ಚಿತ್ರದುರ್ಗ : ಉತ್ತಮ ಕಾವ್ಯ ಅಯಸ್ಕಾಂತವಿದ್ದಂತೆ. ಕವಿತೆಯ ಅಂತಃಶಕ್ತಿ ಪ್ರತಿಯೊಬ್ಬರನ್ನು ತನ್ನತ್ತ ಸೆಳೆಯುತ್ತದೆ. ಕನ್ನಡ ಸಾಹಿತ್ಯಕ್ಕೆ ಮಕ್ಕಳ ಹೃದಯವನ್ನು ಅರಳಿಸಿ ಪರಿಪೂರ್ಣ ವ್ಯಕ್ತಿತ್ವವನ್ನಾಗಿಸುವ ಅಗಾಧ ಶಕ್ತಿಯಿದೆ. ಕಾವ್ಯಸೃಷ್ಠಿ ಸೃಜನಶೀಲತೆ ಹಾಗು ನವ್ಯತೆಯನ್ನು ಒಳಗೊಂಡಿದ್ದರೆ ಮಕ್ಕಳು ಸಹಜವಾಗಿ ಆಕರ್ಷಿತರಾಗುತ್ತಾರೆ. ಕನ್ನಡ ಸಾಹಿತ್ಯಕ್ಕೆ ಚಿತ್ರದುರ್ಗ ಜಿಲ್ಲೆಯ ಸಾಹಿತಿಗಳ ಕೊಡುಗೆ ಅನನ್ಯವಾದುದು ಎಂದು ಕನ್ನಡ ಸಾಹಿತ್ಯಕ್ಕೆ ಚಿತ್ರದುರ್ಗ ಜಿಲ್ಲೆಯ ಸಾಹಿತಿಗಳ ಕೊಡುಗೆ ಅನನ್ಯವಾದುದು ಎಂದು ಲೇಖಕ ಹಾಗು ಮಕ್ಕಳ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಯೋಗೀಶ್ ಸಹ್ಯಾದ್ರಿ ಅಭಿಪ್ರಾಯಪಟ್ಟರು.
ಚಿತ್ರದುರ್ಗ ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ ವತಿಯಿಂದ ಗುರುವಾರ ಮಕ್ಕಳಿಗಾಗಿ ಆಯೋಜಿಸಲಾಗಿದ್ದ “ಮನೆಯಂಗಳದಲ್ಲಿ ಕಾವ್ಯ ಸುಧೆ” ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಯೋಗೀಶ್ ಸಹ್ಯಾದ್ರಿ, ವಿದ್ಯಾರ್ಥಿಗಳು ಶಾರೀರಿಕ ಮತ್ತು ಮಾನಸಿಕ ಒತ್ತಡಗಳಿಂದ ಹೊರಬರಲು ಉತ್ತಮ ಸಾಹಿತ್ಯ ಕೃತಿಗಳು ಪ್ರಮುಖ ಪಾತ್ರ ವಹಿಸುತ್ತವೆ. ಯಾವುದೇ ಮಕ್ಕಳಲ್ಲಿ ಸೃಜನಶೀಲತೆಗೆ ಕೊರತೆಯಿಲ್ಲ. ವಿದ್ಯಾರ್ಥಿ ಘಟ್ಟದಲ್ಲಿ ಮಕ್ಕಳನ್ನು ಉತ್ತಮ ಕೃತಿಗಳ ಸಾಹಿತ್ಯಾವಲೋಕನ, ಕವಿಗೋಷ್ಠಿ, ಕಾವ್ಯ ರಚನೆಯಂತಹ ಚಟುವಟಿಕೆಗಳಲ್ಲಿ ತೊಡಗಿಸುವಂತೆ ಶಿಕ್ಷಣ ಇಲಾಖೆ ತಜ್ಞರ ಅಭಿಪ್ರಾಯ ಪಡೆದು ಕ್ರಮ ವಹಿಸಬೇಕು ಎಂದು ತಿಳಿಸಿದರು. ಮಕ್ಕಳ ಕಲ್ಪನಾ ಶಕ್ತಿಯನ್ನು ಹೆಚ್ಚಿಸುವ ಕಲೆ ಸಾಹಿತ್ಯಕ್ಕಿದೆ. ಉತ್ತಮವಾದ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ನೀಡುವುದರ ಜೊತೆಗೆ ಅವರನ್ನು ಸಮಾಜಮುಖಿಯಾಗಿ ಪರಿವರ್ತಿಸುವ ಜವಾಬ್ದಾರಿ ಪೋಷಕರು ಹಾಗೂ ನಮ್ಮೆಲ್ಲರ ಮೇಲಿದೆ. ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಪ್ರತಿ ಜಿಲ್ಲೆಗಳಲ್ಲಿಯೂ ಪ್ರಾಮಾಣಿಕವಾಗಿ ಶ್ರಮಿಸುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಹಲವಾರು ಮಕ್ಕಳು ಭಾಗವಹಿಸಿ ತಮ್ಮ ನೆಚ್ಚಿನ ಕವಿಗಳ ಕವಿತೆಗಳನ್ನು ವಾಚಿಸಿದರು. ಕೆಲವೊಂದು ಪುಸ್ತಕಗಳ ಪರಿಚಯ ಮಾಡಿಕೊಟ್ಟರು. ತರಾಸು, ಡಾ. ಬಿ ಎಲ್ ವೇಣು, ಡಾ. ಲೋಕೇಶ್ ಅಗಸನಕಟ್ಟೆ, ಡಾ. ತಾರಿಣಿ ಶುಭದಾಯಿನಿ, ಡಾ. ಕರಿಯಪ್ಪ ಮಾಳಿಗೆ ಸೇರಿದಂತೆ ಚಿತ್ರದುರ್ಗ ಜಿಲ್ಲೆಯ ಹಲವಾರು ಸಾಹಿತಿಗಳ ಬಗೆಗೆ ಮಕ್ಕಳಿಗೆ ತಿಳಿಸಿಕೊಡಲಾಯಿತು. ಕಾರ್ಯಕ್ರಮದಲ್ಲಿ ಉಪನ್ಯಾಸಕಿ ಚೈತ್ರ ಸಿ, ಪೋಷಕರು, ಮಕ್ಕಳಾದ ರಿಷಿಕ ಎ, ವೀರೇಶ್ ಎಸ್, ಯಶಸ್ ಎಸ್, ಲವಿತ್ ಎಚ್, ಭುವನ್ ರಾಜ್, ಗಾಯನ ಎಸ್, ರುಚಿತ, ಭುವಂತ್, ಪ್ರಣತಿ ವಿ, ಮಾನ್ಯತಾ ಎಸ್, ಆದಿತ್ಯ ಎಸ್, ಕೌಶಿಕ್ ಎಸ್, ಮನ್ವಿಕ್ ಟಿ ಇನ್ನಿತರರು ಇದ್ದರು ಹಾಗು ಜಿಲ್ಲಾ ಪರಿಷತ್ತಿನ ಪದಾಧಿಕಾರಿಗಳು ಪಾಲ್ಗೊಂಡಿದ್ದರು.