ಲಯನ್ಸ್ ಕ್ಲಬ್ ವತಿಯಿಂದ ತರಾಸು ಜನ್ಮ ಶತಮಾನೋತ್ಸವ ಹಾಗು ನೋಟ್ಸ್ ಬುಕ್ಸ್ ವಿತರಣೆ

 

ನಿತ್ಯವಾಣಿ,ಚಿತ್ರದುರ್ಗ : ತ.ರಾ. ಸುಬ್ಬರಾಯರು ಕನ್ನಡದ ಶ್ರೇಷ್ಠ ಕಾದಂಬರಿಕಾರರಲ್ಲಿ ಒಬ್ಬರು ಹಾಗು ಜನಸಾಮಾನ್ಯರ ಭಾಷೆಯನ್ನು ಕನ್ನಡದ ಸಾರಸ್ವತ ಲೋಕಕ್ಕೆ ಕೊಡುಗೆಯಾಗಿ ನೀಡಿದ ಅಪ್ರತಿಮ ಸಾಹಿತಿ ಎಂದು ಉಪನ್ಯಾಸಕ ಹಾಗು ಲಯನ್ಸ್ ಕ್ಲಬ್ ಚಿತ್ರದುರ್ಗ ಫೋರ್ಟ್ ಸಿಟಿಯ ಕಾರ್ಯದರ್ಶಿ ಲಯನ್ ಯೋಗೀಶ್ ಸಹ್ಯಾದ್ರಿ ಅಭಿಪ್ರಾಯಪಟ್ಟರು.

ನಗರದ ಬುದ್ಧನಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಲಯನ್ಸ್ ಕ್ಲಬ್ ಚಿತ್ರದುರ್ಗ ಫೋರ್ಟ್ ಸಿಟಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ತರಾಸು ಜನ್ಮ ಶತಮಾನೋತ್ಸವ ಹಾಗು ಉಚಿತ ನೋಟ್ ಬುಕ್ಸ್ ವಿತರಣ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು ಅವರು,
ತರಾಸು ರಚಿಸಿರುವ ‘ದುರ್ಗಾಸ್ತಮಾನ’ ಕಾದಂಬರಿ ಕನ್ನಡದ ಸಾರ್ವಕಾಲಿಕ ಶ್ರೇಷ್ಠ ಕೃತಿಗಳಲ್ಲಿ ಒಂದು. ತರಾಸು ಅವರ ಬದುಕು, ಬರಹ ನಾಡಿನ ಯುವ ಸಾಹಿತಿಗಳಿಗೆ ಸ್ಪೂರ್ತಿ, ಅಲ್ಲದೇ ಅವರ ಸಾಹಿತ್ಯ ಕೃತಿಗಳ ಮೂಲಕ ನಾಡಿನ ಅಸ್ಮಿತೆಯನ್ನು ವಿಶ್ವಕ್ಕೆ ಸಾರಿದ ಕನ್ನಡದ ಮಹಾನ್ ಚೇತನ ಎಂದು ತಿಳಿಸಿದರು. ತರಾಸು ಅವರ ಸಾಹಿತ್ಯ ಜನ ಸಾಮಾನ್ಯರ ಬದುಕು-ಬವಣೆಗಳ ಕುರಿತ ಅಧ್ಯಯನವಾಗಿತ್ತು ಮಾತ್ರವಲ್ಲದೆ ಕೋಟೆನಾಡಿನ ಸಿರಿವಂತಿಕೆಯನ್ನು ಅತ್ಯದ್ಭುತವಾಗಿ ಬಿಂಬಿಸುವಂತಿದೆ. ಆದ್ದರಿಂದಲೇ ಅವರ ಬರಹಗಳು ಇಂದಿಗೂ ಕನ್ನಡ ಸಾಹಿತ್ಯಾಸಕ್ತರಿಗೆ ಪ್ರಸ್ತುತ ಎನಿಸುತ್ತದೆ ಎಂದು ಯೋಗೀಶ್ ಸಹ್ಯಾದ್ರಿ ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಕೆ ರವಿಶಂಕರ್ ರೆಡ್ಡಿ ಅವರು ಪ್ರತಿಯೊಬ್ಬ ವ್ಯಕ್ತಿಯೂ ತಮ್ಮ ದುಡಿಮೆಯ ಒಂದು ಭಾಗವನ್ನು ಬಡವರಿಗೆ, ದೀನದಲಿತರಿಗೆ, ಸಮಾಜದ ಅಭಿವೃದ್ಧಿಗೆ ನೀಡಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯವಾಗಿದೆ.
ನಮ್ಮ ಭಾರತ ದೇಶದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಶ್ರೀಮಂತರು ಇದ್ದಾರೆ, ಆದರೆ ಅವರಲ್ಲಿರುವ ಹಣವನ್ನು ಸಮಾಜದ ಉನ್ನತೀಕರಣಕ್ಕೆ ನೀಡುವ ಒಳ್ಳೆಯ ಮನಸ್ಸು ಇರಬೇಕು. ಅಂತಹ ಉತ್ತಮವಾದ ಕಾರ್ಯವನ್ನು ನಮ್ಮ ಜಿಲ್ಲೆಯ ಲಯನ್ಸ್ ಕ್ಲಬ್ ಚಿತ್ರದುರ್ಗ ಫೋರ್ಟ್ ಸಿಟಿಯ ಲಯನ್ಸ್ ಸದಸ್ಯರು ಮಾಡುತ್ತಿರುವುದು ಅಭಿನಂದನೀಯ ಎಂದು ತಿಳಿಸಿದರು. ಸರ್ಕಾರಿ ಶಾಲೆಯಲ್ಲಿ ಓದಿದ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆಗಳನ್ನು ಮಾಡಿದ್ದಾರೆ. ಹಾಗೆಯೇ ನಮ್ಮ ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಉನ್ನತ ಸಾಧನೆಗೈಯುವುದರ ಮೂಲಕ ದೇಶಕ್ಕೆ ಕೊಡುಗೆ ನೀಡುವಂತಾಗಬೇಕು ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಲಯನ್ಸ್ 317ಸಿ ಜಿಲ್ಲೆಯ ವಲಯ 3 ರ ವಲಯಾಧ್ಯಕ್ಷರಾದ ಲಯನ್ ಎಂ ಬಿ ಶಿವಕುಮಾರ್ ಮಾತನಾಡಿ ತರಾಸು ಸೇರಿದಂತೆ ನಾಡಿನ ಹಲವಾರು ಸಾಹಿತಿಗಳ ಕೃತಿಗಳನ್ನು ಇಂದಿನ ಮಕ್ಕಳಿಗೆ ಪರಿಚಯಿಸುವ ಕೆಲಸ ಶಿಕ್ಷಕರಿಂದ ಮತ್ತು ಸಾಹಿತ್ಯ ಪರಿಷತ್ತಿನಂತಹ ಸಂಘ ಸಂಸ್ಥೆಗಳಿಂದ ಆಗಬೇಕಿದೆ. ಸಮಾಜದಲ್ಲಿ ನೊಂದ ವ್ಯಕ್ತಿಗಳಿಗೆ, ಅಸಹಾಯಕರಿಗೆ, ಬಡ ವಿದ್ಯಾರ್ಥಿಗಳ ಸಹಾಯಕ್ಕೆ ಲಯನ್ಸ್ ಕ್ಲಬ್ ಎಂದಿಗೂ ಸದಾ ಸಿದ್ಧವಾಗಿದೆ ಎಂದು ತಿಳಿಸಿದರು. ವಿದ್ಯಾರ್ಥಿಗಳಿಗೆ ನೋಟ್ ಬುಕ್ಸ್ ಹಾಗು ಪೆನ್ನುಗಳನ್ನು ಕೊಡುಗೆಯಾಗಿ ನೀಡಿದ ಲಯನ್ ಚಲ್ಮೇಶ್ ಎಂ, ಲಯನ್ ಉದಯಶಂಕರ್, ಲಯನ್ ಗಿರೀಶ್ ಯು ಸಿ ಅವರನ್ನು ಅಭಿನಂದಿಸಿದರು ಜೊತೆಗೆ ಚಿತ್ರದುರ್ಗ ಲಯನ್ಸ್ ಕ್ಲಬ್ ನ ಸಾಮಾಜಿಕ ಕಾರ್ಯ ಚಟುವಟಿಕೆಗಳು ಸದಾ ಹೀಗೆಯೇ ಮುಂದುವರೆಯಲಿ ಹಾಗು ವಿದ್ಯಾರ್ಥಿಗಳು ಆರೋಗ್ಯ, ವಿದ್ಯಾಭ್ಯಾಸದ ಕಡೆಗೆ ಹೆಚ್ಚಿನ ಒಲವು ತೋರಬೇಕು ಎಂದು ಅಭಿಪ್ರಾಯಪಟ್ಟರು.

