ನಿತ್ಯವಾಣಿ,ಚಿತ್ರದುರ್ಗ,(ಮೇ. 28) : ಮುಂದಿನ ಎರಡು ವರ್ಷದಲ್ಲಿ ಹೊಳಲ್ಕೆರೆ ವಿಧಾನ ಸಭಾ ಕ್ಷೇತ್ರದಲ್ಲಿ ಕುಡಿಯುವ ನೀರು ಮತ್ತು ವಿದ್ಯುತ್ ಸಮಸ್ಯೆಯನ್ನು ನಿವಾರಣೆ ಮಾಡಲಾಗುವುದು ಇದಕ್ಕೆ ಬೇಕಾದ ತಯಾರಿ ಮತ್ತು ಹಣಕಾಸಿನ ಸಿದ್ದತೆ ಆಗಿದೆ ಎಂದು ಕ್ಷೇತ್ರದ ಶಾಸಕರು, ಸಾರಿಗೆ ನಿಗಮದ ಅಧ್ಯಕ್ಷರಾದ ಎಂ.ಚಂದ್ರಪ್ಪ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದೆ ಮಳೆಯು ಸಹಾ ಕಡಿಮೆ ಪ್ರಮಾಣದಲ್ಲಿ ಆಗಿದ್ದು ಕೂಳವೆಬಾವಿಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ, ಇದ್ದಲ್ಲದೆ ಕೆರೆಗಳು ಸಹಾ ಬತ್ತಿ ಹೋಗಿದೆ, ಇದರಿಂದ ನೀರಿಗಾಗಿ ಜನತೆ-ಜಾನುವಾರುಗಳು ಸಂಕಷ್ಟಕ್ಕೆ ಈಡಾಗಿದೆ, ಸಮಸ್ಯೆ ನಿವಾರಣೆಗಾಗಿ ಜಲಜೀವನ್ ಮಿಷನ್ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಅಡಿ ತಾಲ್ಲೂಕಿನಲ್ಲಿ ವಿವಿಧ ಕಾಮಕಾರಿ ಕೈಗೊಳ್ಳಲು ಸಲ್ಲಿಸಿದ್ದ ಪ್ರಸ್ತಾವಕ್ಕೆ ಗುರುವಾರ ಸಚಿವ ಸಂಪುಟ ಅಸ್ತು ಎಂದಿದೆ. ಅಂದಾಜು 276 ಕೋಟಿ ಅನುದಾನ ಬಿಡುಗಡೆಗೊಳಿಸಲು ತೀರ್ಮಾನಿಸಿದೆ ಎಂದು ತಿಳಿಸಿದರು.
ಹೊಳಲ್ಕೆರೆ ಕ್ಷೇತ್ರಕ್ಕೆ ಇಂತಹ ದೊಡ್ಡಮಟ್ಟದ ಯೋಜನೆ ಇದುವರೆಗೂ ಯಾವುದು ಬಂದಿರಲಿಲ್ಲ. ಹೊಳಲ್ಕೆರೆ ತಾಲ್ಲೂಕು ಮಲೆನಾಡು ಭಾಗದ ವ್ಯಾಪ್ತಿಗೆ ಸೇರಿದ್ದರೂ ಕುಡಿಯುವ ನೀರಿನ ಅಭಾವ ಬಹುತೇಕ ಗ್ರಾಮಗಳಲ್ಲಿದೆ. ಅಂತರ್ಜಲವೂ ಬತ್ತಿ ಹೋಗಿದೆ. ಜಿಲ್ಲೆಯಲ್ಲಿ ಅತಿ ಹೆಚ್ಚಾಗಿ ಹೊಳಲ್ಕೆರೆ ತಾಲ್ಲೂಕಿನಲ್ಲಿ ಅಡಿಕೆ ತೋಟಗಳು ಹೆಚ್ಚಾಗಿವೆ. ತಾಲ್ಲೂಕಿನ ಜನರಿಗೆ ಕುಡಿಯವ ನೀರಿನ ಸಮಸ್ಯೆಯ ಜೊತೆಗೆ ಅಡಿಕೆ ತೋಟಗಳನ್ನು ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ಹಾಗಾಗಿ ಕ್ಷೇತ್ರದ ಜನರ ಕುಡಿಯುವ ನೀರಿನ ಸಮಸ್ಯೆಯನ್ನು ಗಮನಿಸಿ ಈ ಯೋಜನೆಯನ್ನು ರೂಪಿಸಲಾಗಿದೆ ಎಂದು ಹೇಳಿದರು.
