ಸಂಪುಟದಿಂದ ಯೋಗೀಶ್ವರ್ ಅವರನ್ನು ಕಿತ್ತೆಸೆಯುವಂತೆ ಕೆಲವು ಶಾಸಕರ ನಿಯೋಗ ಸಿಎಂ ಬಳಿ ಒತ್ತಡ..!

ನಿತ್ಯವಾಣಿ,ಬೆಂಗಳೂರು, (ಮೇ.30) : ತಮ್ಮ ನಾಯಕತ್ವದ ವಿರುದ್ಧ ಪಿತೂರಿ ನಡೆಸುತ್ತಿರುವ ಯೋಗೀಶ್ವರ್ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕೆಂದು ಒತ್ತಾಯಿಸಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನಿಷ್ಟ ಬಣ ಇಂದು ದೂರು ನೀಡಿದೆ. ಕಾವೇರಿ ನಿವಾಸದಲ್ಲಿ ಸಿ.ಎಂ ರಾಜಕೀಯ ಕಾಯ೯ದರ್ಶಿ ಎಂ.ಪಿ.ರೇಣುಕಾಚಾರ್ಯ ಸೇರಿದಂತೆ ಒಟ್ಟು 18 ಶಾಸಕರು ಭೇಟಿಯಾಗಿ
ಸಚಿವ ಯೋಗೀಶ್ವರ್ ಅವರನ್ನು ಸಂಪುಟದಿಂದ ಕಿತ್ತುಹಾಕುವಂತೆ ಮನವಿ ಮಾಡಿದರು.

ಶಾಸಕರಾದ , ರಾಜೂ ಗೌಡ, ಬಸವರಾಜ ದಡೆಸಗೂರು, ಬೆಳ್ಳಿ ಪ್ರಕಾಶ್, ನಿರಂಜನ ಕುಮಾರ್ ಸೇರಿ 18ಕ್ಕೂ ಹೆಚ್ಚು ಶಾಸಕರು ಸಿಎಂ ಭೇಟಿಯಾಗಿದ್ದಾರೆ. ಸಿ.ಪಿ ಯೋಗೇಶ್ವರ್ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರದಲ್ಲಿ ನಡೆಸುತ್ತಿರುವ ಬೆಳವಣಿಗೆಗಳ ಬಗ್ಗೆ ಸಿಎಂಗೆ ಮಾಹಿತಿ ನೀಡಿದರು.ಚನ್ನಪಟ್ಟಣದಲ್ಲಿ ಸೋತು ಸುಣ್ಣವಾಗಿ ಸುಣ್ಣವಾಗಿದ್ದ ಯೋಗೀಶ್ವರ್ ಅವರನ್ನು ವಿಧಾನಪರಿಷತ್ ಗೆ ನಾಮಕರಣ ಮಾಡಿ ಮಂತ್ರಿ ಸ್ಥಾನವನ್ನು ನೀಡಲಾಗಿದೆ. ‌ಆದರೂ ನಿಮ್ಮ ವಿರುದ್ಧ ಷಡ್ಯಂತ್ರ ನಡೆಸುತ್ತಿದ್ದಾರೆ. ಹೀಗಾಗಿ ಅವರನ್ನು ಮುಲಾಜಿಲ್ಲದೆ ಸಂಪುಟದಿಂದ ಕಿತ್ತುಹಾಕಬೇಕೆಂದು ಒತ್ತಾಯ ಮಾಡಿದರು.

ಸಭೆಯ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ರೇಣುಕಾಚಾಯ೯ ಅವರು,ಇಂದು ೧೮ ಶಾಸಕರು ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದೇವು.ಕೊರೊನ ತೊಲಗಿಸಲು ನಾವು ಕ್ಷೇತ್ರದಲ್ಲಿ ಯಾವ ರೀತಿ ಕೆಲಸ
ಮಾಡುತ್ತಿದ್ದೇವೆ ಎನ್ನುವುದನ್ನು ‌ತಿಳಿಸಿದ್ದೇವೆ‌ ಎಂದು ಹೇಳಿದರು. ಯಾವ ರೀತಿ ಸೊಂಕಿತರಿಗೆ ಆಕ್ಸಿಜನ್ , ಬೆಡ್ , ಊಟದ ವ್ಯವಸ್ಥೆ, ಮಾಡ್ತಾಯಿದ್ದೀವಿ ಎಂದು ಸಿಎಂ ಯಡಿಯೂರಪ್ಪ ಗೆ ಮಾಹಿತಿ ನೀಡಿದೆವು. ಕ್ಷೇತ್ರದಲ್ಲಿ ಕೋವಿಡ್ ನಿರ್ವಹಣೆ ಬಗ್ಗೆ ಮಾಹಿತಿ ನೀಡಿದೆವು ಎಂದರು.

