ಸಚಿವ ಉಮೇಶ್ ಕತ್ತಿ ಹೃದಯಾಘಾತದಿಂದ ವಿಧಿವಶ

ನಿತ್ಯವಾಣಿ ನ್ಯೂಸ್, ಬೆಂಗಳೂರು:  ರಾಜ್ಯದ ಆಹಾರ ಮತ್ತು ಅರಣ್ಯ ಖಾತೆ ಸಚಿವ ಉಮೇಶ್ (61) ಕತ್ತಿ ಅವರು ಹೃದಯಾಘಾತದಿಂದ ಮಂಗಳವಾರ ರಾತ್ರಿ 11.30 ಗಂಟೆಗೆ ವಿಧಿವಶರಾಗಿದ್ದಾರೆ.

ಬೆಂಗಳೂರಿನ ಡಾಲರ್ಸ್ ಕಾಲನಿಯ ತಮ್ಮ ನಿವಾಸದಲ್ಲಿ ರಾತ್ರಿ 10 ಗಂಟೆಗೆ ಎದೆನೋವು ಕಾಣಿಸಿಕೊಂಡು ಬಾತ್ ರೂಂನಲ್ಲಿ ಕುಸಿದು ಬಿದ್ದಿದ್ದು, ಹೃದಯಾಘಾತವಾಗಿದೆ. ಕುಟುಂಬಸ್ಥರು ತಕ್ಷಣವೇ ಅವರನ್ನು ಬೆಂಗಳೂರಿನ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಎಂ.ಎಸ್.ರಾಮಯ್ಯ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಿದರೂ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

ಉಮೇಶ್ ಕತ್ತಿ ಅವರು ಬೆಳಗಾವಿ ಜಿಲ್ಲೆಯ ಹುಕ್ಕೇರಿ ಕ್ಷೇತ್ರದ ಶಾಸಕರಾಗಿದ್ದು, ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರದಲ್ಲಿ ಆಹಾರ ಇಲಾಖೆ ಸಚಿವರಾಗಿದ್ದರು.

ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಬೇಕೆಂಬ ಕನಸು ಹೊತ್ತು ರಾಜ್ಯದಲ್ಲಿ ಅನೇಕ ಬಾರಿ ಸುದ್ದಿಯಲ್ಲಿದ್ದರು. ಈಗೀಗ, ರಾಜ್ಯದ ಮುಖ್ಯಮಂತ್ರಿಯಾಗಬೇಕೆಂಬ ಕನಸು ಸಹ ಕಟ್ಟಿಕೊಂಡು ಈ ವಿಷಯವನ್ನು ತಮ್ಮ ಮನದಾಳದಿಂದ ಬಹಿರಂಗಪಡಿದ್ದರು.

ಆಸ್ಪತ್ರೆಗೆ ಸಚಿವರ ಭೇಟಿ

ಸಚಿವ ಉಮೇಶ್ ಕತ್ತಿ ಅವರು ಹೃದಯಾಘಾತದಿಂದ ಚಿಕಿತ್ಸೆಗೆ ದಾಖಲಾಗಿದ್ದ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ರಾಜ್ಯದ ಸಚಿವರು ಭೇಟಿ ನೀಡಿದ್ದು, ಉಮೇಶ್ ಕತ್ತಿ ನಿಧನದ ಸುದ್ದಿ ತಿಳಿದು ದಿಗ್ಭ್ರಾಂತರಾಗಿದ್ದಾರೆ. ಸಚಿವರಾದ ಡಾ.ಸುಧಾಕರ್, ಆರ್.ಅಶೋಕ್, ಗೋವಿಂದ ಕಾರಜೋಳ, ಸಿ.ಸಿ.ಪಾಟೀಲ್ ಸೇರಿ ಅನೇಕರು ಸಂತಾಪ ಸೂಚಿಸಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ, ವಿಪಕ್ಷ ನಾಯಕ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ಭೇಟಿ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.

ಸಚಿವ ಉಮೇಶ್ ಕತ್ತಿ ಅವರ ಪಾರ್ಥೀವ ಶರೀರವನ್ನು ಬುಧವಾರ ಬೆಳಗ್ಗೆ ಬೆಳಗಾವಿ ಜಿಲ್ಲೆಯ ಹುಟ್ಟೂರಿಗೆ ಕೊಂಡೊಯ್ದು ನಾಳೆ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎನ್ನುವ ಮಾಹಿತಿ ಲಭ್ಯವಾಗಿದೆ.

Leave a Reply

Your email address will not be published.