ಪೊಲೀಸರಿಗಿದು ಸಂತಸದ ಸುದ್ದಿ; ವಾರಕ್ಕೊಮ್ಮೆ ಆರಾಮ..!

ಬೆಂಗಳೂರು: ಹಗಲಿರುಳೆನ್ನದೆ ಒತ್ತಡದಲ್ಲೇ ಕೆಲಸ ಮಾಡುತ್ತಿರುವ ಕರ್ನಾಟಕ ರಾಜ್ಯ ಪೊಲೀಸರಿಗೆ ಇದು ಸಂತಸದ ಸುದ್ದಿ. ಸಿಬ್ಬಂದಿ ನಿರಾಳರಾಗಿ ಕೆಲಸ ಮಾಡುವ ನಿಟ್ಟಿನಲ್ಲಿ ರಾಜ್ಯ ಪೊಲೀಸ್​ ಮಹಾನಿರ್ದೇಶಕರು ಇಂಥದ್ದೊಂದು ಅನುಕೂಲಕ್ಕೆ ಮತ್ತೊಮ್ಮೆ ಸೂಚನೆ ನೀಡಿದ್ದಾರೆ.

ಹೌದು.. ರಜೆ ಇದ್ದರೂ ಕೆಲಸ ಮಾಡುವ ಸಜೆ ಅನುಭವಿಸುತ್ತಿದ್ದ ಪೊಲೀಸರಿಗೆ ವಾರಕ್ಕೊಮ್ಮೆ ಇರುವ ರಜೆಯನ್ನು ಕಡ್ಡಾಯವಾಗಿ ನೀಡಬೇಕು ಎಂದು ಡಿಜಿಪಿ ಪ್ರವೀಣ್​ ಸೂದ್​ ಸುತ್ತೋಲೆಯನ್ನು ಹೊರಡಿಸಿದ್ದಾರೆ. ಪೊಲೀಸರಿಗೆ ವಾರಕ್ಕೊಂದು ರಜೆ ಅರ್ಥಾತ್ ವಾರದ ರಜೆ ಇದ್ದರೂ ಠಾಣಾಧಿಕಾರಿಗಳು ಅದಕ್ಕೆ ಅವಕಾಶ ಮಾಡಿಕೊಡುತ್ತಿಲ್ಲ ಎಂಬ ದೂರನ್ನು ಕೆಲವು ಪೊಲೀಸರು ಪತ್ರಮುಖೇನ ಡಿಜಿಪಿ ಅವರಿಗೆ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಅವರು ಈ ಸುತ್ತೋಲೆ ಹೊರಡಿಸಿದ್ದಾರೆ.

ಪೊಲೀಸರಿಗೆ ವಾರದಲ್ಲಿ ಒಂದು ದಿನ ವಾರದ ರಜೆ ಕಡ್ಡಾಯ ಎಂದು ಈ ಹಿಂದೆಯೂ ಆದೇಶ ನೀಡಲಾಗಿತ್ತು. ಆದರೆ ಅದರ ಪಾಲನೆ ಸರಿಯಾಗಿ ಆಗದಿರುವ ಕಾರಣ ಅಸಮಾಧಾನ ವ್ಯಕ್ತವಾದ್ದರಿಂದ ಈಗ ಮತ್ತೊಮ್ಮೆ ವಾರದ ರಜೆ ಕಡ್ಡಾಯಗೊಳಿಸಿ ಸುತ್ತೋಲೆ ನೀಡಲಾಗಿದೆ. ಆ ಬಗ್ಗೆ ನಗರ ಪೊಲೀಸ್ ಆಯುಕ್ತರು, ವಲಯ ಐಜಿಪಿ ಹಾಗೂ ಜಿಲ್ಲಾ ಎಸ್​ಪಿಗಳಿಗೆ ಸೂಚನೆಗಳನ್ನು ನೀಡಲಾಗಿದೆ. ತುರ್ತು ಪರಿಸ್ಥಿತಿ ಹೊರತುಪಡಿಸಿ ಬೇರೆ ಎಲ್ಲ ಸಂದರ್ಭದಲ್ಲಿ ವಾರದ ರಜೆ ಕಡ್ಡಾಯ ಕೊಡಬೇಕು ಎಂದು ಇದರಲ್ಲಿ ಉಲ್ಲೇಖಿಸಲಾಗಿದೆ.

Leave a Reply

Your email address will not be published.