ಬೆಂಗಳೂರಿನಲ್ಲಿ ಕುರುಬರ ಘರ್ಜ‌ನೆ

ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ  ಕುರುಬರ ಘರ್ಜ‌ನೆ ಮೊಳಗಿತು.

ಕುರುಬರ ಎಸ್ ಟಿ ಹೋರಾಟ ಸಮಿತಿಯ 21 ದಿನಗಳ ಪಾದಯಾತ್ರೆಯ ಸಮಾರೋಪ ಸಮಾರಂಭದ ಅಂಗವಾಗಿ ಮಾದನಾಯಕನಹಳ್ಳಿಯ ಅಂತರರಾಷ್ಟ್ರೀಯ ವಸ್ತು ಪ್ರದರ್ಶನ ಮೈದಾನದಲ್ಲಿ ಬೃಹತ್ ಸಮಾವೇಶ ಜರುಗಿತು.

ಎಂಎಲ್ ಸಿ ಎಚ್.ವಿಶ್ವನಾಥ್ ಮಾತನಾಡಿ, ಕುರುಬ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಲು ಅಗತ್ಯ ವಾದ ಎಲ್ಲಾ ಪೂರಕ ಅಂಶಗಳನ್ನು ಹೊಂದಿರುವುದರಿಂದ ಯಾವ ಕುಲಶಾಸ್ತ್ರಿಯ ಅಧ್ಯಯನದ ಅಗತ್ಯ ಇಲ್ಲ. ಆದ್ದರಿಂದ ರಾಜ್ಯ ಸರ್ಕಾರ ಕೂಡಲೇ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು. ಕೇಂದ್ರ ಸರ್ಕಾರ ಅದನ್ನು ಒಪ್ಪಿ ಎಸ್ ಟಿ ಪಟ್ಟಿಗೆ ಸೇರ್ಪಡೆಮಾಡಬೇಕು ಎಂದು ಒತ್ತಾಯಿಸಿದರು.

ಕುರುಬ ಸಮಾಜ ಯಾರನ್ನು ತಮ್ಮ ತನು,ಮನ,ಧನ ಅರ್ಪಿಸಿ ಮುಖ್ಯಮಂತ್ರಿ ಮಾಡಿತೊ ಅವರು ಸಮಾವೇಶಕ್ಕೆ ಬಾರದಿರುವು ಅತೀವ ನೋವು ತಂದಿದೆ ಎಂದು ಸಿದ್ದರಾಮಯ್ಯನವರ ಹೆಸರನ್ನು ಪ್ರಸ್ತಾಪಿಸಿದೆ ಟೀಕಿಸಿದರು.

ಮಾಜಿ ಸಚಿವ ಬಂಡೆಪ್ಪ ಕಾಶಂಪುರ ಮಾತನಾಡಿ, ಕುರುಬರನ್ನು ಎಸ್ ಟಿ ಪಟ್ಟಿಗೆ ಸೇರಿಸುವ ತನಕ ಹೋರಾಟ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದರು.

ಕುರುಬರ ಎಸ್ ಟಿ ಹೋರಾಟ ಸಮಿತಿಯ ಅಧ್ಯಕ್ಷ ಕೆ.ವಿರೂಪಾಕ್ಷಪ್ಪ ಮಾತನಾಡಿ, ಕುರುಬರ ಸಮನಾಂತರ ಪದಗಳನ್ನು ಈಗಾಗಲೇ ದೇಶದ ವಿವಿಧ ರಾಜ್ಯಗಳಲ್ಲಿ ಎಸ್ ಟಿ ಪಟ್ಟಿಗೆ ಸೇರಿಸಲಾಗಿದೆ.ಅದನ್ನು ಕರ್ನಾಟಕ ಸೇರಿದಂತೆ ಇತರ ರಾಜ್ಯಗಳಿಗೂ ವಿಸ್ತರಿಸಬೇಕು‌ ಎಂದರು.

ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕುರುಬರನ್ನು ಎಸ್ ಟಿ ಪಟ್ಟಿಗೆ ಸೇರಿಸುವಂತೆ ಶಿಫಾರಸ್ಸು ಮಾಡಬೇಕು. ರಾಜಕೀಯವಾಗಿ ಉನ್ನತ ಸ್ಥಾನ ಪಡೆದ ನಮ್ಮ ಸಮಾಜದ ನಾಯಕರ ಇಚ್ಛಾಶಕ್ತಿಯ ಕೊರತೆಯಿಂದ ಕುರುಬರು ಇನ್ನೂ ಎಸ್ಟಿ ಪಟ್ಟಿಗೆ ಸೇರಲಾಗಿಲ್ಲ.
ಬ್ರಿಟಿಷ್ ರ ಕಾಲದಲ್ಲಿ ಎಸ್ಟಿ ಪಟ್ಟಿಯಲ್ಲಿದ್ದ ಕುರುಬರನ್ನು ದೇಶಕ್ಕೆ ಸ್ವಾತಂತ್ರ್ಯ ಬಂದಾಗಲೇ ಎಸ್ ಟಿ ಪಟ್ಟಿಗೆ ಸೇರಿಸಬೇಕಿತ್ತು ಎಂದು ಒತ್ತಾಯಿಸಿದರು.

ಸಚಿವ ಎಂಟಿಬಿ ನಾಗರಾಜ್ ಮಾತನಾಡಿ, ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ವಾಗಿ ಹಿಂದುಳಿದಿರುವ ಕುರುಬರ ಸಮಾಜವನ್ನು ಕೇಂದ್ರ ಸರ್ಕಾರ ಕೂಡಲೇ ಎಸ್ ಟಿ ಪಟ್ಟಿಗೆ ಸೇರ್ಪಡೆ ಮಾಡಬೇಕು ಎಂದರು.

ಈಶ್ವರಾನಂದ ಸ್ವಾಮೀಜಿ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಮ್ಮ ಈ ಹೋರಾಟವನ್ನು ಲಘುವಾಗಿ ತಗೆದುಕೊಳ್ಳಬೇಡಿ,ನಮಗೆ ನ್ಯಾಯ ದೊರೆಯುವವರೆಗೆ ಹೋರಾಟ ಮುಂದುವರಿಯಲಿದೆ. ಯಾವುದಾದರೂ ಜಾತಿಯನ್ನು ಹೊಸದಾಗಿ ಎಸ್ ಟಿ ಪಟ್ಟಿಗೆ ಸೇರ್ಪಡೆಮಾಡುವಾಗ ಕುಲಶಾಸ್ತ್ರಿಯ ಅಧ್ಯಯನ ಅಗತ್ಯ ವಿದೆಯೇ ಹೊರತು ಈಗಾಗಲೇ ಸಮಾನಾಂತರ ಪದಗಳು ಎಸ್ ಟಿ ಪಟ್ಟಿಗೆ ಸೇರಿರುವ ಕುರುಬ ಸಮಾಜಕ್ಕಲ್ಲ.ಕುರುಬರು ದೇಶದ ಮೂಲ ನಿವಾಸಿಗಳು ಅವರನ್ನು ಮೊದಲು ಎಸ್ ಟಿ ಪಟ್ಟಿಗೆ ಸೇರಿಸ ಬೇಕಿತ್ತು ಎಂದು ಹೇಳಿದರು.

ಸಚಿವ ಆರ್.ಶಂಕರ್ ಮಾತನಾಡಿ, ಮುಖ್ಯ ಮಂತ್ರಿಗಳು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುವ ವಿಶ್ವಾಸವಿದೆ. ಸಚಿವ ಸಂಪುಟದ ಮುಂದೆ ಸಿಎಂ ಕುರುಬರನ್ನು ಎಸ್ ಟಿ ಪಟ್ಟಿಗೆ ಸೇರ್ಪಡೆ ಮಾಡುವ ವಿಷಯವನ್ನು ತರುವಂತೆ ಮಾಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ.ಆದಷ್ಟು ಶ್ರೀಘ್ರ ಕುರುಬರನ್ನು ಎಸ್ ಟಿ ಪಟ್ಟಿಗೆ ಸೇರಿಸಬೇಕು.ಎಸ್ಟಿ ಪಟ್ಟಿಗೆ ಸೇರಿಸಿದರೆ ಕುರುಬರು ಬಿಜೆಪಿ ಪಕ್ಷ ದೊಂದಿಗೆ ಇರಲಿದೆ ಎಂದು ಹೇಳಿದರು.

ಮಾಜಿ ಸಚಿವ ಎಚ್.ಎಂ.ರೇವಣ್ಣ ಮಾತನಾಡಿ, ಇದು ಐತಿಹಾಸಿಕ ಹೋರಾಟದ ಆರಂಭ. ಕುರುಬರನ್ನು ಎಸ್ ಟಿ ಪಟ್ಟಿಗೆ ಸೇರಿಸುವವರೆಗೆ ಹೋರಾಟ ಮುಂದುವರಿಯಲಿದೆ ಎಂದರು.

