾಡಿ ಮುಖ್ಯಾಧಿಕಾರಿ ವಾಸಿಂ ರವರು ಹೇಳುತ್ತಿರುವುದು ಸರಿಯಾಗಿದೆ, ಪುರಸಭೆಯಿಂದ ನೀಡಲಾಗುವ ಸುರಕ್ಷಾ ಧಿರಿಸುಗಳನ್ನು ಬಳಸದೆ ಪೌರಕಾರ್ಮಿಕರು ಕೆಲಸ ಮಾಡುವುದು ಸರಿಯಲ್ಲ. ಈ ಸೌಲಭ್ಯಗಳಿರುವುದು ನಿಮ್ಮ ಆರೋಗ್ಯದ ಹಿತ ಕಾಪಾಡಲು ನೀವು ಇವುಗಳನ್ನು ಸರಿಯಾಗಿ ಬಳಕೆ ಮಾಡಿಕೊಳ್ಳಬೇಕು ಎಂದರು. ಪೌರಕಾರ್ಮಿಕರು ತಮ್ಮ ಕುಟುಂಬದ ಸದಸ್ಯರೊಟ್ಟಿಗೆ ಸಂಪರ್ಕದಲ್ಲಿರುವ ಕಾರಣ ಅವರ ಕುಟುಂಬಸ್ಥರಿಗೆ ಅದರಲ್ಲೂ ಪೌರಕಾರ್ಮಿಕರ ಪುಟ್ಟ ಪುಟ್ಟ ಮಕ್ಕಳಿಗೆ ಯಾವುದೇ ಸಾಂಕ್ರಾಮಿಕ ರೋಗಗಳು ಹರಡದಂತೆ ಜಾಗ್ರತೆ ವಹಿಸಬೇಕಾಗಿದೆ. ಈ ನಿಟ್ಟಿನಲ್ಲಿ ಪುರಸಭೆ ವತಿಯಿಂದ ಮುಂಬರುವ ದಿನಗಳಲ್ಲಿ ಪೌರಕಾರ್ಮಿಕರ ಕುಟುಂಬಸ್ಥರಿಗೂ ಸಹ ಸಂಪೂರ್ಣ ಆರೋಗ್ಯ ತಪಾಸಣೆ ನಡೆಸಲು ಅಗತ್ಯ ಕ್ರಮ ವಹಿಸಲಾಗುವುದು ಎಂದರು.