ಮುಂದು ಸಹ ಕೊವಿಡ್ ವಿರುದ್ಧ ಹೋರಾಟ ಮಾಡ್ತಿವಿ ಅದಕ್ಕೆ ನಿಮ್ಮ ಸಹಕಾರ ಬೇಕು ಎಂದು ಸಿಎಂ ಯಡಿಯೂರಪ್ಪ ಅವರನ್ನ ಕೇಳಿದ್ದೀವೆ.ಅದಕ್ಕೆ ಸಂಪೂರ್ಣ ಸಹಕಾರ ಕೊಡುವ ಭರವಸೆಯನ್ನು ನೀಡಿದ್ದಾರೆ ಎಂದು ತಿಳಿಸಿದರು. ಕಳೆದ ವಾರ ಸಿ.ಪಿ. ಯೋಗೇಶ್ವರ್ ಕರ್ನಾಟಕದಲ್ಲಿ ಬಿಜೆಪಿಯ ವರ್ತನೆಯ ಬಗ್ಗೆ ಅಸಮಾಧಾನ ಹೊರಹಾಕಿದ್ದರು. ನನ್ನ ಇಲಾಖೆಯಲ್ಲಿ ಬೇರೊಬ್ಬರ ಹಸ್ತಕ್ಷೇಪವನ್ನು ನಾನು ಸಹಿಸುವುದಿಲ್ಲ. ಕರ್ನಾಟಕದಲ್ಲಿ ಬಿಜೆಪಿ ಬಿಜೆಪಿಯಾಗಿ ಉಳಿದಿಲ್ಲ. ಜೆಡಿಎಸ್ ಜೊತೆ ಬಿಜೆಪಿಗೆ ಹೊಂದಾಣಿಕೆಯಿದೆ ಎಂದು ಸ್ವಪಕ್ಷದವರ ವಿರುದ್ಧವೇ ಸಿ.ಪಿ. ಯೋಗೇಶ್ವರ್ ಹರಿಹಾಯ್ದಿದ್ದರು.

ನನ್ನ ಅಧಿಕಾರದಲ್ಲಿ ನನ್ನ ಮಗ ಮೂಗು ತೂರಿಸುವುದು ಸರಿಯಲ್ಲ. ಆದರೆ, ಕರ್ನಾಟಕದಲ್ಲಿ ಇದೇ‌ ನಡೆಯುತ್ತಿದೆ ಎನ್ನುವ ಮೂಲಕ ಸರ್ಕಾರದ ಆಡಳಿತದಲ್ಲಿ ಸಿಎಂ ಯಡಿಯೂರಪ್ಪನವರ ಮಗ ಬಿ.ವೈ. ವಿಜಯೇಂದ್ರ ಹಸ್ತಕ್ಷೇಪ ಮಾಡುವ ಬಗ್ಗೆ ಪರೋಕ್ಷವಾಗಿ ಸಿ.ಪಿ. ಯೋಗೇಶ್ವರ್ ಆಕ್ಷೇಪ ವ್ಯಕ್ತಪಡಿಸಿದ್ದರು.

ನಮ್ಮ ಪಕ್ಷದ ಕೆಲವು ಸ್ನೇಹಿತರು ನನ್ನ ಬಗ್ಗೆ ಮಾತನಾಡುತ್ತಿರುವುದು ಗೊತ್ತು. ಅದನ್ನು ಮಾತನಾಡಿಸುತ್ತಿರುವುದು ಯಾರೆಂಬ ಬಗ್ಗೆಯೂ ಗೊತ್ತು. ಇದು ಶುದ್ಧ ಬಿಜೆಪಿ ಸರ್ಕಾರ ಆಗಿ ಉಳಿದಿಲ್ಲ. ಮೂರು ಗುಂಪಿನ ಸರ್ಕಾರ ಆಗಿದೆ. ಮೂರು ರಾಜಕೀಯ ಪಕ್ಷಗಳು ಹೊಂದಾಣಿಕೆ ಮಾಡಿಕೊಂಡಿವೆ. ವಿರೋಧ ಪಕ್ಷಗಳಾದ ಕಾಂಗ್ರೆಸ್, ಜೆಡಿಎಸ್ ಜತೆ ಬಿಜೆಪಿ ಸರ್ಕಾರ ಹೊಂದಾಣಿಕೆ ಮಾಡಿಕೊಂಡಿದೆ ಎಂದು ಸಿ.ಪಿ. ಯೋಗೇಶ್ವರ್ ಬಾಂಬ್ ಸಿಡಿಸಿದ್ದರು.

