ನಿತ್ಯವಾಣಿ,ಚಿತ್ರದುರ್ಗ,(ಮೇ.20) : ಜಿಲ್ಲೆಯಲ್ಲಿ ಹೋಂ ಐಸೋಲೇಷನ್‍ನಲ್ಲಿರುವ ಎಲ್ಲ ಕೋವಿಡ್-19 ಸಕ್ರಿಯ ಪ್ರಕರಣಗಳನ್ನು ಕೂಡಲೇ ಕೋವಿಡ್ ಕೇರ್ ಸೆಂಟರ್‍ಗಳಿಗೆ ಸ್ಥಳಾಂತರಿಸಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ.ಕೆ.ಸುಧಾಕರ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಚಿತ್ರದುರ್ಗ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ಹಾಗೂ ಕೋವಿಡ್-19 ಮುನ್ನೆಚ್ಚರಿಕೆ ಕ್ರಮಗಳ ಕುರಿತು ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ಸೋಂಕಿತರನ್ನು ಕೋವಿಡ್ ಕೇರ್ ಸೆಂಟರ್‍ಗಳಿಗೆ ದಾಖಲು ಮಾಡದಿರುವುದು, ಸ್ಯಾಂಪಲ್‍ಗಳ ಪರೀಕ್ಷೆಯನ್ನು ಆಯಾ ದಿನವೇ ಸಿಗುವಂತೆ ನೋಡಿಕೊಳ್ಳದಿರುವುದು ಸೋಂಕು ತೀವ್ರಗತಿಯಲ್ಲಿ ಹರಡಲು ಕಾರಣವಾಗಿದೆ. ಕೋವಿಡ್ ಪರೀಕ್ಷೆ ವರದಿಯನ್ನು 24 ಗಂಟೆಯೊಳಗೆ ನೀಡಬೇಕು. ಪರೀಕ್ಷಾ ಫಲಿತಾಂಶದ ವರದಿ ಬಂದ ಐದು ಗಂಟೆಯೊಳಗೆ ಕೋವಿಡ್ ಕೇರ್ ಸೆಂಟರ್‍ಗೆ ಸೋಂಕಿತರನ್ನು ಸ್ಥಳಾಂತರಿಸಬೇಕು ಎಂದು ತಿಳಿಸಿದರು.
ಜಿಲ್ಲೆಯ ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಕೋವಿಡ್ ಕೇರ್ ಸೆಂಟರ್ ಸ್ಥಾಪನೆ ಮಾಡಬೇಕು. ಕೋವಿಡ್-19 ಸೋಂಕು ದೃಢಪಟ್ಟ ಪ್ರಕರಣಗಳನ್ನು ಕಡ್ಡಾಯವಾಗಿ ಕೋವಿಡ್ ಕೇರ್ ಸೆಂಟರ್‍ಗೆ ದಾಖಲಿಸುವ ವ್ಯವಸ್ಥೆಯಾಗಬೇಕು ಎಂದು ಸೂಚಿಸಿದರು.
