ಬೆಂಗಳೂರು: ಕೊರೊನಾ ವೈರಸ್ ಆರ್ಭಟಿಸುತ್ತಿದ್ದ ಕಾಲಘಟ್ಟದಲ್ಲಿ ರಾಜ್ಯದ ಆರೋಗ್ಯ ಸಚಿವರಾಗಿದ್ದ ಡಾ. ಕೆ. ಸುಧಾಕರ್, ವೈದ್ಯಕೀಯ ಶಿಕ್ಷಣ ಇಲಾಖೆಯ ಹೆಚ್ಚುವರಿ ಹೊಣೆಯನ್ನೂ ಹೊತ್ತಿದ್ದರು. ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕನ್ನು ಸಮರ್ಥವಾಗಿ ನಿಗ್ರಹಿಸುವ ವಿಚಾರದಲ್ಲಿ ಡಾ. ಕೆ. ಸುಧಾಕರ್ ವಹಿಸಿದ್ದ ಪಾತ್ರಕ್ಕೆ ವ್ಯಾಪಕ ಪ್ರಶಂಸೆಯೂ ವ್ಯಕ್ತವಾಗಿತ್ತು.
ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಗಳೆರಡರ ನಡುವೆ ಸಾಕಷ್ಟು ಸಾಮ್ಯತೆ ಹಾಗೂ ನಂಟು ಇರುವ ಕಾರಣ, ಎರಡೂ ಇಲಾಖೆಗಳನ್ನು ಒಬ್ಬರೇ ಸಚಿವರಿಗೆ ವಹಿಸುವುದು ಸೂಕ್ತ ಎನ್ನುವ ಕಾರಣಕ್ಕೆ ಈ ಹಿಂದೆ ರಾಜ್ಯ ಸರ್ಕಾರ ಡಾ. ಕೆ. ಸುಧಾಕರ್‌ಗೆ ಎರಡೂ ಇಲಾಖೆಗಳ ಹೊಣೆ ನೀಡಿತ್ತು. ಒಂದರ್ಥದಲ್ಲಿ ಸಿಎಂ ಯಡಿಯೂರಪ್ಪ ಆಗ ತೆಗೆದುಕೊಂಡ ನಿರ್ಧಾರದಿಂದಾಗಿಯೇ ಕೊರೊನಾ ವೈರಸ್ ವಿರುದ್ಧದ ಸಮರದಲ್ಲಿ ರಾಜ್ಯ ಪರಿಣಾಮಕಾರಿಯಾಗಿ ಹೋರಾಡುವಲ್ಲಿ ಯಶಸ್ವಿಯಾಯ್ತು ಅನ್ನೋದ್ರಲ್ಲಿ ಅತಿಶಯೋಕ್ತಿ ಇಲ್ಲ. ಆದ್ರೆ, ಇದೀಗ ಎರಡೂ ಇಲಾಖೆಗಳ ಸಚಿವರ ಬದಲಾವಣೆ ಆಗಿದೆ. ಆರೋಗ್ಯ ಇಲಾಖೆಯ ಹೊಣೆಯನ್ನು ಡಾ. ಕೆ. ಸುಧಾಕರ್ ಅವರಿಗೇ ನೀಡಲಾಗಿದೆ. ಆದ್ರೆ, ವೈದ್ಯಕೀಯ ಶಿಕ್ಷಣ ಇಲಾಖೆ ಜೆ. ಸಿ. ಮಾಧುಸ್ವಾಮಿ ಅವರ ಹೆಗಲೇರಿದೆ.
ಈ ಕುರಿತಂತೆ ನೆಟ್ಟಿಗರು ಸರ್ಕಾರಕ್ಕೆ ಚಾಟಿ ಬೀಸುತ್ತಿದ್ದಾರೆ. ಸ್ವತಃ ವೈದ್ಯರಾದ ಡಾ. ಕೆ. ಸುಧಾಕರ್ ಅವರಿಗೆ ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಯ ಹೊಣೆಗಾರಿಕೆಯನ್ನು ಸರ್ಕಾರ ನೀಡಿದ್ದಾಗ ಸಂತಸ ವ್ಯಕ್ತಪಡಿಸಿದ್ದೆವು. ಸುಧಾಕರ್ ಅವರು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಆದ್ರೆ, ಅವರಿಂದ ವೈದ್ಯಕೀಯ ಶಿಕ್ಷಣ ಇಲಾಖೆಯ ಹೊಣೆಗಾರಿಕೆ ವಾಪಸ್ ಪಡೆದಿದ್ದು ನಿಜಕ್ಕೂ ಬೇಸರ ತಂದಿದೆ ಎಂದು ಸ್ವತಃ ವೈದ್ಯರಾದ ಡಾ. ಶ್ರೀಕಾಂತ್ ವಲಸಪಲ್ಲಿ ಅವರು ಆಕ್ರೋಶ ಹೊರಹಾಕಿದ್ದಾರೆ. ಈ ಸಂಬಂಧ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ. ಪಿ. ನಡ್ಡಾ ಅವರನ್ನೂ ತಮ್ಮ ಟ್ವೀಟ್‌ನಲ್ಲಿ ಟ್ಯಾಗ್ ಮಾಡಿದ್ದಾರೆ.