ನಿತ್ಯವಾಣಿ,ಚಿತ್ರದುರ್ಗ,(ಜ.28) :ಚಿತ್ರದುರ್ಗ ನಗರದ ತಮಟಕಲ್ಲು ರಸ್ತೆಯಲ್ಲಿರುವ ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿಯ ಆವರಣದಲ್ಲಿ ಜನವರಿ 29ರಂದು ಬೆಳಿಗ್ಗೆ 10.30ಕ್ಕೆ ಬಯಲುಸೀಮೆ ಮಂಡಳಿಯ ಇ-ಕಚೇರಿ, ವೆಬ್‍ಸೈಟ್ ಮತ್ತು ಕಚೇರಿ ಉದ್ಘಾಟನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ.
ತೋಟಗಾರಿಕೆ ಮತ್ತು ಯೋಜನೆ, ಕಾರ್ಯಕ್ರಮ, ಸಂಯೋಜನೆ ಮತ್ತು ಸಾಂಖ್ಯಿಕ ಸಚಿವ ಎನ್. ಮುನಿರತ್ನ ಅವರು ಉದ್ಘಾಟನೆ ನೆರವೇರಿಸುವರು. ನಂತರ ಇಂಗಳದಾಳ್ ಗ್ರಾಮದ ರಿ.ಸ.ನಂ 79ರಲ್ಲಿ ವಸತಿ ಉದ್ದೇಶಕ್ಕೆ ಅಲೆಮಾರಿ ಸುಡುಗಾಡು ಸಿದ್ದರು ಫಲಾನುಭವಿಗಳಿಗೆ ನಿವೇಶನ ಅಭಿವೃದ್ಧಿಯ ಭೂಮಿ ಪೂಜೆ ಕಾರ್ಯಕ್ರಮ ನೆರವೇರಿಸುವರು ಎಂದು ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿಯ ಕಾರ್ಯದರ್ಶಿ ಡಾ.ಶ್ರೀಧರ ಬಿ ಭಜಂತ್ರಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಎ.ನಾರಾಯಣ ಸ್ವಾಮಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟಿಲ್ ಘನ ಉಪಸ್ಥಿತಿವಹಿಸುವರು. ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಉಪಸ್ಥಿತಿವಹಿಸುವರು. ಸಾರಿಗೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವ ಬಿ.ಶ್ರೀರಾಮುಲು, ಹೊಳಲ್ಕೆರೆ ಶಾಸಕರು ಹಾಗೂ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಎಂ.ಚಂದ್ರಪ್ಪ, ಶಾಸಕರಾದ ಟಿ.ರಘುಮೂರ್ತಿ, ಕೆ.ಪೂರ್ಣಿಮಾ, ಗೂಳಿಹಟ್ಟಿ ಡಿ.ಶೇಖರ್, ವಿಶಾನ ಪರಿಷತ್ ಸದಸ್ಯರಾದ ಡಾ.ವೈ.ಎ.ನಾರಾಯಣಸ್ವಾಮಿ, ಚಿದಾನಂದ ಎಂ.ಗೌಡ, ಕೆ.ಎಸ್.ನವೀನ್, ಮೆದೇಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭಾಗ್ಯಮ್ಮ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.
ಬಯಲುಸೀಮೆ ಪ್ರದೇಶದ ಸರ್ವಾಗೀಣ ಅಭಿವೃದ್ಧಿಗಾಗಿ ಮಂಡಳಿ ರಚನೆಯಾಗಿದೆ. ಈ ಪ್ರದೇಶಗಳ ಕೃಷಿ ತತ್ಸಂಬಂಧಿತ ಚಟುವಟಿಕೆಗಳಾದ ಕೃಷಿ, ತೋಟಗಾರಿಕೆ, ಅರಣ್ಯ, ಪಶು ಸಂಗೋನೆ, ಮಣ್ಣು ಮತ್ತು ನೀರು ಸಂರಕ್ಷಣಾ ಕಾಮಗಾರಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದರು.
ರಾಜ್ಯದ ಬಾಗಲಕೋಟೆ, ಬೆಳಗಾವಿ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಧಾರವಾಡ, ಗದಗ, ಹಾಸನ, ಹಾವೇರಿ, ಕೋಲಾರ, ರಾಮನಗರ, ತುಮಕೂರು, ವಿಜಯಪುರ ಜಿಲ್ಲೆ ಸೇರಿದಂತೆ ಒಟ್ಟು 14 ಜಿಲ್ಲೆಗಳನ್ನೊಳಗೊಂಡ 58 ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಬರುವ 70 ವಿಧಾನಸಭಾ ಕ್ಷೇತ್ರಗಳು ಮಂಡಳಿಯ ವ್ಯಾಪ್ತಿಗೆ ಒಳಪಟ್ಟಿವೆ. 14 ಲೋಕಸಭಾ ಸದಸ್ಯರು, 70 ವಿಧಾನಸಭಾ ಸದಸ್ಯರು, 24 ವಿಧಾನಪರಿಷತ್ತು ಸದಸ್ಯರು, 10 ಮಂಡಳಿಯ ನಾಮನಿರ್ದೇಶಿತ ಸದಸ್ಯರು, 14 ಜಿಲ್ಲಾ ಪಂಚಾಯತ್ ಅಧ್ಯಕ್ಷರು, 14 ಜಿಲ್ಲಾಧಿಕಾರಿಗಳು ಹಾಗೂ ಒಬ್ಬ ಕಾರ್ಯದರ್ಶಿ ಸೇರಿದಂತೆ ಒಟ್ಟು 147 ಮಂದಿ ಮಂಡಳಿಯ ಸದಸ್ಯರಿದ್ದಾರೆ ಎಂದು ಮಾಹಿತಿ ನೀಡಿದರು.
