ನಿಜವಾದ ಕಾರ್ಮಿಕರಿಗೆ ಮಾತ್ರ ಕೋವಿಡ್ ಸಂಕಷ್ಟ ಕಾಲದಲ್ಲಿ ನೀಡಲಾಗುತ್ತಿರುವ ಫುಡ್‍ಕಿಟ್‍ಗಳು ಕೈಸೇರಬೇಕು ಎಂದು ಒಗ್ಗೂಡಿದ ಕಾರ್ಮಿಕರ ಧ್ವನಿ

ನಿತ್ಯವಾಣಿ,ಚಿತ್ರದುರ್ಗ,(ಜು.19) : ಕೊರೋನಾ ಎರಡನೆ ಹಂತದ ಅಲೆಯಲ್ಲಿ ಕೆಲಸವಿಲ್ಲದೆ ಸಂಕಷ್ಟಕ್ಕೊಳಗಾಗಿರುವ ನೊಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಕಾರ್ಮಿಕ ಕಲ್ಯಾಣ ಮಂಡಳಿಯಿಂದ ಆಹಾರ ಸಾಮಾಗ್ರಿಗಳ ಕಿಟ್‍ಗಳನ್ನು ರಾಜ್ಯಾದ್ಯಂತ ವಿತರಿಸಲಾಗುತ್ತಿದ್ದರೂ ಚಿತ್ರದುರ್ಗ ತಾಲ್ಲೂಕಿನಲ್ಲಿ ಮಾತ್ರ ಸ್ಥಳೀಯ ಶಾಸಕರು ಅಡ್ಡಗಾಲಾಗಿರುವುದರಿಂದ ಕಾರ್ಮಿಕರಿಗೆ ಅನ್ಯಾಯವಾಗುತ್ತಿದೆ ಎಂದು ಸಿಐಟಿಯು. ಜಿಲ್ಲಾ ಸಹ ಸಂಚಾಲಕ ಸಿ.ಕೆ.ಗೌಸ್‍ಪೀರ್ ಆಪಾದಿಸಿದರು. ಪತ್ರಕರ್ತರ ಭವದನದಲ್ಲಿ ಸೋಮವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಸರ್ವೋಚ್ಚ ನ್ಯಾಯಾಲಯ ಹಾಗೂ ರಾಜ್ಯ ಉಚ್ಚ ನ್ಯಾಯಾಲಯದ ನಿರ್ದೇಶನದಂತೆ ಕಾರ್ಮಿಕ ಕಲ್ಯಾಣ ಮಂಡಳಿಯಿಂದ ಕಾರ್ಮಿಕರಿಗೆ ಫುಡ್‍ಕಿಟ್‍ಗಳನ್ನು ವಿತರಿಸಬೇಕು. ವಿಪರ್ಯಾಸವೆಂದರೆ ಚಿತ್ರದುರ್ಗ ಶಾಸಕರು ಕೆಲವೇ ಕೆಲವು ಕಾರ್ಮಿಕರಿಗೆ ಫುಡ್‍ಕಿಟ್‍ಗಳನ್ನು ನೀಡಿ ಸುಮ್ಮನಾಗುತ್ತಿದ್ದಾರೆ. ಸರ್ಕಾರವಾಗಲಿ, ಶಾಸಕರು, ಸಂಸದರು, ಸಚಿವರ ನಿಧಿಯಿಂದ ಕಾರ್ಮಿಕರಿಗೆ ಫುಡ್‍ಕಿಟ್‍ಗಳನ್ನು ನೀಡುತ್ತಿಲ್ಲ. ಕಲ್ಯಾಣ ಮಂಡಳಿಯಲ್ಲಿರುವ ಸೆಸ್ ಹಣ ವಿನಿಯೋಗಿಸಿ ರೇಷನ್ ಕಿಟ್‍ಗಳನ್ನು ನೀಡಲಾಗುತ್ತಿದೆ. ಸದ್ವಿನಿಯೋಗವಾಗಬೇಕೆಂಬುದೇ ನಮ್ಮ ಉದ್ದೇಶ ಎಂದು ತಿಳಿಸಿದರು.
ಜಿಲ್ಲೆಯ ಹೊಳಲ್ಕೆರೆ, ಹೊಸದುರ್ಗ, ಚಳ್ಳಕೆರೆಯಲ್ಲಿ ಕಾರ್ಮಿಕರಿಗೆ ಸರಿಯಾಗಿ ರೇಷನ್ ಕಿಟ್‍ಗಳು ತಲುಪುತ್ತಿವೆ. ಚಿತ್ರದುರ್ಗ ತಾಲ್ಲೂಕಿನಲ್ಲಿ ಏಕೆ ಅನ್ಯಾಯವಾಗುತ್ತಿದೆ ಎಂದು ಪ್ರಶ್ನಿಸಿದ ಸಿ.ಕೆ.ಗೌಸ್‍ಪೀರ್ ಹದಿಮೂರು ಸಾವಿರ ಕಿಟ್ ಬಂದಿದೆ. ನಿಜವಾದ ಕಾರ್ಮಿಕರಿಗೆ ತಲುಪಲಿ ಎಂದು ಒತ್ತಾಯಿಸಿದರು.
