ನಿತ್ಯವಾಣಿ, ಚಿತ್ರದುರ್ಗ, (ಜೂ.8) : ಕೊರೋನಾ ಸಂಕಷ್ಟ ಕಾಲದಲ್ಲಿ ಮಂಗಳಮುಖಿಯರು ಬೀದಿಯಲ್ಲಿ ಭಿಕ್ಷೆ ಬೇಡಬಾರದು ಎನ್ನುವ ಕಾರಣಕ್ಕಾಗಿ ಆಹಾರ ಧಾನ್ಯದ ಕಿಟ್‍ಗಳನ್ನು ವಿತರಿಸಿದ್ದೇವೆ ಎಂದು ಸಂಸದ ಎ.ನಾರಾಯಣಸ್ವಾಮಿ ತಿಳಿಸಿದರು.
ಸರ್ಕಾರಿ ವಿಜ್ಞಾನ ಕಾಲೇಜು ಮುಂಭಾಗವಿರುವ ಸಮಾಜ ಕಲ್ಯಾಣ ಇಲಾಖೆಯಲ್ಲಿ ಮಂಗಳವಾರ 46 ಮಂಗಳಮುಖಿಯರಿಗೆ ಆಹಾರ ಧಾನ್ಯದ ಕಿಟ್‍ಗಳನ್ನು ವಿತರಿಸಿ ಮಾತನಾಡಿದ ಸಂಸದ ಎ.ನಾರಾಯಣಸ್ವಾಮಿ ನೀವುಗಳು ನಿವೇಶನ ಕೇಳಿದ್ದೀರ. ಇದಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಹಾಗೂ ಸಮಾಜ ಕಲ್ಯಾಣ ಇಲಾಖೆಗೆ ಅರ್ಜಿ ನೀಡಿ ಇನ್ನು ಹತ್ತು ದಿನದೊಳಗೆ ಅಧಿಕಾರಿಗಳು ಹಾಗೂ ನಿಮ್ಮ ಜೊತೆ ಸಭೆ ನಡೆಸಿ ನಿವೇಶನ ಕೊಡಿಸುವುದಾಗಿ ಭರವಸೆ ನೀಡಿದರು.ಸ್ವಾವಲಂಭಿಗಳಾಗಿ ಬದುಕಲು ನೌಕರಿ ನೀಡಬೇಕೆಂಬ ಬೇಡಿಕೆಯಿಟ್ಟಿದ್ದೀರ, ಕೊರೋನಾ ಅವಧಿಯಲ್ಲಿ ತಾತ್ಕಾಲಿಕ ಹುದ್ದೆ ನೀಡುವ ಅವಕಾಶವಿದ್ದು, ಈ ಸಂಬಂಧವೂ ಅಧಿಕಾರಿಗಳ ಜೊತೆ ಚರ್ಚಿಸುತ್ತೇನೆ. ಸ್ವಯಂ ಉದ್ಯೋಗ ಕೈಗೊಳ್ಳವ ಆಸಕ್ತಿ ನಿಮ್ಮಲ್ಲಿ ಯಾರಿಗಾದರೂ ಇದ್ದರೆ ಅದಕ್ಕೂ ಕೂಡ ಅವಕಾಶ ಮಾಡಿಕೊಡುತ್ತೇನೆ. ನಾನು ಭರವಸೆ ನೀಡಿದ ಮೇಲೆ ಹುಸಿಯಾಗುವುದಿಲ್ಲ. ಮಂಗಳಮುಖಿಯರೆಂದು ಕೀಳರಿಮೆ ನಿಮ್ಮಲ್ಲಿ ಬೇಡ. ಸಮಾಜದಲ್ಲಿ ನೀವುಗಳು ಎಲ್ಲರಂತೆ ಸಮಾನವಾಗಿ ಬದುಕಬೇಕೆಂಬುದು ನಮ್ಮ ಆಸೆ. ಸಮಾಜ ಕಲ್ಯಾಣ ಇಲಾಖೆಯಿದೆ. ನಿಮ್ಮ ಸಮಸ್ಯೆಗಳಿಗೆ ಸ್ಪಂದಿಸಲಿದೆ. ಕೊರೋನಾ ಎರಡನೆ ಹಂತದ ಅಲೆ ತೀವ್ರವಾಗಿರುವುದರಿಂದ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸ್ಯಾನಿಟೈಸ್ ಬಳಸಿ ಸಾಮಾಜಿಕ ಅಂತರ ಕಾಪಾಡಿಕೊಂಡು ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಿ ಎಂದು ಮಂಗಳಮುಖಿಯರಲ್ಲಿ ಸಂಸದರು ಮನವಿ ಮಾಡಿದರು. ಸಂಸದ ಎ.ನಾರಾಯಣಸ್ವಾಮಿರವರಿಗೆ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಪರಮೇಶ್ವರಪ್ಪ ಡಾ.ಬಿ.ಆರ್.ಅಂಬೇಡ್ಕರ್‍ರವರ ಬೃಹತ್ ಭಾವಚಿತ್ರವನ್ನು ನೀಡಿದರು
ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಟಿ.ಗುರುಮೂರ್ತಿ, ಬಿಜೆಪಿ.ಜಿಲ್ಲಾಧ್ಯಕ್ಷ ಎ.ಮುರಳಿ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಮಮತ, ಸಹಾಯಕ ನಿರ್ದೇಶಕ ಪರಮೇಶ್ವರಪ್ಪ, ಬಿಜೆಪಿ.ವಕ್ತಾರ ನಾಗರಾಜ್‍ಬೇದ್ರೆ ವೇದಿಕೆಯಲ್ಲಿದ್ದರು. ಸುದ್ದಿಗಾಗಿ 👉 ನಿತ್ಯವಾಣಿ ಕನ್ನಡ ದಿನಪತ್ರಿಕೆ, ಸಂಪಾದಕರು ಎಸ್ ಟಿ ನವೀನ್ ಕುಮಾರ್, ಚಿತ್ರದುರ್ಗ, ಮೊಬೈಲ್ -9901254020