ಸಾರಿಗೆ ವಲಯದಲ್ಲಿ ಕನ್ನಡ ಜಾಗೃತಿ ಅಭಿಯಾನ ಕಾರ್ಯಕ್ರಮವನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಜಿಲ್ಲಾ ಕನ್ನಡ ಜಾಗೃತಿ ಬಳಗ ಹಮ್ಮಿಕೊಳ್ಳಲಾಗಿತ್ತು

ನಿತ್ಯವಾಣಿ,ಚಿತ್ರದುರ್ಗ,(ಆ.25) : ರಾಜ್ಯಕ್ಕೆ ಕರ್ನಾಟಕವೆಂದು ನಾಮಕರಣ ಮಾಡಿದ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಶ್ರಮಿಸಿದ ಹಾಗೂ ಉಳುವವನಿಗೆ ಭೂಮಿ ಕೊಡಿಸಿದ ಮಾಜಿ ಮುಖ್ಯಮಂತ್ರಿ ದಿ.ದೇವರಾಜು ಅರಸು ರವರ ಜನ್ಮ ದಿನದ ಪ್ರಯುಕ್ತ, ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆಯಾಗಬೇಕು. ಕರ್ನಾಟಕ ಸರ್ಕಾರ ನವಂಬರ್ 2020 ರಿಂದ ಅಕ್ಟೋಬರ್ 2021 ರವರೆಗೆ ಕನ್ನಡ ಕಾಯಕ ವರ್ಷ ಯೋಜನೆಯಡಿ ಸಾರಿಗೆ ವಲಯದಲ್ಲಿ ಕನ್ನಡ ಜಾಗೃತಿ ಅಭಿಯಾನ ಕಾರ್ಯಕ್ರಮವನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಜಿಲ್ಲಾ ಕನ್ನಡ ಜಾಗೃತಿ ಬಳಗ ಹಮ್ಮಿಕೊಳ್ಳಲಾಗಿತ್ತು.
ಸಾರಿಗೆ ವಲಯದ ಮುಖೇನ ಇಂದು ತೀವ್ರಗತಿಯಲ್ಲಿ ರಾಜ್ಯದ ಹೊರಗಿನ ಜನತೆಯ ಆಗಮನ, ನಿರ್ಗಮನ, ವಲಸೆ ಹೆಚ್ಚುತ್ತಿದೆ. ಸಾರಿಗೆ ವಲಯದಲ್ಲೂ ಕನ್ನಡ ಭಾಷೆಯ ಬಳಕೆ ಕುಂದದೇ ಗಟ್ಟಿಯಾಗಿ ನೆಲೆಯೂರಬೇಕು ಎಂಬ ಹಕ್ಕೊತ್ತಾಯದ ಮನವಿಯನ್ನು ಚಿತ್ರದುರ್ಗ ಕ.ರಾ.ರ.ಸಾ ನಿಗಮದ ಪ್ರಭಾರೇ ವಿಭಾಗೀಯ ನಿಯಂತ್ರಣಾಧಿಕಾರಿ ಹೆಚ್.ಬಿ.ಚಂದ್ರಪ್ಪ ಇವರಿಗೆ ಸಲ್ಲಿಸಲಾಯಿತು.
ಮನವಿ ಸ್ವೀಕರಿಸಿ ಮಾತನಾಡಿದ ಅವರು ಸಾರಿಗೆ ನಿಗಮದಲ್ಲಿ ಬಹುತೇಕ ಕನ್ನಡ ಭಾಷೆಯನ್ನು ಬಳಸಲಾಗುತ್ತಿದೆ. ಇನ್ನೂ ಹೆಚ್ಚಿನದಾಗಿ ಕನ್ನಡ ಭಾಷೆಯನ್ನು ಕಲಿಯುವ, ಕಲಿಸುವ ಪ್ರಯತ್ನ ನಡೆಸಲಾಗುವುದು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಈ ಕಾರ್ಯ ಶ್ಲಾಘನೀಯವಾದುದು. ನಮ್ಮ ಸಾರಿಗೆ ಸಂಸ್ಥೆಯೂ ಕೂಡ ಕನ್ನಡದ ಕೈಂಕರ್ಯಕ್ಕೆ ಸದಾ ಕೈಜೋಡಿಸುತ್ತೇವೆ. ಕನ್ನಡ ಜಾಗೃತಿ ಬಳಗದ ಈ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲಿ ಎಂದರು.
ಕನ್ನಡ ನಾಡಿನಲ್ಲಿ ನೆಲೆಸಿರುವ ಪ್ರತಿಯೊಬ್ಬರೂ ಕನ್ನಡದಲ್ಲಿಯೇ ಮಾತನಾಡಬೇಕು. ಸಂವಹನ ನಡೆಯುವಷ್ಟು ಕನ್ನಡ ಕಲಿತು ಮಾತನಾಡಬೇಕು ಎಂಬುದು ಪ್ರಾಧಿಕಾರದ ಸದಾಶಯವಾಗಿದೆ ಎಂದು ಕನ್ನಡ ಜಾಗೃತಿ ಬಳಗದ ಅಧಿಕಾರೇತರ ಸದಸ್ಯ, ರಂಗಕರ್ಮಿ ಕೆ.ಪಿ.ಎಂ ಗಣೇಶಯ್ಯ ತಿಳಿಸಿದರು.
ಈಗಾಗಲೇ ಮಾಧ್ಯಮ, ಬ್ಯಾಂಕು, ನ್ಯಾಯಾಲಯ ಮುಂತಾದ ಕ್ಷೇತ್ರಗಳಲ್ಲಿ ಕಡ್ಡಾಯವಾಗಿ ಕನ್ನಡ ಭಾಷೆ ವ್ಯಾವಹಾರಿಕ ಭಾಷೆಯಾಗಿ, ಅನ್ನದ ಭಾಷೆಯಾಗಿ ಬಳಸಬೇಕೆಂದು ಮನವಿ ಮಾಡಲಾಗಿದೆ ಎಂದು ಕ.ಜಾ.ಬ ಸದಸ್ಯ ಟಿ.ಮಧು ಹೇಳಿದರು. ಕರಾರಸಾ ನಿಗಮದ ಆಡಳಿತಾಧಿಕಾರಿ ಲೋಕೇಶ್, ಸೂಪರ್‍ಡೆಂಟ್ ಜಿ.ಟಿ.ಬಸವರಾಜ್, ಆಪ್ತಕಾರ್ಯದರ್ಶಿ ಮಂಜುಳ, ಟಿ.ನಾಗೇಂದ್ರಪ್ಪ, ಮದಕರಿಪುರದ ಕಾರಂಜಿ ಶ್ರೀನಿವಾಸ್‍ಮೂರ್ತಿ ಮುಂತಾದವರು ಉಪಸ್ಥಿತರಿದ್ದರು

Leave a Reply

Your email address will not be published.