ಕೇಂದ್ರ ಸರ್ಕಾರದಿಂದ 85.30 ಕೋಟಿ, ರಾಜ್ಯ ಸರ್ಕಾರ 68.02 ಕೋಟಿ, ನಬಾರ್ಡ್‍ನ ಆರ್‍ಐಡಿಎಫ್ ಯೋಜನೆಯ ಸಹಾಯಧನವಾಗಿ 122.68 ಕೋಟಿ ಅನುದಾನ ಬಿಡುಗಡೆಯಾಗಲಿದೆ. ಬಂಡವಾಳ ವೆಚ್ಚವೂ 230.48 ಕೋಟಿ ಆಗಿದೆ. ಕಾರ್ಯಾಚರಣೆ ಮತ್ತು ನಿರ್ವಹಣೆ ವೆಚ್ಚವಾಗಿ 45.52 ಕೋಟಿ ಮೀಸಲಿಡ ಲಾಗುತ್ತಿದೆ. ಯೋಜನಾ ವೆಚ್ಚವಾಗಿ 276 ಕೋಟಿ ಎಂದು ಅಂದಾಜಿಸಲಾಗಿದೆ. ಯೋಜನೆಯನ್ನು ಸಚಿವ ಸಂಪುಟ ಒಪ್ಪಿಗೆ ನೀಡಿದ ಅವಧಿಯಿಂದ 24 ತಿಂಗಳೊಳಗೆ ಪೂರ್ಣಗೊಳಿಸಲು ಸಮಯ ನಿಗದಿಗೊಳಿ ಸಲಾಗಿದೆ. ಹೊಳಲ್ಕೆರೆ ಪಟ್ಟಣದಲ್ಲಿ 23 ಸಾವಿರ ಹಾಗೂ ತಾಲ್ಲೂಕಿನ ಗ್ರಾಮೀಣ ಭಾಗಗಳ 1.94 ಲಕ್ಷ ಜನಸಂಖ್ಯೆ ಸೇರಿ ಒಟ್ಟು 2.17 ಲಕ್ಷ ಜನಸಂಖ್ಯೆಗೆ ಅನುಗುಣವಾಗಿ ನಳ ಸಂಪರ್ಕ ಕಲ್ಪಿಸುವ ಯೋಜನೆ ಇದಾಗಿದೆ ಎಂದು ಚಂದ್ರಪ್ಪ ತಿಳಿಸಿದರು.
ಒಂದು ವರ್ಷ ಮೂರು ತಿಂಗಳಿಂದ ವಾಣಿವಿಲಾಸ ಸಾಗರದಿಂದ ನೀರು ತರಲು ನೀರಾವರಿ ಇಲಾಖೆಯಿಂದ 0.536 ಟಿಎಂಸಿ ನೀರು ಪಡೆಯಲಾಗಿದೆ. 11 ಇಲಾಖೆಗಳಿಂದ ಅನುಮತಿ ಪಡೆದು ಕಳೆದ ಒಂದು ವರ್ಷದಿಂದ ಎಲ್ಲಾ ಇಲಾಖೆಗಳ ಅನುಮತಿ ಪಡೆದು ಸರ್ಕಾರ ಯೋಜನೆ ಮಂಜೂರು ಮಾಡಿದೆ ಎಂದರು.
ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ, ನಬಾರ್ಡ್ ನಿಂದ ಅನುದಾನ ಪಡೆದು ಈ ಯೋಜನೆಗೆ ಆರ್ಥಿಕ ನೆರವು ನೀಡಲಾಗುತ್ತಿದೆ. ಈ ಯೋಜನೆಯು ಕ್ಷೇತ್ರಕ್ಕೆ ಮಹತ್ವಪೂರ್ಣ ಯೋಜನೆಯಾಗಿದ್ದು, ಈ ಯೋಜನೆ ಪೂರ್ಣಗೊಳಿಸಲು 24 ತಿಂಗಳು ಅವಧಿ ನಿಗಧಿಪಡಿಸಲಾಗಿದ್ದು, ಯಾವುದೇ ಅನುದಾನದ ಕೊರತೆ ಉಂಟಾಗುವುದಿಲ್ಲ. ಈ ಯೋಜನೆಯನ್ನು ಬಳಸಿಕೊಂಡು ಹೊಳಲ್ಕೆರೆ ತಾಲ್ಲೂಕಿನ ಗ್ರಾಮಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಹೇಳಿದರು.
