ಅಂತಿಮ ಪದವಿ ಪರೀಕ್ಷೆ ಆರಂಭ ; ಮೊದಲ ದಿನ ವಿದ್ಯಾರ್ಥಿಗಳು ಖುಷ್

ತುಮಕೂರು: ಕರೊನಾ ಆತಂಕದ ನಡುವೆಯೂ ಸುವ್ಯವಸ್ಥಿತವಾಗಿ ಪದವಿ ಪರೀಕ್ಷೆ ಆರಂಭಿಸುವ ಮೂಲಕ ತುಮಕೂರು ವಿಶ್ವವಿದ್ಯಾಲಯ ಮೆಚ್ಚುಗೆಗೆ ಪಾತ್ರವಾಗಿದೆ. ಜಿಲ್ಲೆಯ 36 ಪರೀಕ್ಷಾ ಕೇಂದ್ರದಲ್ಲಿ ಸಂಪೂರ್ಣ ಸುರಕ್ಷತೆಯಲ್ಲಿ ಮಂಗಳವಾರ ಪರೀಕ್ಷೆ ನಡೆಯಿತು.

ತುಮಕೂರು ವಿವಿ ಆಶ್ರಯದ ವಿವಿಧ ಕಾಲೇಜುಗಳಲ್ಲಿ ಅಂತಿಮ ವರ್ಷದ 17800 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡು ನಿರ್ಭೀತಿಯಿಂದ ಪರೀಕ್ಷೆ ಬರೆದರು. ಕಾಲೇಜುಗಳಲ್ಲಿ ಕರೊನಾ ನಿಯಂತ್ರಣಕ್ಕೆ ಕೈಕೊಂಡ ಕ್ರಮಕ್ಕೆ ವಿದ್ಯಾರ್ಥಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.
ಪರೀಕ್ಷೆಯ ಮೊದಲ ದಿನವಾದ ಮಂಗಳವಾರ ಭೌತಶಾಸ, ಅರ್ಥಶಾಸ, ಕಾಮರ್ಸ್ ವಿಷಯಗಳಿಗೆ ಪರೀಕ್ಷೆ ನಡೆಯಿತು. ಮಕ್ಕಳು ಕೊಠಡಿಯಲ್ಲಿ ಪರಸ್ಪರ ಅಂತರ ಕಾಯ್ದುಕೊಂಡು ಪರೀಕ್ಷೆ ಬರೆದರು ಆದರೆ, ಹೊರಬಂದ ನಂತರ ಪರಸ್ಪರ ಅಂತರ ಮರೆತು ಬೆರೆತರು. ಪರೀಕ್ಷೆ ಆರಂಭಕ್ಕೂ ಪೂರ್ವದಲ್ಲಿ ವಿವಿ ತಲಾ 8 ಜನ ಸದಸ್ಯರಿದ್ದ ಎರಡು ಟಾಸ್ಕ್ ಪೋರ್ಸ್ ರಚಿಸಿ ಎಲ್ಲ ಕಾಲೇಜಿಗೂ ಭೇಟಿ ನೀಡಿ ವರದಿ ಪಡೆಯಲಾಗಿತ್ತು, ಕರೊನಾ ನಿಯಂತ್ರಣಕ್ಕೆ ಮುಂಜಾಗ್ರತಾ ಕ್ರಮಕೈಗೊಂಡಿರುವ ಖಾತ್ರಿ ಪಡಿಸಿಕೊಳ್ಳಲಾಗಿತ್ತು.

ಟಾಸ್ಕ್‌ಪೋರ್ಸ್ ಸರ್ಕಾರಿ ಪದವಿ ಕಾಲೇಜಗಳ ಪರೀಕ್ಷಾ ಕೇಂದ್ರಗಳಲ್ಲಿ ಕರೊನಾ ನಿಯಂತ್ರಣಕ್ಕೆ ಕೈಗೊಂಡ ಮುಂಜಾಗ್ರತಾ ಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿತ್ತು. ಖಾಸಗಿ ಕಾಲೇಜುಗಳಿಗೂ ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಸೂಚಿಸಲಾಗಿತ್ತು. ತುಮಕೂರು ವಿವಿ ಕಲಾ ಹಾಗೂ ವಿಜ್ಞಾನ ಕಾಲೇಜು ಮುಂಭಾಗ ಮಂಗಳವಾರ ಬೆಳಗ್ಗೆಯೇ ಸಾವಿರಾರು ವಿದ್ಯಾರ್ಥಿಗಳು ಜಮಾಯಿಸಿದ್ದರು. ಪರೀಕ್ಷೆಗೂ ಒಂದು ಗಂಟೆ ಪೂರ್ವದಲ್ಲಿ ವಿದ್ಯಾರ್ಥಿಗಳನ್ನು ಒಳಬಿಡಲಾಯಿತು. ಬಹುದಿನಗಳಿಂದ ತರಗತಿಯನ್ನೇ ಮರೆತಿದ್ದ ವಿದ್ಯಾರ್ಥಿಗಳು ಆತಂಕದಿಂದ ಪರೀಕ್ಷಾ ಕೇಂದ್ರದೊಳಗೆ ತೆರಳಿ, ಸಂಭ್ರಮದಿಂದ ವಾಪಸಾದರು.

ಸೆ.23ರವರೆಗೂ ವಿವಿಧ ವಿಷಯಗಳ ಪರೀಕ್ಷೆ ನಡೆಯಲಿದ್ದು ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಆನ್‌ಲೈನ್ ತರಗತಿ ಮುಂದುವರಿಯಲಿದೆ, ಪರೀಕ್ಷಾ ಕೆಲಸಗಳಿಗೆ ಕಾಯಂ ಉಪನ್ಯಾಸಕರನ್ನು ಬಳಸಿಕೊಳ್ಳಲಾಗಿತ್ತು. ಹಿರಿಯ ಅತಿಥಿ ಉಪನ್ಯಾಸಕರನ್ನು ಮೇಲ್ವಿಚರಣೆಗೆ ನಿಯೋಜಿಸಲಾಗಿತ್ತು. ಮೊದಲ ದಿನದ ಪರೀಕ್ಷೆ ನಿರ್ವಿಘ್ನವಾಗಿ ಪೂರ್ಣವಾಗಿದ್ದು ಇನ್ನುಳಿದ ವಿಷಯಗಳ ಪರೀಕ್ಷೆಗಳಿಗೂ ಅಗತ್ಯ ಪೂರ್ವ ಸಿದ್ಧತೆಗಳನ್ನು ತುಮಕೂರು ವಿವಿ ಪರೀಕ್ಷಾಂಗ ವಿಭಾಗ ಮಾಡಿಕೊಂಡಿದೆ. ವಿದ್ಯಾರ್ಥಿಗಳು ಧೈರ್ಯವಾಗಿ ಬಂದು ಪರೀಕ್ಷೆ ಬರೆಯಬಹುದು.

Leave a Reply

Your email address will not be published.