400 ವರ್ಷಗಳಿಂದ ಒಂದೇ ಮನೆಯಲ್ಲಿ ಬದುಕು….!

ಗಂಡ-ಹೆಂಡತಿ-ಮಕ್ಕಳಿಗೆ ಹೊಂದಾಣಿಕೆಯಾಗದೇ ಕೋರ್ಟ್ ಕಛೇರಿಗೆ ಅಲೆದಾಡುವ ಈ ದಿನಗಳಲ್ಲಿ ಧಾರವಾಡ ಜಿಲ್ಲೆಯ ಲೋಕೂರಿನ ನರಸಿಂಗನವರ ಎಂಬ ಜೈನ ಮನೆತನದವರು 400 ವರ್ಷಗಳಿಂದ ಒಂದೇ ಮನೆಯಲ್ಲಿ ಜೇನುಗೂಡಿನಂತೆ ಬದುಕುತ್ತಿದ್ದಾರೆ..

ಮಹಾರಾಷ್ಟ್ರದ ಹಾತಗಲ್ ಮೂಲದ ನರಸಿಂಗಪ್ಪ ಎಂಬ ಈ ವಂಶದ ಹಿರಿಯ 16 ನೇ ಶತಮಾನದಲ್ಲಿ ಇಲ್ಲಿಗೆ ಬಂದು ನೆಲೆಸಿದರಂತೆ. ತನ್ನಲ್ಲಿದ್ದ ಹಣದಿಂದ ಭೂಮಿ ಖರೀದಿಸಿ ಮನೆ ಕಟ್ಟಿದರು, ಮದುವೆಯಾದರು. ಅವರಿಗೆ ಏಳು ಮಕ್ಕಳಾದವು. ಅಲ್ಲಿಂದ ಬೆಳೆಯಲು ಶುರುವಾದ ಈ ವಂಶವೃಕ್ಷ ಇಂದಿನವರೆಗೂ ಒಂದೆ ಮನೆಯಲ್ಲಿ ಆಲದ ಮರದಂತೆ ಬೆಳೆಯತ್ತಲೇ ಇದೆ..

180 ಕ್ಕೂ ಅಧಿಕ ಸದಸ್ಯರಿರುವ ಈ ಕುಟುಂಬ ಕೃಷಿ ಪ್ರಧಾನವಾದದ್ದು. 60 ಎಕರೆ ನೀರಾವರಿ 300 ಎಕರೆ ಖುಷ್ಕಿ ಭೂಮಿ ಹೊಂದಿರುವ ಈ ಕುಟುಂಬದಲ್ಲಿ ವ್ಯಾಪಾರಸ್ಥರು, ಡಾಕ್ಟರ್, ಇಂಜಿನಿಯರ್ ಗಳಿದ್ದಾರೆ, ನಿವೃತ್ತಿಯ ನಂತರ ಅವರೂ ಈ ಮನೆಗೆ ಬಂದು ಸೇರುತ್ತಾರೆ..

ಮನೆ ಹಿರಿಯರಾದ ಈಶ್ವರಪ್ಪ ನರಸಿಂಗನವರ, ಪರಮೇಶ್ವರಪ್ಪ ನರಸಿಂಗನವರ ಉಸ್ತುವಾರಿಯಲ್ಲೆ ಮನೆಯ ಆರ್ಥಿಕ, ಕೌಟುಂಬಿಕ ಆಗುಹೋಗುಗಳು ನಡೆಯುತ್ತವೆ. ಇಡೀ ಕುಟುಂಬದ ಸದಸ್ಯರಿಗೆ ಒಂದೇ ಅಡುಗೆ ಮನೆಯಲ್ಲಿ ಆಹಾರ ಸಿದ್ದಗೊಳ್ಳುತ್ತದೆ..

ಮನೆಗೆಲಸ, ಕೃಷಿಕೆಲಸ, ಬೆಳೆಯುವ ಮಕ್ಕಳ ಉಸ್ತುವಾರಿ ಹೀಗೆ ಪ್ರತಿಯೊಂದು ಕೆಲಸವನ್ನೂ ಹಂಚಿಕೊಂಡು ಮಾಡುತ್ತಾರೆ. ಯಂತ್ರೋಪಕರಣಗಳ ದುರಸ್ಥಿಗೊಬ್ಬರು, ಸರ್ಕಾರಿ ಕೆಲಸ ನೋಡಿಕೊಳ್ಳಲೊಬ್ಬರು, ಡೈರಿ ನೋಡಲೊಬ್ಬರ ಉಸ್ತುವಾರಿ, ಅಡುಗೆ ಕೆಲಸವನ್ನು ಮನೆ ಹೆಣ್ಣು ಮಕ್ಕಳು ಹಂಚಿಕೊಂಡು ಮಾಡುತ್ತಾರೆ. ತಾಯಿ ಹಾಲು ಬಿಟ್ಟನಂತರ ಮನೆಯ ಮಗು ಇಡೀ ಕುಟುಂಬದ ಮಗು. ಅದು ಅವರದಿವರದೆಂಬ ಭೇದ ಇಲ್ಲ. ಅಲ್ಲಿ ಒಬ್ಬರ ಕಷ್ಟ ಮತ್ತು ಸುಖ ಇಡೀ ಕುಟುಂಬದ್ದು.

ಈ ಮನೆಗೆ ಶಾಲೆಯ ಮಕ್ಕಳನ್ನು, ಜಗಳ ಮಾಡಿಕೊಂಡು ದೂರವಾದ ದಂಪತಿಗಳನ್ನು, ಬೇರೆ ಮನೆ ಮಾಡಬೇಕೆಂದು ಹಠ ಹಿಡಿದ ತಮ್ಮನೆಯ ದಂಪತಿಗಳಿಗೆ, ಈ ಮನೆಯ ಒಗ್ಗಟ್ಟು ತೋರಿಸಲು ಹಿರಿಯರು ಕರೆದುಕೊಂಡು ಬರುತ್ತಾರೆ. ಅವರೊಂದಿಗೆ ಬೇಸರಿಸದೆ ತಮ್ಮ ಅನುಭವ ಹೇಳಿ ಅಲ್ಲಿಯೆ ಊಟ ಮಾಡಿಸಿ ಕಳುಹಿಸುತ್ತದೆ ಈ ಕುಟುಂಬ. ಹೋಗುವಾಗ ಅವರು “ನಿಮ್ಮ ಮನೆಗೆ ಬಂದು ನಮ್ಮ ಕರ್ಮ ದೂರಾದವು, ದೇವರು ನಿಮ್ಮನ್ನು ಸದಾ ಹೀಗೆ ಇಟ್ಟಿರಲಿ” ಎಂದು ಹರಸುತ್ತಾರೆ..

ನಾವೂ ಒಮ್ಮೆ ಆ ಜೇನು ಗೂಡಿನಂತಹ ಕುಟುಂಬ ಹೀಗೆ ಸುಖ ಸಮೃದ್ಧಿಯಿಂದಿರಲೆಂದು ದೇವರಲ್ಲಿ ಪ್ರಾರ್ಥಿಸೋಣ..

Leave a Reply

Your email address will not be published.