ಮಣ್ಣು ಮತ್ತು ನೀರು ಸಂರಕ್ಷಣಾ ಕಾಮಗಾರಿಗಳಲ್ಲಿ ವಿವಿದ್ಧೋಶದಿಂದ ಕೂಡಿದ ಕಾಮಗಾರಿಗಳು ಅಂದರೆ ರಸ್ತೆಯ ಮೇಲೆ ಹರಿಯುವ ಹಳ್ಳಕ್ಕೆ ಬಂದಾರ ನಿರ್ಮಿಸಿ, ಸುತ್ತಮುತ್ತಲ ಜಮೀನುಗಳ ಬೋರ್‍ವೆಲ್‍ಗಳನ್ನು ರಿಜಾರ್ಚ್ ಮಾಡಲು, ದನ ಕರುಗಳಿಗೆ, ನೀರಿನ ವ್ಯವಸ್ಥೆ ಮತ್ತು ಸಾರ್ವಜನಿಕರ ಉಪಯೋಗಕ್ಕಾಗಿ ಊರಿಂದ ಊರಿಗೆ ಸಂಪರ್ಕ ಕಲ್ಪಿಸಿ, ಸಂಚರಿಸಲು ಅನುಕೂಲ ಕಲ್ಪಿಸುವಂತಹ ಕಾಮಗಾರಿಗಳು, ಸರ್ಕಾರಿ ಜಮೀನುಗಳಲ್ಲಿ ಚೆಕ್‍ಡ್ಯಾಂ ನಿರ್ಮಾಣ, ಸಣ್ಣ ಕೆರೆಗಳ ಬದು ಮತ್ತು ಕೋಡಿ ನಿರ್ಮಾಣ,ಮಳೆ ನೀರು ತಡೆಗೋಡೆ, ಗೋಕಟ್ಟೆ ನಿರ್ಮಾಣ, ಕಲ್ಯಾಣಿಗಳ ಜೀರ್ಣೋದ್ಧಾರ ಮುಂತಾದ ಕಾಮಗಾರಿಗಳು, ಸರ್ಕಾರಿ ಜಾಗಗಳಲ್ಲಿ ಕಿರು ಕಾಲುವೆಗಳು ಇಂಗು ಗುಂಡಿ ನಿರ್ಮಿಸಿ ಅಂತರ್ಜಲ ಹೆಚ್ಚಿಸುವ ಕಾಮಗಾರಿಗಳು ಇತ್ಯಾದಿ, ಅರಣ್ಯೀಕರಣ, ತೋಟಗಾರಿಕೆ, ಸಮುದಾಯ ಕೃಷಿ ಕಾಮಗಾರಿಗಳು, ರಸ್ತೆ ನಿರ್ಮಾಣ, ಚರಂಡಿ ನಿರ್ಮಾಣ ಸೇರಿದಂತೆ, ಸರ್ಕಾರಿ ಜಮೀನಿನಲ್ಲಿ ಸಾರ್ವಜನಿಕ ಸಮುದಾಯ ಭವನ ನಿರ್ಮಾಣ, ಸಾರ್ವಜನಿಕ ವ್ಯಾಯಾಮ ಶಾಲೆ ಮತ್ತು ಸಾರ್ವಜನಿಕ ಆರೋಗ್ಯ ಕೇಂದ್ರ, ವಿಶೇಷ ಘಟಕ, ಗಿರಿಜನ ಉಪ ಯೋಜನೆಯಡಿಯಲ್ಲಿ ಜನಾಂಗಕ್ಕೆ ಉಪಯೋಗವಾಗುವ ಸಮುದಾಯ ಭವನ, ವ್ಯಾಯಾಮ ಶಾಲೆ, ಪ್ರಾಥಮಿಕ ಆರೋಗ್ಯ ಕೇಂದ್ರ ಇತರೆ ಅಭಿವೃದ್ಧಿ ಕಾಮಗಾರಿಗಳನ್ನು ಮಂಡಳಿ ವ್ಯಾಪ್ತಿಯಲ್ಲಿ ಆದ್ಯತೆಯ ಮೇರೆಗೆ ತೆಗೆದುಕೊಳ್ಳಲಾಗುತ್ತಿದೆ ಎಂದರು.
ಮಂಡಳಿಯು ಅನುಮೋದಿಸಿದ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿಯು ತನ್ನದೇ ಆದ ಯಾವುದೇ ಅನುಷ್ಠಾನಾಧಿಕಾರಿಗಳನ್ನು ಹೊಂದಿರುವುದಿಲ್ಲ. ಮಂಡಳಿಯ ಕಾಮಗಾರಿಗಳನನು ಮುಖ್ಯವಾಗಿ ಕೃಷಿ ಇಲಾಖೆ, ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆ, ಲೋಕೋಪಯೋಗಿ ಇಲಾಖೆ, ಸಣ್ಣ ನೀರಾವರಿ ಇಲಾಖೆ, ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಗಮ, ನಿರ್ಮಿತಿ ಕೇಂದ್ರ ಹಾಗೂ ಅರಣ್ಯ ಇಲಾಖೆ ಮತ್ತು ಇತರೆ ಸರ್ಕಾರಿ ಇಲಾಖೆಗಳಿಂದ ಮಂಡಳಿಯ ಅಭಿವೃದ್ದಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದರು.
ಪತ್ರಿಕಾಗೋಷ್ಠಿಯ ಸಂದರ್ಭದಲ್ಲಿ ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿಯ ಸಿಬ್ಬಂದಿಗಳಾದ ಸುನೀತಾ, ಉಮೇಶ್, ಫಾರಿಯಾ ಇದ್ದರು.