ಕಾಗಿನೆಲೆ ಕನಕ ಗುರು ಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಮಾತನಾಡಿ, ಮುಖ್ಯ ಮಂತ್ರಿಗಳೆ ನಾವು ಬೇರೆ ಸ್ವಾಮಿಗಳಂತೆ ನಾವು ಕೆಟ್ಟದಾಗಿ ಮಾತನಾಡುವವರು, ಬ್ಲಾಕ್ ಮೇಲ್ ಮಾಡುವವರು ಅಲ್ಲ,ನಾವು ಪ್ರೀತಿಯಿಂದ ಬೇಡುತ್ತಿದ್ದೇವೆ,ನಾಡ ದೊರೆಯಾಗಿ ಅದೇ ಪ್ರೀತಿಯಿಂದ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿ.ನಾವು ಪ್ರಧಾನಿ ಹಾಗೂ ಕೇಂದ್ರ ಗೃಹ ಸಚಿವರನ್ನು ಭೇಟಿ ಮಾಡಿ ಎಸ್ ಟಿ ಹಕ್ಕು ಪಡೆಯುತ್ತೇವೆ ಎಂದರು.

ನಮ್ಮದು ಯಾರ ಪರವು,ಯಾರ ವಿರುದ್ಧವೂ ಅಲ್ಲ. ಯಾವ ಪಕ್ಷದ ಪರವೂ ಯಾವ ಪಕ್ಷದ ವಿರುದ್ಧವೂ ಅಲ್ಲ. ಕೇವಲ ಎಸ್ ಟಿ ಹಕ್ಕು ಪಡೆಯಲಷ್ಟೇ ನಮ್ಮ ಹೋರಾಟ ಎಂದು ಸ್ಪಷ್ಟಪಡಿಸಿದರು.

ರಾಜ್ಯ ಸರ್ಕಾರದ ಪ್ರತಿನಿಧಿಯಾಗಿ ಕಂದಾಯ ಸಚಿವ ಆರ್.ಅಶೋಕ್ ಅವರು ಕುರುಬರನ್ನು ಎಸ್ ಟಿ ಪಟ್ಟಿಗೆ ಸೇರ್ಪಡೆ ಮಾಡಬೇಕೆನ್ನುವ ಮನವಿ ಪತ್ರವನ್ನು ಸ್ವೀಕರಿಸಿದರು.

ಶಾಸಕ ರಘುನಾಥ್ ರಾವ್ ಮಲಕಾಪೂರೆ, ಸಮಿತಿ ಅಧ್ಯಕ್ಷ ಕೆ.ವಿರೂಪಾಕ್ಷಪ್ಪ, ಕಾರ್ಯಾಧ್ಯಕ್ಷ ಕೆ ಮುಕುಡಪ್ಪ, ಶಾಂತಪ್ಪ, ಸಮಿತಿ ಖಜಾಂಚಿಗಳಾದ ಟಿ.ಬಿ. ಬಳಗಾವಿ,
ಕೆ‌.ಈ.ಕಾಂತೇಶ್ , ಎಸ್ .ಪುಟ್ಟಸ್ವಾಮಿ, ಆನೇಕಲ್ ದೊಡ್ಡಯ್ಯ, ಜೀವೇಶ್ವರಿ ರಾಮಕೃಷ್ಣ, ಮಾಜಿ ಶಾಸಕ ಹುಲಿನಾಯ್ಕರ್, ಮಹಾರಾಷ್ಟ್ರ, ಆಂಧ್ರಪ್ರದೇಶ,ತಮಿಳುನಾಡಿನ ಜನಪ್ರತಿನಿಧಿಗಳು ಭಾಗವಹಿಸಿದ್ದರು.

ಸಮಾವೇಶದಲ್ಲಿ ಲಕ್ಷಾಂತರ ಜನ ಭಾಗಿಯಾದ್ದರಿಂದ ತುಮಕೂರು ರಸ್ತೆಯಲ್ಲಿ ಜನದಟ್ಟಣೆ ಟ್ರಾಫಿಕ್ ಜಾಮ್‌ ಉಂಟಾಗಿತ್ತು.

Leave a Reply

Your email address will not be published.