ನಿತ್ಯವಾಣಿ,ಚಿತ್ರದುರ್ಗ,( ಜುಲೈ 11 )”ಮಳೆಗಾಲ ಪ್ರಾರಂಭವಾಯಿತೆಂದರೆ ಅನೇಕ ಆರೋಗ್ಯ ಸಮಸ್ಯೆಗಳು ಮಾನವನ ದೇಹಕ್ಕಂಟಿಕೊಳ್ಳುತ್ತವೆ. ಅದರಲ್ಲೂ ಸಾಂಕ್ರಾಮಿಕ ರೋಗಗಳಾದ ಡೆಂಗ್ಯೂ ಜ್ವರ. ಕಾಲರಾ, ಮತ್ತು ಚಿಕೂನ ಗುನ್ಯಾ ರೋಗಗಳು ರೋಗಿಯನ್ನು ಹಲವಾರು ದಿನಗಳ ಕಾಲ ಹಾಸಿಗೆಗೆ ತಳ್ಳುತ್ತವೆ. ಆದ್ದರಿಂದ ರೋಗ ಅಂಟಿಕೊಳ್ಳುವದಕ್ಕಿಂತ ಪೂರ್ವದಲ್ಲಿಯೇ ಜಾಗೃತೆ ವಹಿಸಿದರೆ ರೋಗ ತಡೆ ಸಾಧ್ಯ.” ಎಂದು ಬೆಳಗಟ್ಟ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ನಿರೀಕ್ಷಣಾಧಿಕಾರಿ ಡಿ.ಮಹೇಶ್ ಹೇಳಿದರು.

ಚಿತ್ರದುರ್ಗ ತಾಲ್ಲೂಕು ಬಾಗೇನಹಾಳ್ ಮತ್ತು ಬೆಳಗಟ್ಟ ಗ್ರಾಮಗಳಲ್ಲಿ ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಚಿತ್ರದುರ್ಗ, ಬೆಳಗಟ್ಟ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಬೆಳಗಟ್ಟ, ಬಾಗೇನಹಾಳ್ ಗ್ರಾಮ ಪಂಚಾಯತಿಗಳ ಸಂಯುಕ್ತವಾಗಿ ಇಂದು ಹಮ್ಮಿಕೊಂಡಿದ್ದ ಡೆಂಗ್ಯೂ ವಿರೋಧಿ ಮಾಸಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಇದೇ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿದ್ದ ಕೂನಬೇವು ಉಪ ಆರೋಗ್ಯ ಕೇಂದ್ರದ ಆರೋಗ್ಯ ಸಂರಕ್ಷಣಾಧಿಕಾರಿ ಶ್ರೀಮತಿ ಭಾರತೀ ಕಟ್ಟೀಮನಿ ಮಾತನಾಡಿ “ಎಡಿಸ್ ಇಜಿಪ್ತಿ ಎಂಬ ಸೊಳ್ಳೆ ಕಡಿತದಿಂದ ಬರುವ ರೋಗವೇ ಡೆಂಗ್ಯೂ ಜ್ವರ. ಇದರಿಂದ ಬಳಲುತ್ತಿರುವ ವ್ಯಕ್ತಿಯನ್ನು ಕಚ್ಚಿದ ಸೊಳ್ಳೆ ಸಾಮಾನ್ಯ ವ್ಯಕ್ತಿಗೆ ಕಡಿದರೆ ಅವನಿಗೂ ಕೂಡ ಡೆಂಗ್ಯೂ ಜ್ವರ ತಗಲುತ್ತದೆ. ಸೊಳ್ಳೆ ಕಡಿದ ನಾಲ್ಕೈದು ದಿನಗಳಲ್ಲಿ ರೋಗದ ಲಕ್ಷಣಗಳು ಕಂಡು ಬರುತ್ತವೆ.
ಮಳೆಗಾಲದಲ್ಲಿ ಸಾಮಾನ್ಯವಾಗಿ ಕಂಡುಬರುವ ಎಡಿಸ್ ಇಜಿಪ್ತಿ ಎಂಬ ಸೊಳ್ಳೆಯಿಂದ ಹರಡುತ್ತದೆ. ನೀರಿನಿಂದ ತುಂಬಿರುವ ಹೂವಿನ ಕುಂಡ, ಪ್ಲಾಸ್ಟಿಕ್ ಚೀಲಗಳಲ್ಲಿ ಬಿಸಾಡಿದ ಕ್ಯಾನಗಳಲ್ಲಿ ತೆರೆದ ನೀರಿನ ಟ್ಯಾಂಕಗಳಲ್ಲಿ ಈ ಜಾತಿಯ ಸೊಳ್ಳೆಗಳ ಸಂತಾನೋತ್ಪತ್ತಿಯಾಗುತ್ತದೆ. ಒಂದೇ ಬಾರಿ ಈ ಸೊಳ್ಳೆ ಕಚ್ಚಿದರೂ ಕೂಡ ಡೆಂಗ್ಯೂ ಜ್ವರ ಬಂದೆರಗುತ್ತದೆ. ಆದ್ದರಿಂದ ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ಸ್ವಚ್ಚತೆಯನ್ನು ಕಾಪಾಡಿ” ಎಂದು ಗ್ರಾಮಸ್ಥರಿಗೆ ಸಲಹೆ ನೀಡಿದರು.
ನಂತರ ಡೆಂಗ್ಯೂ ಸುರಕ್ಷ ಕರಪತ್ರಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಕೋನಬೇವು ಗ್ರಾ.ಪಂ.ಸದಸ್ಯರಾದ ಚಂದ್ರಪ್ಪ ಬಾಗೇನಹಾಳ್, ಬೆಳಗಟ್ಟ ಗ್ರಾ.ಪಂ.ಸದಸ್ಯರಾದ K.H.ನಾಗೇಶ್, ಓ.ಬೊರೇಶ್, ಶಿಕ್ಷಕರಾದ ಮಂಜುನಾಥ್, ಆಶಾ ಕಾರ್ಯಕರ್ತೆಯರಾದ ಎಲ್.ಮುನಿರಾಬೇಗಂ, ಪುಷ್ಪವತಿ, ಪಾಪಕ್ಕ, ನಿಂಗಮ್ಮ, ಮಾಂತಮ್ಮ, ಹಾಗೂ ಅಂಗನವಾಡಿ ಸಹಾಯಕಿಯರಾದ ಶ್ರೀಮತಿ ಚಿಟ್ಟಮ್ಮ, ತಿಪ್ಪೇರುದ್ರಮ್ಮ ಮತ್ತು ಗ್ರಾಮದ ಮುಖಂಡರು ಭಾಗವಹಿಸಿದ್ದರು.
ವರದಿ: ಕೆ.ರವಿ ಅಂಬೇಕರ್