ಲಯನ್ಸ್ ಕೋರ್ ಕಮಿಟಿ ಸದಸ್ಯರಾದ ಲಯನ್ ಎನ್ ವಿ ಹರೀಶ್ ಅವರು ಲಯನ್ಸ್ ಸಂಸ್ಥೆಯ ಧ್ಯೊಯೋದ್ದೇಶಗಳ ಕುರಿತಂತೆ ಮಾಹಿತಿ ನೀಡಿದರು. ಲಯನ್ ಆರ್ ಉದಯಶಂಕರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಖಜಾಂಚಿ ಲಯನ್ ಪಿ ನಾಗೇಂದ್ರಚಾರ್, ಸಹಕಾರ್ಯದರ್ಶಿ ಲಯನ್ ದಾದಾಪೀರ್, ಹಿರಿಯ
ಲಯನ್ಸ್ ಗಳಾದ ಚಲ್ಮೇಶ್ ಎಂ, ಸೋಮನಾಥ ಶೆಟ್ಟಿ, ಗಿರೀಶ್ ಯು ಸಿ, ಮಂಜುನಾಥ್ ಬಿ, ಮಹೇಶ್ವರಪ್ಪ ಹೆಚ್ ಎಸ್, ಅಜಿತ್ ಪ್ರಸಾದ್, ಕೆ ವಿ ಜಗದೀಶ್, ಕೆ ಮಲ್ಲಿಕಾರ್ಜುನಾಚಾರ್, ಬುದ್ಧನಗರ ಶಾಲೆಯ ಮುಖ್ಯೋಪಾಧ್ಯಾಯರಾದ ಅನ್ನಪೂರ್ಣಮ್ಮ ಎಂ ಜೆ, ಶಾಲೆಯ ಶಿಕ್ಷಕರು, ಬಿ ಎಡ್ ಪ್ರಶಿಕ್ಷಣಾರ್ಥಿಗಳು, ವಿದ್ಯಾರ್ಥಿಗಳು, ಪೋಷಕರು ಹಾಗೂ  ಇತರರು ಹಾಜರಿದ್ದರು 

Leave a Reply

Your email address will not be published.