ನಿತ್ಯವಾಣಿ,ಚಿತ್ರದುರ್ಗ, ಡಿ,5: ಸಂಗೀತ ಎಂದರೆ ಕೇವಲ ಮನರಂಜನೆಯಲ್ಲ. ಸಂಗೀತ ಸಂಸ್ಕಾರ ನೀಡುವುದಲ್ಲದೆ ನಮ್ಮ ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುತ್ತದೆ ಎಂದು ಕಬೀರಾನಂದ ಆಶ್ರಮದ ಪೀಠಾಧ್ಯಕ್ಷರಾದ ಶಿವಲಿಂಗಾನಂದ ಮಹಾಸ್ವಾಮಿಗಳು ನುಡಿದರು.
ಅವರು ಅಖಿಲ ಕರ್ನಾಟಕ ಗಾನಯೋಗಿ ಸಂಗೀತ ಪರಿಷತ್ ಜಿಲ್ಲಾ ಘಟಕ ಚಿತ್ರದುರ್ಗ ವತಿಯಿಂದ ನಗರದ ಮಠದಕುರುಬರಹಟ್ಟಿಯ ಬಸವೇಶ್ವರ ವಿದ್ಯಾ ಸಂಸ್ಥೆಯಲ್ಲಿ ಇಂದು ಚಿತ್ರದುರ್ಗ ಜಿಲ್ಲಾ ಮತ್ತು ತಾಲ್ಲೂಕು ಘಟಕದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಶ್ರೀ ಗಳು ಸಂಗೀತ ಮನಸಿಗೆ ಮುದ ನೀಡುವುದರೊಂದಿಗೆ ಮಾನಸಿಕ ನೆಮ್ಮದಿ ನೀಡುತ್ತದೆ ಆ ನಿಟ್ಟಿನಲ್ಲಿ ಅಖಿಲ ಕರ್ನಾಟಕ ಗಾನಯೋಗಿ ಸಂಗೀತ ಪರಿಷತ್ ಸಂಗೀತ ಕಲೆ ಹಾಗೂ ಗುರುಪರಂಪರೆಯನ್ನು ಮುಂದುವರೆಸಿಕೊಂಡು ಹೋಗುತ್ತಿರುವುದು ತುಂಬಾ ಸಂತೋಷದ ವಿಚಾರ.,ಇಂದಿನ ಯುವ ಪೀಳಿಗೆ ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರು ಹೋಗದೆ ದೇಸಿ ಸಂಗೀತ ಕಲೆಯನ್ನು ಮೈಗೂಡಿಸಿಕೊಂಡು ನಮ್ಮ ಮೂಲ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕಡೆಗೆ ಪ್ರತಿಯೊಬ್ಬರು ಶ್ರಮಿಸಬೇಕಿದೆ ಎಂದು ನುಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಅಖಿಲ ಕರ್ನಾಟಕ ಗಾನಯೋಗಿ ಸಂಗೀತ ಪರಿಷತ್ತಿನ ರಾಜ್ಯಾಧ್ಯಕ್ಷರಾದ ಚನ್ನವೀರ ಶಾಸ್ತ್ರೀ ಹಿರೇಮಠ ಕಡಣಿ ಅವರು ಮಾತನಾಡಿ ಗಾನಯೋಗಿ ಪಂ.ಪಂಚಾಕ್ಷರಿ ಗವಾಯಿಗಳು ಮತ್ತು ಪಂ.ಪುಟ್ಟರಾಜ ಕವಿ ಗವಾಯಿಗಳವರ ಪ್ರೇರಣೆಯಿಂದ ಪ್ರಾರಂಭವಾದ ಸಂಗೀತ ಪರಿಷತ್ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಸಂಘಟನೆ ಮಾಡುವುದರೊಂದಿಗೆ ಸಂಗೀತಗಾರರ,
