ಮಹಾರಾಷ್ಟ್ರ ಗಡಿ ದಾಟಿ ಒಳ ನುಸುಳುವುದಾಗಿ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಪ್ರವೀಣ್‍ಕುಮಾರ್ ಶೆಟ್ಟಿ 

ಚಿತ್ರದುರ್ಗ: ಕನ್ನಡದ ಶಾಲು ಹಾಕಿಕೊಂಡಿರುವವರನ್ನು ನೋಡಿದರೆ ಥಳಿಸುತ್ತೇವೆನ್ನುವ ಮಹಾರಾಷ್ಟ್ರದ ಶಿವಸೇನೆ ಮತ್ತು ಎಂ.ಇ.ಎಸ್.ನವರ ಉದ್ದಟತನದ ಮಾತುಗಳನ್ನು ಸವಾಲಾಗಿ ಸ್ವೀಕರಿಸಿ ಮಾ.18 ರಂದು ಮಹಾರಾಷ್ಟ್ರ ಗಡಿ ದಾಟಿ ಒಳ ನುಸುಳುವುದಾಗಿ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಪ್ರವೀಣ್‍ಕುಮಾರ್ ಶೆಟ್ಟಿ  ಮರಾಠಿಗರಿಗೆ ಎಚ್ಚರಿಕೆಯ ಸಂದೇಶ ರವಾನಿಸಿದರು.

• ಪ್ರವಾಸಿ ಮಂದಿರದಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಶಿವಸೇನೆ ರಾಜಕೀಯ ಉದ್ದೇಶಕ್ಕಾಗಿ ಬೆಳಗಾವಿಯಲ್ಲಿ ಕನ್ನಡಿಗರ ಮೇಲೆ ದಬ್ಬಾಳಿಕೆ ನಡೆಸುತ್ತಿರುವುದನ್ನು ನೋಡಿಕೊಂಡು ಎಲ್ಲಿಯವರೆಗೂ ಸಹಿಸಿಕೊಂಡಿರಬೇಕು. ಅದಕ್ಕಾಗಿ ಮರಾಠಿಗರು ಮತ್ತು ಎಂ.ಇ.ಎಸ್.ಇವರುಗಳಿಗೆ ಎಚ್ಚರಿಕೆ ನೀಡುವುದಕ್ಕಾಗಿಯೇ ಬೆಳಗಾವಿಯ ಕಿತ್ತೂರು ರಾಣಿ ಚೆನ್ನಮ್ಮ ಪ್ರತಿಮೆ ಸಮೀಪದಿಂದ ನಾವುಗಳು ಮಹಾರಾಷ್ಟ್ರದ ಗಡಿದಾಟಿ ಹೋಗುತ್ತೇವೆ. ಈ ಹಿಂದೆ ಸಾಕಷ್ಟು ಬಾರಿ ಮರಾಠಿ ಭಾಷೆಗೆ ಮಸಿ ಬಳಿದು ಎಚ್ಚರಿಸಿದ್ದೇವೆ. ರಾಜ್ಯ ಮತ್ತು ಕೇಂದ್ರ ಸರ್ಕಾರ ಕನ್ನಡಿಗರ ಮೇಲೆ ದೌರ್ಜನ್ಯವೆಸಗುವ ಗೂಂಡಾಗಳನ್ನು ಬೆಳಗಾವಿಯಿಂದ ಒದ್ದೋಡಿಸಬೇಕಲ್ಲದೆ ಮಹಾರಾಷ್ಟ್ರದಲ್ಲಿರುವ ಕನ್ನಡಿಗರಿಗೆ ಸೂಕ್ತ ರಕ್ಷಣೆ ನೀಡುವಂತೆ ಒತ್ತಾಯಿಸಿದರು.
ಕನ್ನಡಿಗರನ್ನು ಕೆಣಕುತ್ತಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಬವ್‍ಠಾಕ್ರೆಯನ್ನು ಕೂಡಲೆ ಕೇಂದ್ರ ಸರ್ಕಾರ ವಜಾಗೊಳಿಸಬೇಕು. ಕನ್ನಡದ ಭಾವುಟ ತೆಗೆಯಲು ಬೆಳಗಾವಿಗೆ ದಂಡೆತ್ತಿ ಬರುತ್ತಿರುವುದನ್ನು ಸಹಿಕೊಳ್ಳುವುದಿಲ್ಲ. ಕರ್ನಾಟಕದ ರಾಜಕಾರಣಿಗಳು ಮರಾಠಿಗರ ಮತಗಳಿಕೆಗಾಗಿ ಕನ್ನಡಕ್ಕೆ ಅವಮಾನವಾದರೂ ಸಹಿಸಿಕೊಂಡು ಸುಮ್ಮನಿದ್ದಾರೆ.
ಸಂಗೊಳ್ಳಿರಾಯಣ್ಣ ಪ್ರತಿಮೆ ಎದುರು ಶಿವಾಜಿ ಪ್ರತಿಮೆ ತರಲು ಹೊರಟಿದ್ದಾರೆ. ಶಿವಾಜಿ ಮೇಲೆ ನಮಗೆ ನಿಜವಾಗಿಯೂ ಗೌರವವಿದೆ. ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿರಾಯಣ್ಣ ಇವರುಗಳೆಲ್ಲಾ ಹೋರಾಟಗಾರರಲ್ಲವೇನು ಎಂದು ಪ್ರವೀಣ್‍ಕುಮಾರ್‍ಶೆಟ್ಟಿ ಮರಾಠಿಗರನ್ನು ಖಾರವಾಗಿ ಪ್ರಶ್ನಿಸಿದರು.
ಕನ್ನಡಿಗರು, ಮರಾಠಿಗರ ನಡುವೆ ವಿಷಬೀಜ ಬಿತ್ತುವವರನ್ನು ಸುಮ್ಮನೆ ಬಿಡುವುದಿಲ್ಲ. ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳಿಂದಲೂ ನಮ್ಮ ಪದಾಧಿಕಾರಿಗಳು ಹೋರಾಟದಲ್ಲಿ ಭಾಗಿಯಾಗಲಿದ್ದಾರೆಂದು ತಿಳಿಸಿದರು.
ಕರವೆ ರಾಜ್ಯ ಉಪಾಧ್ಯಕ್ಷರುಗಳಾದ ಶಿವರಾಜುಗೌಡ, ಮಂಜೇಶ್, ರಾಜ್ಯ ಕಾರ್ಯದರ್ಶಿ ರಾಜಗಟ್ಟ ರವಿ, ಸಹ ಕಾರ್ಯದರ್ಶಿ ಲೋಕೇಶ್, ಬೆಂಗಳೂರು ನಗರಾಧ್ಯಕ್ಷ ರಮೇಶ್, ಮಿರಾಕಲ್ ಮಂಜು, ಮುರಳಿ, ಚಿತ್ರದುರ್ಗ ಜಿಲ್ಲಾಧ್ಯಕ್ಷ ಎಸ್.ಕೆ.ಮಹಾಂತೇಶ್ ಪತ್ರಿಕಾಗೋಷ್ಟಿಯಲ್ಲಿ ಹಾಜರಿದ್ದರು.

Leave a Reply

Your email address will not be published.