ಈ ಯೋಜನೆಯಿಂದ 2051 ರವರೆಗೆ ಹೊಳಲ್ಕೆರೆ ತಾಲ್ಲೂಕಿನಲ್ಲಿ ಕುಡಿಯುವ ನೀರಿಗೆ ಯಾವುದೇ ಸಮಸ್ಯೆ ಉದ್ಭವಿಸುವುದಿಲ್ಲ. 2022 ಆಗಸ್ಟ್ 15 ರೊಳಗೆ ಈ ಯೋಜನೆಯಡಿ ಕ್ಷೇತ್ರದ ಹಳ್ಳಿಗಳಿಗೆ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲಾಗುವುದು ಎಂದು ಹೇಳಿ ಹೊಳಲ್ಕೆರೆ ತಾಲ್ಲೂಕಿನ 215 ಗ್ರಾಮೀಣ ಜನವಸತಿ ಪ್ರದೇಶಗಳನ್ನು ಒಳಗೊಂಡು ಹೊಳಲ್ಕೆರೆ ಪಟ್ಟಣದ ಮನೆ ಮನೆಗಳಿಗೆ ನಳ ಸಂಪರ್ಕ ಕಲ್ಪಿಸಿ, ಸಮರ್ಪಕ ಕುಡಿಯುವ ನೀರು ಪೂರೈಸಲು ಯೋಜನೆ ರೂಪಿಸಲಾಗಿದೆ ಎಂದರು.
ಇದೇ ರೀತಿ ಕ್ಷೇತ್ರದಲ್ಲಿ ವಿದ್ಯುತ್ ಸಮಸ್ಯೆ ಸಹಾ ಹೆಚ್ಚಾಗಿದ್ದು ಕ್ಷೇತ್ರದಲ್ಲಿ ಎರಡು ಕಡೆಗಳಲ್ಲಿ ವಿದ್ಯುತ್ ಸಂಗ್ರಹಣಾ ಕ್ಷೇಂದ್ರವನ್ನು ಸ್ಥಾಪನೆ ಮಾಡಲಾಗುವುದು ಇದಕ್ಕೂ ಸಹಾ ಸರ್ಕಾರ ಮಂಜೂರತಿ ನೀಡಿದ್ದು ಅನುದಾನವನ್ನು ಸಹಾ ನೀಡಲು ಸಮ್ಮತಿಸಿದೆ ಇದರ ಬಗ್ಗೆ ಮುಂದಿನ ದಿನದಲ್ಲಿ ನಿಗಮದವರು ಸರ್ವೆ ಕಾರ್ಯವನ್ನು ಮಾಡುವುದರ ಮೂಲಕ ಕ್ರಿಯಾ ಯೋಜನೆಯನ್ನು ತಯಾರಿಸಲಿದ್ದು ಶರಾವತಿಯಿಂದ ನೇರವಾಗಿ ಹೊಳಲ್ಕೆರೆಗೆ ವಿದ್ಯುತ್ ಸರಬರಾಜು ಮಾಡುವ ಬಗ್ಗೆ ಕಾರ್ಯ ನಡೆಯಲಿದೆ ಎಂದರು.
ಗೋಷ್ಟಿಯಲ್ಲಿ ವೀರಶೈವ ಸಮಾಜದ ಅಧ್ಯಕ್ಷ ಎಲ್.ಬಿ.ರಾಜಶೇಖರ್, ಹೊಳಲ್ಕೆರೆ ಬಿಜೆಪಿ ಮುಖಂಡರಾದ ಸಿದ್ದೇಶ್, ವಕ್ತಾರರಾದ ದಗ್ಗೆ ಶಿವಪ್ರಕಾಶ್, ನಾಗರಾಜ್ ಬೇದ್ರೇ ಸೇರಿದಂತರ ಇತರರು ಭಾಗವಹಿಸಿದ್ದರು.