ಕಲಾವಿದರ ಸಮಸ್ಯೆಗಳನ್ನು ಸಂಘಟನೆಯ ಮೂಲಕ ಬಗೆಹರಿಸುವುದು ಈ ನಿಟ್ಟಿನಲ್ಲಿ ಸರ್ಕಾರದ ಮಟ್ಟದಲ್ಲಿ ಎಲ್ಲಾ ಪ್ರಕಾರದ ಕಲಾವಿದರಿಗೆ ನ್ಯಾಯ ಕೊಡಿಸಬೇಕಿದೆ .ಅಲ್ಲದೆ ಪ್ರತಿ ವರ್ಷ ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಸಂಗೀತ ಸಮ್ಮೇಳನಗಳನ್ನು ಮಾಡುವುದಕ್ಕೆ ಸರ್ಕಾರ ಅನುದಾನವನ್ನು ನೀಡಬೇಕೆಂದು ಆಗ್ರಹಿಸಲು ನಮ್ಮಲ್ಲಿ ಸಂಘಟನೆಯ ಕೊರತೆಯಿದೆ. ನಾವು ಕೇವಲ ಸಮಾರಂಭದಲ್ಲಿ ಹಾಡಿ ಬಂದುಬಿಡುತ್ತೇವೆ.ಸಂಘಟನೆಯ ಗೋಜಿಗೆ ಹೋಗದೆ ಇರವುದರಿಂದ ನಮ್ಮಲ್ಲಿ ಒಗ್ಗಟ್ಟಿನ ಕೊರತೆಯಿಂದ ನಮಗೆ ಹಿನ್ನಡೆಯಾಗಿದೆ.ಕನ್ನಡ ಸಾಹಿತ್ಯ ಪರಿಷತ್ ಮಾದರಿಯಲ್ಲಿ ನಮ್ಮ ಪರಿಷತ್ ನ್ನ ಸಂಘಟಿಸಿ ಆ ರೀತಿ ಅಭಿವೃದ್ಧಿ ಹೊಂದುತ್ತಾ ಸಾಗಬೇಕೆಂಬ ಅನೇಕ ಸಲಹೆಗಳನ್ನು ನೀಡಿದರು.ಸರ್ಕಾರ ಎಲ್ಲ ಶಾಲಾ ಕಾಲೇಜುಗಳಲ್ಲಿ ಸಂಗೀತ ಶಿಕ್ಷಕರು ಸೇರಿದಂತೆ ರಂಗಶಿಕ್ಷಕರು,ಚಿತ್ರಕಲಾ ಶಿಕ್ಷಕರನ್ನು ನೇಮಕಾತಿ ಮಾಡುವುದರೊಂದಿಗೆ ಲಲಿತ ಕಲೆಗಳನ್ನು ನಮ್ಮ ಸಂಗೀತ ಪರಂಪರೆಯನ್ನು ಪ್ರೋತ್ಸಾಹಿಸಬೇಕಿದೆ ಎಂದು ತಿಳಿಸಿದರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಕೆ.ಎಂ.ವೀರೇಶ್ ಮಾತನಾಡಿ ಸಂಗೀತ ಕಲೆ ಒತ್ತಡದಿಂದ ಬದುಕುವ ಮನುಷ್ಯನಿಗೆ ಮಾನಸಿಕ ನೆಮ್ಮದಿ ಮತ್ತು ಆರೋಗ್ಯ ನೀಡುತ್ತದೆ. ಆ ನಿಟ್ಟಿನಲ್ಲಿ ಮಕ್ಕಳಿಗೆ ಕಲೆಯ ಅಭಿರುಚಿ ಬೆಳೆಯುವಂತೆ ಪ್ರೋತ್ಸಾಹಿಸಬೇಕಿದೆ ಎಂದು ಹೇಳಿದ ಅವರು ಕಸಾಪ, ಶಸಾಪ ಮತ್ತು ಗಾನಯೋಗಿ ಸಂಗೀತ ಪರಿಷತ್ ಮೂರು ಸಂಘಟನೆಗಳು ಒಟ್ಟಾಗಿ ನಾಡು,ನುಡಿಗಾಗಿ ಬರುವ ದಿನಗಳಲ್ಲಿ ಅರ್ಥ ಪೂರ್ಣ ಕಾರ್ಯಕ್ರಮ ಆಯೋಜಿಸೋಣ ಎಂದು ಹೇಳಿದರು.
ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಧ್ಯಕ್ಷರಾದ ಮಹಡಿ ಶಿವಮೂರ್ತಿ ಅವರು ಗಾನಯೋಗಿ ಸಂಗೀತ ಪರಿಷತ್ತಿನ ಎಲ್ಲ ಚಟುವಟಿಕೆಗಳಿಗೆ ಮಹಾ ಸಭಾ ಸಹಾಯ, ಸಹಕಾರ ನೀಡಬಯಸುತ್ತದೆ. ನಮ್ಮ ಮಹಡಿ ಮೋಟರ್ಸ್ ಕೊಠಡಿಯನ್ನು ಕಛೇರಿಯ ಕಲಾಪಗಳಿಗೆ ಬಳಸಿಕೊಳ್ಳಲು ಸಲಹೆ ನೀಡಿದರು. ಗಾಯನ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆ ಮಾಡುವ ಮೂಲಕ ನಾಡಿಗೆ ಸೇವೆ ಸಲ್ಲಿಸುತ್ತಿರುವ ತೋಟಪ್ಪ ಉತ್ತಂಗಿ ಅವರಿಗೆ ಕನ್ನಡ ರಾಜ್ಯೋತ್ಸವ ರಾಜ್ಯ ಪ್ರಶಸ್ತಿಗಾಗಿ ಮನವಿ ಸಲ್ಲಿಸಲಾಗುವುದೆಂದರು.
ಚಿತ್ರದುರ್ಗ ಜಿಲ್ಲಾ ಘಟಕದ ಅಧ್ಯಕ್ಷರಾದ ತೋಟಪ್ಪ ಉತ್ತಂಗಿ ಸಭೆಯ ಅಧ್ಯಕ್ಷತೆ ವಹಿಸಿ ನಮ್ಮ ಸಂಘಟನೆ ಇದೀಗ ಆರಂಭವಾಗಿದೆ .ಎಲ್ಲರೂ ಸೇರಿ ಸಂಘಟನೆ ಮುಖಾಂತರ ಈ ಪರಿಷತ್ ನ್ನು ಕಟ್ಟಬೇಕೆಂದು ಕೇಳಿಕೊಂಡರು. ಪರಿಷತ್
ಉಪಾಧ್ಯಕ್ಷರಾದ ಎಸ್. ವಿ. ಗುರುಮೂರ್ತಿ, ಯೋಗಾಚಾರ್ಯ ಎಲ್.ಎಸ್. ಚಿನ್ಮಯಾನಂದ,ಸಾಹಿತಿ ಜಾನಪದ ಪರಿಷತ್ ಜಿಲ್ಲಾ ಕಾರ್ಯದರ್ಶಿ ನಿರಂಜನ ದೇವರಮನೆ,ಬಸವೇಶ್ವರ ವಿದ್ಯಾಸಂಸ್ಥೆಯ ಕಾರ್ಯದರ್ಶಿ ವಿ,ಕೆ.ಶಂಕರಪ್ಪ, ಜಿಲ್ಲಾ,ಗೌರವ ಸಲಹೆಗಾರರಾದ ಕಾಲ್ಕೆರೆ ಚಂದ್ರಪ್ಪ,ಕಲಾವಿದ ಹರೀಶ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಡಿ.ಓ.ಮುರಾರ್ಜಿ,ಗಾಯಕರಾದ ಮನು, ಜಗದೀಶ್ ಸೇರಿದಂತೆ ಹಿರಿ ಕಿರಿಯ ಕಲಾವಿದರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಗಾನಯೋಗಿ ಸಂಗೀತ ಪರಿಷತ್ ಸದಸ್ಯರಿಂದ ಗೀತ ಗಾಯನ ನಡೆಯಿತು. ಆಶ್ರಮದ ಮಕ್ಕಳು,ಸಾಹಿತಿಗಳು ಕಲಾಪ್ರೇಮಿಗಳು ಹಾಜರಿದ್ದರು.ಸುಮಾರಾಜಶೇಖರ್ ಸ್ವಾಗತಿಸಿದರು. ಶೋಭಾಮಲ್ಲಿಕಾರ್ಜುನ್ ಕಾರ್ಯಕ್ರಮ ನಿರೂಪಿಸಿದರು.ಡಿ.ಓ.ಮುರಾರ್ಜಿ ಶರಣು ಸಮರ್ಪಣೆ ಮಾಡಿದರು.