ಚಿತ್ರದುರ್ಗ: ಚಿತ್ರದುರ್ಗಕ್ಕೆ ಮೆಡಿಕಲ್ ಕಾಲೇಜು ಮಂಜೂರಾಗಿ ಏಳು ವರ್ಷಗಳಾಗಿದ್ದರೂ ಇನ್ನು ಡೀನ್ ನೇಮಕ ಮಾಡಿಲ್ಲ. ಭೂಮಿಪೂಜೆಯನ್ನು ನೆರವೇಸಿಲ್ಲ. ಈ ನಿಟ್ಟಿನಲ್ಲಿ ರಾಜ್ಯದಿಂದ ಹಣ ಬಿಡುಗಡೆ ಮಾಡಿಸಿಕೊಂಡು ಬರುವಲ್ಲಿ ವಿಫಲವಾಗಿರುವ ಶಾಸಕರುಗಳ ವಿರುದ್ದ ಧಿಕ್ಕಾರಗಳನ್ನು ಕೂಗಿದ ಕರ್ನಾಟಕ ನವ ನಿರ್ಮಾಣ ಸೇನೆ ಜಿಲ್ಲಾಧಿಕಾರಿ ಕಚೇರಿ ಮಂಗಳವಾರ ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ಮೂಲಕ ರಾಜ್ಯದ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.
ಗಾಂಧಿವೃತ್ತದಿಂದ ಮೆರವಣಿಗೆ ಮೂಲಕ ಆಗಮಿಸಿದ ಪ್ರತಿಭಟನಾಕಾರರು ಮೆಡಿಕಲ್ ಕಾಲೇಜಿಗೆ ಸರ್ಕಾರದಲ್ಲಿ ಹಣವಿಲ್ಲ. ಭಿಕ್ಷೆ ಎತ್ತಿ ಎಂದು ಹೇಳಿರುವ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಮೊದಲು ರಾಜಿನಾಮೆ ನೀಡಲಿ. ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ವಿಧಾನಪರಿಷತ್ ಸದಸ್ಯರು ಚಿತ್ರದುರ್ಗಕ್ಕೆ ಮೆಡಿಕಲ್ ಕಾಲೇಜು ಮಂಜೂರಾಗಿರುವುದಕ್ಕೆ ಹಣ ಬಿಡುಗಡೆಗೊಳಿಸುವಂತೆ ಎಲ್ಲಿಯೂ ಚಕಾರವೆತ್ತುತ್ತಿಲ್ಲ. ರಾಜ್ಯದ ಮುಖ್ಯಮಂತ್ರಿ 50 ಕೋಟಿ ರೂ.ಗಳನ್ನು ಘೋಷಿಸಿದ್ದು, ಇದುವರೆವಿಗೂ ನಯಾಪೈಸೆಯೂ ಬಿಡುಗಡೆಯಾಗಿಲ್ಲದಿರುವುದು ಜಿಲ್ಲೆಯ ಜನರ ದೌರ್ಭಾಗ್ಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದೊಡ್ಡಬಳ್ಳಾಪುರ, ಉಡುಪಿ, ಕೊಪ್ಪಳ ಜಿಲ್ಲೆಗಳಿಗೆ ಮೆಡಿಕಲ್ ಕಾಲೇಜಿಗೆ ಹಣ ಬಿಡುಗಡೆಗೊಳಿಸಿರುವ ರಾಜ್ಯ ಸರ್ಕಾರ ಮಧ್ಯಕರ್ನಾಟಕದ ಬಯಲುಸೀಮೆ ಚಿತ್ರದುರ್ಗ ಜಿಲ್ಲೆಯನ್ನು ಕಡೆಗಣಿಸುತ್ತಲೆ ಬರುತ್ತಿದೆ. ಜಿಲ್ಲೆಯ ಜನಪ್ರತಿನಿಧಿಗಳ ಇಚ್ಚಾಶಕ್ತಿಯೇ ಕೊರತೆಯೇ ಇದಕ್ಕೆ ಕಾರಣ. ಕೂಡಲೆ ಚಿತ್ರದುರ್ಗ ಮೆಡಿಕಲ್ ಕಾಲೇಜಿಗೆ ಹಣ ಮಂಜೂರು ಮಾಡಿ ಡೀನ್ ನೇಮಕ ಮಾಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಜಿಲ್ಲೆಯ ಎಲ್ಲಾ ಶಾಸಕರುಗಳ ನಿವಾಸದ ಎದುರು ಪ್ರತಿಭಟನೆ ನಡೆಸಿ ಭಿಕ್ಷೆ ಎತ್ತಿ ಸರ್ಕಾರಕ್ಕೆ ಹಣ ನೀಡುವುದಾಗಿ ಕರ್ನಾಟಕ ನವ ನಿರ್ಮಾಣ ಸೇನೆ ಜಿಲ್ಲಾಧ್ಯಕ್ಷ ಕೆ.ಟಿ.ಶಿವಕುಮಾರ್ ಎಚ್ಚರಿಸಿದರು.
ಕರ್ನಾಟಕ ನವ ನಿರ್ಮಾಣ ಸೇನೆ ತಾಲ್ಲೂಕು ಅಧ್ಯಕ್ಷ ಟಿ.ಆನಂದ್, ಯುವ ಘಟಕದ ಅಧ್ಯಕ್ಷ ಶಶಾಂಕ್, ನಗರ ಘಟಕದ ಅಧ್ಯಕ್ಷ ಗೋಪಿ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ವೀಣಗೌರಣ್ಣ, ಸುನಂದಮ್ಮ, ನಾಗರತ್ನ, ರತ್ನಮ್ಮ, ಓಬಳೇಶ, ರಘು, ಪ್ರವೀಣ್, ಮಾರುತಿ ಇನ್ನು ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.