ಕಾರವಾರ, ಮಾರ್ಚ್ 17; ದಾವಣಗೆರೆಯ ಶ್ರೀ ರಾಮನಗರದಲ್ಲಿರುವ ರಾಜ್ಯ ಮಹಿಳಾ ನಿಲಯ ತಳಿರು ತೋರಣಗಳಿಂದ ಅಲಂಕಾರಗೊಂಡಿತ್ತು. ಮಂಗಳವಾದ್ಯ ಮೊಳಗಿತ್ತು. ಅತಿಥಿಗಳಿಗೆ ಸ್ವಾಗತ ಕೋರಲು ಮಂಟಪದವರೆಗೂ ರಂಗೋಲಿ ಹಾಕಲಾಗಿತ್ತು. ದಿನ ಕಚೇರಿ ಕೆಲಸದಲ್ಲಿ ನಿರತರಾಗುತ್ತಿದ್ದ ನಿಲಯದ ಅಧಿಕಾರಿಗಳು, ಸಿಬ್ಬಂದಿ ಬಣ್ಣಬಣ್ಣದ ಸೀರೆ ಉಟ್ಟು ಸಂಭ್ರಮದಲ್ಲಿರು.
ಮಹಿಳಾ ವಸತಿ ನಿಲಯದ ಮಗಳು ಸೌಮ್ಯ ಕೆ.ಎಂ. ವಿವಾಹ ಬುಧವಾರ ಉತ್ತರ ಕನ್ನಡ ಜಿಲ್ಲೆಯ ಕುಮುಟಾ ತಾಲೂಕಿನ ಕಡೆಗೋಡಿ ಗ್ರಾಮದ ಸುಬ್ರಾಯ ಮಂಜುನಾಥ ಭಟ್ಟ ಅವರ ಜೊತೆ ನಡೆಯಿತು. ಮಹಿಳಾ ನಿಲಯದಲ್ಲಿ ನಡೆದ 40ನೇ ಮದುವೆ ಇದಾಗಿದೆ.
ಸೌಮ್ಯ ಪೋಷಕರ ಸ್ಥಾನದಲ್ಲಿ ನಿಂತು ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಸಿಇಒ ವಿಜಯಮಹಾಂತೇಶ ಬಿ. ದಾನಮ್ಮನವರ್, ಜಿಲ್ಲಾ ಪಂಚಾಯತ್ ಸದಸ್ಯ ತೇಜಸ್ವಿ ಪಟೇಲ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ವಿಜಯ್ ಕುಮಾರ್ ಧಾರೆ ಎರೆದುಕೊಟ್ಟರು.
ವಧು ವರರು ಮದುವೆಯ ಉಡುಗೆ ತೊಟ್ಟು ತಯಾರಾದ ಬಳಿಕ ನಿಲಯದ ಕೊಠಡಿಯಲ್ಲಿ ಗಣಪತಿ ದೇವರಿಗೆ ಕೈಮುಗಿದರು. ಅಲ್ಲಿಂದ ವೇದಿಕೆಗೆ ಡಿಸಿ, ಸಿಇಒ ಸೇರಿದಂತೆ ಇಲಾಖೆಯ ಅಧಿಕಾರಿಗಳು ಹಾಗೂ ಎಲ್ಲಾ ಮಹಿಳೆಯರ ಜೊತೆ ವಧು-ವರರನ್ನು ಮಂಟಪಕ್ಕೆ ಕರೆತಂದರು.
ವಧುವಿಗೆ ಮಾಂಗಲ್ಯಧಾರಣೆ ಮತ್ತು ಇತರೆ ಶಾಸ್ತ್ರಗಳು ನೆರವೇರಿದವು. ಪರಸ್ಪರ ಹಾರ ಬದಲಾಯಿಸಿಕೊಂಡಾಗ ನೆರೆದಿದ್ದ ಎಲ್ಲರೂ ಅಕ್ಷತೆ ಹಾಕಿ ಹರಿಸಿದರು.
ಅನಾಥೆಯಾದ ಸೌಮ್ಯಗೆ ಸಂಬಂಧಿಕರು ಇಲ್ಲದ ಪರಿಣಾಮ ವಸತಿ ನಿಲಯದ ಅಧಿಕಾರಿಗಳು ಮತ್ತು ಸಿಬ್ಬಂದಿಗಳೇ ಪೋಷಕರು ಹಾಗೂ ಸಂಬಂಧಿಕರ ಸ್ಥಾನದಲ್ಲಿ ನಿಂತು ಮದುವೆ ಮಾಡಿಕೊಟ್ಟರು.
ಕುಮುಟಾ ತಾಲೂಕಿನ ಕಡೆಕೋಡಿ ಗ್ರಾಮದ ಮಂಜುನಾಥ ಭಟ್ಟ ಹಾಗೂ ಕಮಲಮ್ಮ ಅವರ ಜೇಷ್ಠ ಪುತ್ರ ಸುಬ್ರಾಯ ಮಂಜುನಾಥ ಭಟ್ಟ ಯುವತಿಯನ್ನು ಮದುವೆಯಾಗಲು ಮುಂದೆ ಬಂದಿದ್ದು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದರು.
ಸುಬ್ರಾಯ ಮಂಜುನಾಥ ಭಟ್ಟ ಖಾಸಗಿ ಸಂಸ್ಥೆಯೊಂದರಲ್ಲಿ ವಾಹನ ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ. ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಕನ್ಯಾದಾನ ಮಾಡಿದರು. ಬಳಿಕ ಮಾತನಾಡಿದ ಅವರು, “ನಾನು ಅಧಿಕಾರಕ್ಕೆ ಬಂದ ಮೇಲೆ ಇದು 6ನೇ ವಿವಾಹ ಮಹೋತ್ಸವ. ಮಹಿಳಾ ನಿಲಯದಲ್ಲಿ 40ನೇ ಮದುವೆ ಇದು” ಎಂದರು.