ಜಿಲ್ಲೆಯಲ್ಲಿರುವ 3743 ಸಕ್ರಿಯ ಪ್ರಕರಣಗಳಲ್ಲಿ 2488 ಹೋಂ ಐಸೋಲೇಷನ್‍ನಲ್ಲಿವೆ. 263 ಸೋಂಕಿತರು ಕೋವಿಡ್ ಕೇರ್ ಸೆಂಟರ್‍ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 358 ಸೋಂಕಿತರು ಡೆಡಿಕೇಟೆಡ್ ಕೋವಿಡ್ ಕೇರ್ ಸೆಂಟರ್‍ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೋಂ ಐಸೋಲೇಷನ್‍ನಲ್ಲಿ ಚಿಕಿತ್ಸೆ ಪಡೆಯುತ್ತಿರುವರಿಂದ ಕುಟುಂಬದ ಸದಸ್ಯರಿಗೂ ಸೋಂಕು ಹರಡುವ ಸಾಧ್ಯತೆ ಇರುತ್ತದೆ. ಹಾಗಾಗಿ ಕೋವಿಡ್ ಕೇರ್ ಸೆಂಟರ್‍ಗೆ ಸ್ಥಳಾಂತರಿಸಬೇಕು ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಈ ಹಿಂದೆ ಪಾಸಿಟಿವ್ ಪ್ರಮಾಣ ಕೇವಲ ಶೇ.4 ರಷ್ಟು ಇತ್ತು. ಆದರೆ ಈಗ ಪಾಸಿಟಿವ್ ಪ್ರಮಾಣ ಶೇ.20ಕ್ಕೆ ಏರಿಕೆಯಾಗಿದ್ದು, ಮುಂದಿನ ದಿನಗಳಲ್ಲಿ ಪಾಸಿಟಿವ್ ಪ್ರಮಾಣ ಏರಿಕೆ ಆಗುವ ಸಾಧ್ಯತೆ ಹೆಚ್ಚಾಗಿದೆ. ಬೇರೆ ಜಿಲ್ಲೆಯಲ್ಲಿ ಸೋಂಕು ಈಗಾಗಲೇ ಏರಿಕೆಯಾಗಿ ಇಳಿಮುಖವಾಗಿದೆ. ಜಿಲ್ಲೆಯಲ್ಲಿ ಏರುಮುಖವಾಗುತ್ತಿದೆ. ಮುಂದಿನ ದಿನಗಳಲ್ಲಿ ತೀವ್ರ ತೊಂದರೆಯಾಗುವ ಸಾಧ್ಯತೆ ಇದೆ. ಈ ಹಿನ್ನಲೆಯಲ್ಲಿ ಕೋವಿಡ್ ನಿಯಂತ್ರಣಕ್ಕಾಗಿ ಜಿಲ್ಲೆಯಲ್ಲಿ ಕಟ್ಟುನಿಟ್ಟಿನ ಕ್ರಮ ಜಾರಿಯಾಗಬೇಕು ಎಂದು ತಾಕೀತು ಮಾಡಿದರು.
ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಟಾಸ್ಕ್‍ಪೋರ್ಸ್ ಸಮಿತಿ ಅನುಷ್ಠಾನ ಮಾಡಬೇಕು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳು ಅನುಷ್ಠಾನಗೊಳಿಸಬೇಕು. ಕೋವಿಡ್ ಆಸ್ಪತ್ರೆಗಳ ಮೇಲ್ವಿಚಾರಣೆಗೆ ಹಿರಿಯ ಅಧಿಕಾರಿಗಳನ್ನು ನಿಯೋಜಿಸಿ, ಜಿಲ್ಲಾ ಆಸ್ಪತ್ರೆಗೆ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗುವುದು ಎಂದು ಹೇಳಿದರು.
ಆಕ್ಸಿಜನ್ ಹೆಚ್ಚಳಕ್ಕೆ ಕ್ರಮ: ಜಿಲ್ಲೆಯಲ್ಲಿ ಆಕ್ಸಿಜನ್ ಪ್ರಮಾಣ ಹೆಚ್ಚಳಕ್ಕೆ ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದು ಸಚಿವರು ಭರವಸೆ ನೀಡಿದರು. ಜಿಲ್ಲೆಗೆ ಅಗತ್ಯವಿರುವ ನಾಲ್ಕು ಕೆ.ಎಲ್. ಹೆಚ್ಚುವರಿ ಆಕ್ಸಿಜನ್ ಬೇಡಿಕೆ ಇದೆ. ಈ ಕುರಿತು ಪರಿಶೀಲನೆ ಮಾಡಿ ಆಕ್ಸಿಜನ್ ಪೂರೈಕೆಗೆ ಕ್ರಮಕೈಗೊಳ್ಳಲಾಗುವುದು ಎಂದರು. ಜಿಲ್ಲೆಗೆ 30 ಆಕ್ಸಿಜನ್ ಕಾನ್ಸ್‍ಟ್ರೇಟರ್‍ಗಳನ್ನು ಜಿಲ್ಲಾಡಳಿತಕ್ಕೆ ಒಪ್ಪಿಸಲಾಯಿತು.
