ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆ ಹಣ ಸುರಿದು ಹಣ ಮಾಡುವಂಥ ರಾಜಕೀಯ ಚುನಾವಣೆಯಲ್ಲ : ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಶೇಖರಗೌಡ ಮಾಲಿಪಾಟೀಲ

ಸಾಣೇಹಳ್ಳಿ, ಡಿಸೆಂಬರ್ 16; ಇಲ್ಲಿನ ಶ್ರೀಮಠದ ಡಾ. ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳವರನ್ನು ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಶೇಖರಗೌಡ ಮಾಲಿಪಾಟೀಲ ಭೇಟಿ ಮಾಡಿ ಆಶೀರ್ವಾದ ಪಡೆದುಕೊಂಡರು. ಇದೇ ವೇಳೆ ಶೇಖರಗೌಡರ ಪ್ರಣಾಳಿಕೆಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆ ಹಣ ಸುರಿದು ಹಣ ಮಾಡುವಂಥ ರಾಜಕೀಯ ಚುನಾವಣೆಯಲ್ಲ. ಅಂಥ ಮನಸ್ಥಿತಿಯವರು ಖಂಡಿತಾ ಈ ಕ್ಷೇತ್ರಕ್ಕೆ ಬರಬಾರದು. ಕನ್ನಡ ನಾಡು, ನುಡಿ, ಜಲಗಳ ಸಂರಕ್ಷಣೆ ಮತ್ತು ಸಂವರ್ಧನೆಯ ಸದ್ಭಾವನೆ ಪರಿಷತ್ತಿನ ಚುಕ್ಕಾಣಿ ಹಿಡಿದವರಿಗೆ ಇರಬೇಕು. ಅಧ್ಯಕ್ಷರಾಗಿ ಗೊರುಚ ಮಾಡಿದ ಕೆಲಸ ಕಾರ್ಯಗಳು ಶ್ಲಾಘನೀಯವಾದವು. ಶೇಖರಗೌಡರ ಈ ಪ್ರಣಾಳಿಕೆ ರಾಜಕೀಯ ಪ್ರಣಾಳಿಕೆಯಾಗದೆ ಆಯ್ಕೆಯಾಗಿ ಬಂದಲ್ಲಿ ಇವುಗಳನ್ನು ಜಾರಿಗೊಳಿಸುವ ಪ್ರಾಮಾಣಿಕ ಪ್ರಯತ್ನ ಮಾಡುವರೆಂಬ ವಿಶ್ವಾಸ ನಮಗಿದೆ ಎಂದರು.
ಶೇಖರಗೌಡ ಮಾತನಾಡಿ ನಾನು ಆಯ್ಕೆಯಾಗಿ ಬಂದಲ್ಲಿ ತಾಲ್ಲೂಕು ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಕನ್ನಡ ಸಾಹಿತ್ಯ ಭವನ ನಿರ್ಮಾಣ, ಕನ್ನಡ ಶಾಲೆಗಳ ಸ್ಥಾಪನೆ, ಪ್ರಾಯೋಗಿಕವಾಗಿ ಬೆಂಗಳೂರಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಮಾದರಿ ಕನ್ನಡ ಶಾಲೆಯ ಸ್ಥಾಪನೆ, ಪ್ರತಿವರ್ಷ ರಾಜ್ಯದ ನಾಲ್ಕು ಕಂದಾಯ ವಿಭಾಗಗಳಲ್ಲಿ ವಿವಿಧ ಸಾಹಿತ್ಯ, ಸಾಂಸ್ಕøತಿಕ ಸಮಾವೇಶಗಳ ಆಯೋಜನೆ, ರಾಜ್ಯದ ವಿವಿದೆಡೆ ಉದಯೋನ್ಮುಖ ಹಾಗೂ ಯುವ ಬರಹಗಾರರ ಕಮ್ಮಟಗಳ ಆಯೋಜನೆ, ವಚನ ಸಾಹಿತ್ಯ, ದಾಸ ಸಾಹಿತ್ಯ, ನಾಟಕ ಸಾಹಿತ್ಯ, ಮಕ್ಕಳ ಸಾಹಿತ್ಯ ಹಾಗೂ ಕನ್ನಡ ಪರಂಪರೆಯ ಪೂರ್ವಸೂರಿಗಳ ಚಿಂತನೆಗಳ ಸಮಾವೇಶ, ಹಳೆಗನ್ನಡ ಹಾಗೂ ಆಧುನಿಕ ಸಾಹಿತ್ಯದ ಮರು ಓದು, ಮೌಲಿಕ ಗ್ರಂಥಗಳ ಮರುಮುದ್ರಣ, ಪರಿಷತ್ ಪ್ರಕಟಣೆಗಳ ಡಿಜಟಲೀಕರಣ ಹಾಗೂ ಆನ್ ಲೈನ್ ಮಾರಾಟ ವ್ಯವಸ್ಥೆಯಂಥಹ ಹಲವಾರು ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುವುದು. ಈ ಹಿನ್ನೆಲೆಯಲ್ಲಿ ನನ್ನನ್ನು ಆಯ್ಕೆ ಮಾಡಬೇಕೆಂದು ಮನವಿ ಮಾಡಿಕೊಂಡರು.
ಇದೇ ಸಂದರ್ಭದಲ್ಲಿ ದಾವಣಗೆರೆಯ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಂಜುನಾಥ ಕುರ್ಕಿ, ನಿಕಟಪೂರ್ವ ಅಧ್ಯಕ್ಷ ಏ ಆರ್ ಉಜ್ಜಿನಪ್ಪ, ಬೆಂಗಳೂರಿನ ಸಾಹಿತ್ಯ ಪರಿಚಾರಕ ಆರ್ ಜಿ ಹಳ್ಳಿ ನಾಗರಾಜ್, ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಗಳಾದ ಬೆಳ್ಳಪ್ಪ, ಹೊಸದುರ್ಗ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಕಾರ್ಯದರ್ಶಿ ನಾಗತಿಹಳ್ಳಿ ಮಂಜುನಾಥ್ ಹಾಲಿ ನಿರ್ದೇಶಕ ಹೆಚ್ ಎಸ್ ದ್ಯಾಮೇಶ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published.