ಎ.ಐ.ಟಿ.ಯು.ಸಿ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಾಂ.ಜಿ.ಸಿ.ಸುರೇಶ್‍ಬಾಬು ಮಾತನಾಡಿ ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ಹತ್ತು ಸಾವಿರ ಕೋಟಿ ರೂ.ಸೆಸ್ ಹಣವಿದೆ. ಸರ್ಕಾರಕ್ಕೆ ಸರಿಯಾಗಿ ಸೆಸ್ ಪಾವತಿಸುವ ನಿಜವಾದ ಕಾರ್ಮಿಕರಿಗೆ ಕೊರೋನಾ ಸಂಕಷ್ಟ ಕಾಲದಲ್ಲಿ ರೇಷನ್ ಕಿಟ್ ತಲುಪಲಿ. ಒಬ್ಬರಿಗೆ ಸಿಕ್ಕು ಮತ್ತೊಬ್ಬರಿಗೆ ತಲುಪದಿದ್ದರೆ ಕಾರ್ಮಿಕರ ನಡುವೆಯೇ ಘರ್ಷಣೆಯಾಗಬಹುದು. ಇದಕ್ಕೆ ಅವಕಾಶ ಕೊಡಬೇಡಿ ಎಂದು ಕಾರ್ಮಿಕ ಇಲಾಖೆಗೆ ಮನವಿ ಮಾಡಿದರು.
ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕ್ಷೇಮಾಭಿವೃದ್ದಿ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ವೈ.ಕುಮಾರ್ ಮಾತನಾಡುತ್ತ ಕಟ್ಟಡ ಕಾರ್ಮಿಕರ ಸಂಘನೆಯಿಂದ ಕಾರ್ಮಿಕ ಇಲಾಖೆಯಲ್ಲಿ ಹೆಸರು ನೊಂದಾಯಿಸಿಕೊಂಡಿರುವ ನಿಜವಾದ ಕಾರ್ಮಿಕರಿಗೆ ಮಾತ್ರ ಕೋವಿಡ್ ಸಂಕಷ್ಟ ಕಾಲದಲ್ಲಿ ನೀಡಲಾಗುತ್ತಿರುವ ಫುಡ್‍ಕಿಟ್‍ಗಳು ಕೈಸೇರಬೇಕು. ಚಿತ್ರದುರ್ಗ ತಾಲ್ಲೂಕಿನಲ್ಲಿ ಹತ್ತು ಸಾವಿರ ಕಟ್ಟಡ ಕಾರ್ಮಿಕರು ನೊಂದಣಿಯಾಗಿದ್ದಾರೆ. ನಕಲಿ ಕಾರ್ಮಿಕರಿಗೆ ಸರ್ಕಾರದ ಸವಲತ್ತುಗಳು ಸಿಗಬಾರದು ಎಂದು ಒತ್ತಾಯಿಸಿದರು.
ಕಟ್ಟಡ ಕಾರ್ಮಿಕರ ಸಮಿತಿ  ರಾಜ್ಯಧ್ಯಕ್ಷ  ರಮೇಶ್,  ಜಿಲ್ಲಾಧ್ಯಕ್ಷ ಬಿ.ಸಿ.ನಾಗರಾಜಚಾರಿ, ಪ್ರಧಾನ ಕಾರ್ಯದರ್ಶಿ ಕಾಂ.ಕೆ.ಇ.ಸತೀಶ್, ಜಿಲ್ಲಾ ಕಟ್ಟಡ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ವೈ.ತಿಪ್ಪೇಸ್ವಾಮಿ ಇನ್ನು ಮುಂತಾದವರು ಪತ್ರಿಕಾಗೋಷ್ಟಿಯಲ್ಲಿ ಹಾಜರಿದ್ದರು.

 

Leave a Reply

Your email address will not be published.