ಮುಜಾಫರ್ನಗರ್ (ಉತ್ತರ ಪ್ರದೇಶ): ವೇಗವಾಗಿ ಬಂದ ಕಾರು ಮದುವೆ ಮೆರವಣಿಗೆಯತ್ತ ನುಗ್ಗಿದರಿಂದ ವರನ ಸೋದರಸಂಬಂಧಿ ಸ್ಥಳದಲ್ಲೇ ಮೃತಪಟ್ಟು, 12 ಮಂದಿ ಗಂಭೀರವಾಗಿ ಗಾಯಗೊಂಡ ಘಟನೆ ಉತ್ತರ ಪ್ರದೇಶದ ಮುಜಾಫರ್ನಗರದಲ್ಲಿ ನಡೆದಿದೆ.
ಘಟನೆಗೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ವಧು ಸನ್ರೂಫ್ ಕಾರಿನಲ್ಲಿ ಡ್ಯಾನ್ಸ್ ಮಾಡುತ್ತಾ ಮದುವೆ ಮಂಟಪಕ್ಕೆ ತೆರಳುತ್ತಿರುತ್ತಾಳೆ. ಕುಟುಂಬದ ಇತರೆ ಸದಸ್ಯರು ಕಾರಿನ ಸುತ್ತ ಕುಣಿಯುತ್ತಾ ಮೆರವಣಿಗೆಯಲ್ಲಿ ಸಾಗುತ್ತಿರುತ್ತಾರೆ. ಈ ವೇಳೆ ಎದುರುಗಡೆಯಿಂದ ವೇಗವಾಗಿ ಬರುವ ಕಾರು ಮೆರವಣಿಗೆಯತ್ತ ನುಗ್ಗುತ್ತದೆ.
ಘಟನೆಯಲ್ಲಿ ಓರ್ವ ವ್ಯಕ್ತಿ ಮೃತಪಟ್ಟಿದ್ದು, 12 ಮಂದಿ ಗಾಯಗೊಂಡಿದ್ದಾರೆ. ಘಟನೆ ಬುಧವಾರ ನಡೆದಿದ್ದು, ವಿಡಿಯೋ ಭಾರಿ ವೈರಲ್ ಆಗುತ್ತಿದೆ. ಮೃತಪಟ್ಟ ವ್ಯಕ್ತಿಯನ್ನು ವರನ ಸೋದರಸಂಬಂಧಿ ಪ್ರಮೋದ್ ಕುಮಾರ್ (42) ಎಂದು ಗುರುತಿಸಲಾಗಿದೆ. ಮಾಹಿತಿ ತಿಳಿದು ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದರು.
ಘಟನೆ ಬಗ್ಗೆ ಮಾತನಾಡಿದ ವರ ಅಂಕುಲ್ ಕುಮಾರ್, ನಾವು ಪಾರ್ಕಿಂಗ್ ಬಳಿ ನಿಂತಿದ್ದೆವು. ವಧುವಿನ ಕಾರು ಇನ್ನೇನು ಬಾಂಕ್ವೆಟ್ ಹಾಲ್ ಪ್ರವೇಶಿಸಬೇಕಿತ್ತು. ಅಷ್ಟರಲ್ಲೇ ವೇಗವಾಗಿ ಬಂದ ಕಾರು ಜನರತ್ತ ನುಗ್ಗಿತು. ಪರಿಣಾಮ ನನ್ನ ಸೋದರಸಂಬಂಧಿ ಮೃತಪಟ್ಟಿದ್ದು, ಅನೇಕರು ಗಾಯಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಚಾಲಕನ ಪತ್ತೆಗೆ ಬಲೆ ಬೀಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.