ಏನ್ ಎಸ್ ವಿ ಶಸ್ತ್ರಚಿಕಿತ್ಸೆ ದಾಂಪತ್ಯ ಜೀವನಕ್ಕೆ ಯಾವುದೇ ಸಮಸ್ಯೆ ಕೂಡ ಆಗದು : ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ರೇಣುಕಾಪ್ರಸಾದ್

ನಿತ್ಯವಾಣಿ,ಚಿತ್ರದುರ್ಗ, (ಅ.19) : ಪುರುಷರ ಸಂತಾನ ಶಕ್ತಿ ಹರಣ ಮಾಡುವ ವ್ಯಾಸೆಕ್ಟೆಮಿ ಕುಟುಂಬ ಯೋಜನೆಯ ಉತ್ತಮ ವಿಧಾನ. ಈ ವಿಧಾನದಿಂದ ಮಹಿಳೆಯರ ಮೇಲಿನ ಒತ್ತಡ ಕಡಿಮೆ ಮಾಡಬಹುದು. ನಿಜವಾಗಿಯೂ ಹೆಂಡತಿಯನ್ನು ಪ್ರೀತಿಸುವ ಪರುಷರು ಎನ್.ಎಸ್.ವಿ ಮಾಡಿಸಿಕೊಳ್ಳಿ, ಈ ಶಸ್ತ್ರ ಚಿಕಿತ್ಸೆಯಿಂದ ದಾಂಪತ್ಯ ಜೀವನಕ್ಕೆ ಯಾವುದೇ ಸಮಸ್ಯೆ ಕೂಡ ಆಗದು. ತಪ್ಪು ತಿಳುವಳಿಕೆಗೆ ಒಳಗಾಗದೆ ನಿಮ್ಮ ಕುಟುಂಬದ ಒಳಿತಿಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಎನ್.ಎಸ್. ವಿ.ಮಾಡಿಸಿಕೊಳ್ಳಿ. ಎಂದು ಚಿತ್ರದುರ್ಗ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ರೇಣುಕಾ ಪ್ರಸಾದ್‌ ಹೇಳಿದರು.
ಅವರು ಸೋಮವಾರ ತಾಲ್ಲೂಕಿನ ಬೆಳಗಟ್ಟ ಪ್ರಾಥಮಿಕ ಆರೋಗ್ಯ ಕೇಂದ್ರವು ಜಿಲ್ಲಾ ಕುಟುಂಬ ಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ ಚಿತ್ರದುರ್ಗದ ಹೋ.ಚಿ.ಬೋರಯ್ಯನಹಟ್ಟಿ ಗ್ರಾಮದ ನಿರಾಶ್ರಿತರ ಪುನರ್ವಸತಿ ಕೇಂದ್ರದಲ್ಲಿ ಆಯೋಜಿಸಿದ್ದ ‘ವಿಶೇಷ ಎನ್.ಎಸ್.ವಿ.ಶಸ್ತ್ರಚಿಕಿತ್ಸಾ ಶಿಬಿರ” ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ಧ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಮೂಗಪ್ಪ ಮಾತನಾಡಿ ” ಪುರುಷರು ಎನ್.ಎಸ್. ವಿ. ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವುದರಿಂದ ಬಾಣಂತಿ ತಾಯಿ ಹಾಗು ಶಿಶು ಮರಣ ಸಂಖ್ಯೆಯನ್ನು ತಪ್ಪಿಸಬಹುದು, ಎನ್.ಎಸ್.ವಿ ಪ್ರಕ್ರಿಯೆಗೆ ಕೇವಲ 5ರಿಂದ 10ನಿಮಿಷ ಸಾಕು”ಎಂದು ಗ್ರಾಮಸ್ಥರಿಗೆ ತಿಳಿ ಹೇಳಿದರು.
ನಿರಾಶ್ರಿತರ ಕೇಂದ್ರದ ಅಧೀಕ್ಷಕ ಮಹದೇವಯ್ಯ ಅಧ್ಯಕ್ಷತೆ ವಹಿಸಿದ್ದ ಈ ಕಾರ್ಯಕ್ರಮದಲ್ಲಿ ಬೆಳಗಟ್ಟ ಆರೋಗ್ಯ ಸಿಬ್ಬಂದಿಗಳಾದ ಡಿ.ಮಹೇಶ್, ಶ್ರೀಮತಿ ಭಾರತಿ, ಕು.ಮಂಜುಶ್ರೀ, ಯೋಗ ಇನ್ಸಟ್ರಕ್ಟರ್ ಕೆ.ರವಿಅಂಬೇಕರ್, ಲಲಿತ ಬೇದ್ರೆ, ಆಶಾ ಕಾರ್ಯಕರ್ತೆಯರಾದ ಸವಿತಾ,ಮಹದೇವಿ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published.