ಕರ್ನಾಟಕದಲ್ಲಿ ಈಗ ಕೋವಿಡ್ ಕೆಲಸ ಮಾತ್ರ ನಡೆಯುತ್ತಿದೆ. ಬೇರೆ ಯಾವುದೇ ಚಟುವಟಿಕೆಗಳಿಗೆ ಅವಕಾಶ ಇಲ್ಲ. ಶಾಸಕರಿಗೆ ಈ ಹಿಂದೆಯೇ ಸೂಚಿಸಿದ್ದೆ, ಈಗಲೂ ಅದೇ ಸೂಚನೆ ಕೊಡುತ್ತಿದ್ದೇನೆ. ಈಗ ಕೋವಿಡ್ ಕೆಲಸ ಮಾಡಬೇಕು, ಬೇರೆ ರಾಜಕೀಯ ಚಟುವಟಿಕೆ ಮಾಡಬಾರದು ಎಂದು ಭಿನ್ನಮತೀಯ ಶಾಸಕರಿಗೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್​ ಕೂಡ ಎಚ್ಚರಿಕೆ ನೀಡಿದ್ದರು. ಆದರೆ, ಸಿಎಂ ಬಿ.ಎಸ್. ಯಡಿಯೂರಪ್ಪ ಸದ್ಯಕ್ಕೆ ಸೇಫ್ ಆಗಿದ್ದು, ಕರ್ನಾಟಕದಲ್ಲಿ ಸದ್ಯಕ್ಕೆ ನಾಯಕತ್ವ ಬದಲಾವಣೆ ಇಲ್ಲ ಎಂದು ಬಿಜೆಪಿ ಹೈಕಮಾಂಡಿನಿಂದ ಬಂಡಾಯಗಾರರಿಗೆ ಸ್ಪಷ್ಟ ಸಂದೇಶ ರವಾನಿಸಿತ್ತು.

ರಾಜ್ಯದಲ್ಲಿ ಸಿಎಂ ಯಡಿಯೂರಪ್ಪ ಬದಲಾವಣೆ ವಿಚಾರವಾಗಿ ದೆಹಲಿಗೆ ದಂಡಯಾತ್ರೆ ಕೈಗೊಂಡಿದ್ದ ಸಚಿವ ಸಿ.ಪಿ ಯೋಗೇಶ್ವರ್‌, ಶಾಸಕ ಅರವಿಂದ ಬೆಲ್ಲದ್ ಅವರಿಗೆ ಹೈಕಮಾಂಡ್ ನಾಯಕರು ಸಮಯ ನೀಡಿರಲಿಲ್ಲ. ಬಿಜೆಪಿ ನಾಯಕರಾದ ಅರುಣ್ ಸಿಂಗ್, ಜೆಪಿ ನಡ್ಡಾ ಸೇರಿ ಹಲವು ನಾಯಕರ ಭೇಟಿಗೆ ಪ್ರಯತ್ನ ಮಾಡಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಹೀಗಾಗಿ, ನಿರಾಸೆಯಿಂದ ರಾಜ್ಯ ಬಿಜೆಪಿ ನಾಯಕರು ದೆಹಲಿಯಿಂದ ವಾಪಾಸಾಗಿದ್ದರು.

ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಮಾಡಬೇಕೆಂಬ ಒತ್ತಾಯ ಹೆಚ್ಚಾಗುತ್ತಿದ್ದಂತೆ ಬಿಜೆಪಿ ಹೈಕಮಾಂಡ್ ರಾಜ್ಯದ ಬಿಜೆಪಿ ಶಾಸಕರ ಸಭೆ ಕರೆಯುವಂತೆ ಸಿಎಂ ಯಡಿಯೂರಪ್ಪ ಅವರಿಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಹೀಗಾಗಿ, ಜೂನ್ 7ರಂದು ಯಡಿಯೂರಪ್ಪ ಶಾಸಕರ ಸಭೆ ಕರೆದಿದ್ದಾರೆ.

