ಮೊಬೈಲ್ ಗೆ ಕರೆಮಾಡುವ ಮುನ್ನ ‘0’ ಕಡ್ಡಾಯ

ಇಂದಿನಿಂದ ಆರಂಭಗೊಂಡು ಮುಂಬರುವ ದಿನಗಳಲ್ಲಿ ಎಲ್ಲಾ ಲ್ಯಾಂಡ್ ಲೈನ್ ಪೋನ್ ಬಳಕೆದಾರರು ಯಾವುದೇ ಮೊಬೈಲ್ ಸಂಖ್ಯೆಗೆ ಕರೆಮಾಡುವ ಮೊದಲು ‘0’ ಸಂಖ್ಯೆಯನ್ನು ಬಳಸಬೇಕು ಎಂದು ಟೆಲಿಕಾಂ ಇಲಾಖೆ ನಿರ್ದೇಶನ ನೀಡಿದೆ.

ದೇಶದ ಪ್ರಸಿದ್ಧ ಟೆಲೆಕಾಮ್ ಸಂಸ್ಥೆಗಳಾಗಿರುವ ಜಿಯೋ. ವೊಡಾಪೋನ್ ಐಡಿಯಾ (VI) ಗಳನ್ನು ಒಳಗೊಂಡಂತೆ ಸರ್ಕಾರಿ ಸ್ವಾಮ್ಯದ BSNL ಲ್ಯಾಂಡ್ ಪೋನ್ ಗಳ ಬಳಕೆದಾರರಿಗೆ ಈ ನಿಯಮ ಅನ್ವಯವಾಗಲಿದೆ ಎನ್ನಲಾಗಿದೆ.

ಮುಂಬರುವ ದಿನಗಳಲ್ಲಿ ಮತ್ತಷ್ಟು ಹೊಸ ಸಂಖ್ಯೆಗಳ ಲಭ್ಯತೆಯನ್ನು ಸುಲಭಗೊಳಿಸುವ ನಿಟ್ಟಿನಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಈ ನಿಯಮದಿಂದಾಗಿ 2544 ಮಿಲಿಯನ್ ಹೊಸ ಸಂಖ್ಯೆಗಳನ್ನು ಸೇರಿಸಬಹುದಾಗಿದೆ ಎಂದು ಇಲಾಖೆ ತಿಳಿಸಿದೆ.

2021 ರ ಜನವರಿ 15 ರಿಂದ ಯಾವುದೇ ಮೊಬೈಲ್ ಸಂಖ್ಯೆಗೆ ಕರೆಮಾಡುವ ಮೊದಲು ‘0’ ಸಂಖ್ಯೆಯನ್ನು ಬಳಸುವುದನ್ನು ದಯವಿಟ್ಟು ನೆನಪಿನಲ್ಲಿಟ್ಟುಕೊಳ್ಳಿ ಎಂದು ತನ್ನ ಗ್ರಾಹಕರಿಗೆ ಮಾಹಿತಿ ನೀಡಿರುವ ಜಿಯೋ ಸಂಸ್ಥೆ, ಟೆಲಿಕಾಂ ಇಲಾಖೆ (DoT)ನಿರ್ದೇಶನದ ಮೇರೆಗೆ ಈ ನಿಯಮವನ್ನು ಜಾರಿಗೊಳಿಸಲಾಗಿದೆ ಎಂದಿದೆ.

ಕಳೆದ ನವೆಂಬರ್ ನಲ್ಲಿ ಟೆಲಿಕಾಂ ಇಲಾಖೆ TRAI’s ಪ್ರಸ್ತಾಪವನ್ನು ಒಪ್ಪಿಕೊಂಡಿದ್ದು,ಇದರ ಅನ್ವಯ ಮುಂಬರುವ ದಿನಗಳಲ್ಲಿ ಎಲ್ಲಾ ಟೆಲಿಪೋನ್ ಬಳಕೆದಾರರು ಮೊಬೈಲ್ ಸಂಖ್ಯೆಗಳಿಗೆ ಕರೆಮಾಡುವ ಮುನ್ನ ‘0’ ಸಂಖ್ಯೆಯನ್ನು ಬಳಸಬೇಕು ಎಂದು ತನ್ನ ವೆಬ್ ಸೈಟ್ ನಲ್ಲಿ ಬರೆದುಕೊಂಡಿತ್ತು. ಆದರೆ ಇಂದಿನವರೆಗೂ ಎಲ್ಲಾ ಟೆಲಿಪೋನ್ ಸಂಸ್ಥೆಗಳು ತಮ್ಮ ಲ್ಯಾಂಡ್ ಲೈನ್ ಗ್ರಾಹಕರು ಈ ನಿಯಮವನ್ನು ಕಡ್ಡಾಯವಾಗಿ ಪಾಲಿಸುವಂತೆ ತಿಳಿಸಿರಲಿಲ್ಲ ಎಂದು ವರದಿಯಾಗಿದೆ.

Leave a Reply

Your email address will not be published.