ರೋಗಿಗಳ ಸಂಪೂರ್ಣ ವಿವರವನ್ನು ಆನ್‍ಲೈನ್‍ನಲ್ಲಿ ಕಡ್ಡಾಯವಾಗಿ ದಾಖಲಿಸಬೇಕು. ಇದರಿಂದ ರೋಗಿಗಳಿಗೆ ಅಗತ್ಯವಿರುವ ಎಲ್ಲ ಔಷಧಿಗಳು ಕಳಿಹಿಸಿಕೊಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ವಾರದೊಳಗೆ ವೈದ್ಯರ ನೇಮಕ: 3 ವೈದ್ಯರು, 9 ತಜ್ಞ ವೈದ್ಯರು, ಜಿಲ್ಲಾ ಆಸ್ಪತ್ರೆಗೆ 1 ಹುದ್ದೆ ಖಾಲಿ ಇದೆ. ಅವುಗಳನ್ನು ತಕ್ಷಣ ನೇಮಕ ಮಾಡಿ ಕಳುಹಿಸಲಾಗುವುದು. ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡುವ ವೈದ್ಯರಿಗೆ ಹೆಚ್ಚಿನ ವೇತನ ನೀಡಿ ಹೊಸದಾಗಿ ನೇಮಕ ಮಾಡಿಕೊಳ್ಳಬೇಕು. ವೈದ್ಯಕೀಯ ವಿದ್ಯಾರ್ಥಿಗಳನ್ನು ನಿಯೋಜಿಸಿ ಅವರಿಗೆ ನಿಗಧಿತ ಸಂಭಾವನೆ ನೀಡಿ ಎಂದು ಜಿಲ್ಲಾಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು.
ಎಬಿಆರ್‍ಕೆ ಅಡಿ ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ತಕ್ಷಣ ಚಿಕಿತ್ಸೆ ನೀಡಲು ನೋಡಲ್ ಅಧಿಕಾರಿಗಳಿಗೆ ಸೂಚನೆ ನೀಡಿದರು. ಬ್ಲ್ಯಾಂಕ್ ಫಂಗಸ್ ಕುರಿತು ತಜ್ಞರ ವೈದ್ಯರ ಸಮಿತಿ ರಚನೆ ಮಾಡಲಾಗಿದ್ದು, ಕೇಂದ್ರ ಸರ್ಕಾರದಿಂದ ಔಷಧಿ ವಿತರಣೆಯಾಗಬೇಕಾಗಿದ್ದು, ಔಷಧಿ ಪೂರೈಕೆಯಾದ ತಕ್ಷಣ ವಿತರಣೆಗೆ ಕ್ರಮಕೈಗೊಳ್ಳಲಾಗುವುದು. ಬ್ಲ್ಯಾಂಕ್ ಫಂಗಸ್‍ಗೆ ಉಚಿತ ಚಿಕಿತ್ಸೆ ನೀಡುವ ಕುರಿತು ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.
ಕೋವಿಡ್ ನಿಯಂತ್ರಣದಲ್ಲಿ ಸರ್ಕಾರದ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡದ ಕಾರಣಕ್ಕೆ ಜಿಲ್ಲೆಯಲ್ಲಿ ಸೋಂಕು ಏರಿಕೆಯಾಗುತ್ತಿದೆ. ಹಾಗಾಗಿ ಜಿಲ್ಲಾಡಳಿತ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು ಎಂದರು.
ಸಭೆಯಲ್ಲಿ ಶಾಸಕರಾದ ಜಿ.ಹೆಚ್.ತಿಪ್ಪಾರೆಡ್ಡಿ, ಎಂ.ಚಂದ್ರಪ್ಪ, ಪೂರ್ಣಿಮಾ ಕೆ.ಶ್ರೀನಿವಾಸ್, ಟಿ.ರಘುಮೂರ್ತಿ, ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾರ ಸೇರಿದಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.