ಸರ್ಕಾರ ಮತ್ತು ಪಕ್ಷದ ನಾಯಕರು ನಡುವಿನ ಅಂತರ, ಸಂಪುಟ ಸಚಿವರ ಒಳಜಗಳ, ಹಾಗೂ ಸಿಎಂ ಪಟ್ಟಕ್ಕಾಗಿ ದೆಹಲಿಯಲ್ಲಿ ವಿವಿಧ ನಾಯಕರು ಲಾಬಿ ನಡೆಸುತ್ತಿದ್ದಾರೆ. ಒಂದು ವೇಳೆ ಹೈಕಮಾಂಡ್ ಒಪ್ಪಿದರೆ ಕರ್ನಾಟಕದಲ್ಲಿ ಸಿಎಂ ಬದಲಾವಣೆ ಖಚಿತ ಎನ್ನುತ್ತಿವೆ ಮೂಲಗಳು. ಸಿಎಂ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪೂರ್ಣ ಅವಧಿಯನ್ನು ಮುಗಿಸಲಿದ್ದಾರೆ ಎಂದು ತೇಪೆ ಹಚ್ಚುತ್ತಿರುವ ಕೆಲವು ನಾಯಕರು ಒಂದೆಡೆಯಾದರೆ ಸದ್ದಿಲ್ಲದೆ ಸಿಎಂ ಯಡಿಯೂರಪ್ಪನವರ ವಿರುದ್ಧ ಸಹಿ ಸಂಗ್ರಹಿಸಿದವರ ತಂಡ ಇನ್ನೊಂದೆಡೆ.

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಡಿಸಿಎಂ ಲಕ್ಷ್ಮಣ ಸವದಿ, ಅರವಿಂದ್ ಬೆಲ್ಲದ, ಬಸವರಾಜ ಬೊಮ್ಮಾಯಿ ಮತ್ತು ಮುರುಗೇಶ್ ನಿರಾಣಿ ಅವರು ಸಿಎಂ ಸ್ಥಾನದ ರೇಸಿನಲ್ಲಿದ್ದಾರೆ ಎನ್ನಲಾಗುತ್ತಿದೆ. ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ವಿರುದ್ಧ ಭ್ರಷ್ಟಾಚಾರ ಆರೋಪ ಕೇಳಿಬಂದಿವೆ. ವಿಜಯೇಂದ್ರ ಆಡಳಿತದಲ್ಲಿ ಮೂಗು ತೂರಿಸುತ್ತಿದ್ದಾರೆ ಎಂದು ಬಿಜೆಪಿ ನಾಯಕರೇ ಅಸಮಾಧಾನವನ್ನೂ ಹೊರಹಾಕಿದ್ದಾರೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಯಡಿಯೂರಪ್ಪ ಅವರ ಬದಲಿಗೆ ಬೇರಾರನ್ನೂ ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಿಸಲು ಹೈಕಮಾಂಡ್ ಸಿದ್ಧವಾಗಿಲ್ಲ ಎಂದೂ ಹೇಳಲಾಗುತ್ತಿದೆ.

.ಎಸ್. ಯಡಿಯೂರಪ್ಪನವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಬೇಕೆಂಬ ಒತ್ತಾಯ ಹೆಚ್ಚಾಗಿದೆ. ಈ ಕುರಿತು ಬಿಜೆಪಿ ಶಾಸಕರಲ್ಲಿ ಕೆಲವರು ಸಹಿಗಳನ್ನು ಸಂಗ್ರಹಿಸಿ ಹೈಕಮಾಂಡ್​ ಬಳಿಯೂ ಹೋಗಿದ್ದರು. ಆದರೆ, ಕರ್ನಾಟಕದಲ್ಲಿ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಸದ್ಯಕ್ಕೆ ಆಸಕ್ತಿ ತೋರದ ಬಿಜೆಪಿ ಹೈಕಮಾಂಡ್ ನಾಯಕರು ರಾಜ್ಯದಲ್ಲಿ ಸದ್ಯಕ್ಕೆ ನಾಯಕತ್ವ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದ್ದರು.

Leave a Reply

Your email address will not be published.