ಚಿತ್ರದುರ್ಗ: ಪಂಚಮಸಾಲಿ ಸಮಾಜವನ್ನು 2 ಎಗೆ ಸೇರಿಸುವುದು ಹಾಗೂ ಲಿಂಗಾಯಿತ ಬಡ ಸಮಾಜವನ್ನು ಕೇಂದ್ರ ಓ.ಬಿ.ಸಿ.ಮೀಸಲಾತಿ ಪಟ್ಟಿಗೆ ಸೇರ್ಪಡೆಗೊಳಿಸುವಂತೆ ಒತ್ತಾಯಿಸಿ ಬಸವ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಕೂಡಲ ಸಂಗಮದಿಂದ ವಿಧಾನಸೌಧಕ್ಕೆ ಹೊರಟಿರುವ ಪಾದಯಾತ್ರೆ ಫೆ.2 ರಂದು ಚಿತ್ರದುರ್ಗಕ್ಕೆ ಆಗಮಿಸಲಿದೆ ಎಂದು ಜಿತೇಂದ್ರ ಹುಲಿಕುಂಟೆ ತಿಳಿಸಿದರು.
ಪತ್ರಕರ್ತರ ಭವನದಲ್ಲಿ ಭಾನುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಪಾದಯಾತ್ರೆ ಈಗಾಗಲೆ ಹೆಬ್ಬಾಳು ಮೂಲಕ ಭರಮಸಾಗರಕ್ಕೆ ತಲುಪಿದ್ದು, ಸೋಮವಾರ ಭರಮಸಾಗರದಿಂದ ಲಕ್ಷ್ಮಿಸಾಗರಕ್ಕೆ ಆಗಮಿಸಿ ರಾತ್ರಿ ವಾಸ್ತವ್ಯ ಹೂಡಲಿದೆ. ಮಂಗಳವಾರ ಬೆಳಿಗ್ಗೆ ಸೀಬಾರಕ್ಕೆ ಬರಲಿರುವ ಪಾದಯಾತ್ರೆ ಮಧ್ಯಾಹ್ನ 1-30 ಕ್ಕೆ ಗಾರೆಹಟ್ಟಿ ಮಾರ್ಗವಾಗಿ ದಾವಣಗೆರೆ ರಸ್ತೆ, ಕೆ.ಎಸ್.ಆರ್.ಟಿ.ಸಿ.ಬಸ್‍ನಿಲ್ದಾಣದ ಮುಂಭಾಗದಿಂದ ಗಾಂಧಿವೃತ್ತದ ಮೂಲಕ ನಗರದ ಹಳೆ ಮಾಧ್ಯಮಿಕ ಶಾಲಾ ಆವರಣ ಸೇರಲಿದ್ದು, ಅಲ್ಲಿ ಬೃಹತ್ ಬಹಿರಂಗ ಸಭೆ ನಡೆಯಲಿದೆ ಎಂದು ಹೇಳಿದರು.
ಜಿಲ್ಲೆಯ ಆರು ತಾಲ್ಲೂಕುಗಳಿಂದ ಲಿಂಗಾಯಿತ ಸಮಾಜದವರು ಪಾದಯಾತ್ರೆಗೆ ಆಗಮಿಸಲಿದ್ದು, ಬಹುದಿನಗಳ ನಮ್ಮ ಬೇಡಿಕೆ ಈಡೇರಿಕೆಗೆ ಸರ್ಕಾರವನ್ನು ಒತ್ತಾಯಿಸಲಾಗುವುದೆಂದರು.
ರಸ್ತೆಯುದ್ದಕ್ಕೂ ಅಲ್ಲಲ್ಲಿ ಪಾದಯಾತ್ರೆಗೆ ಭವ್ಯ ಸ್ವಾಗತ ಕೋರಲಾಗುವುದು. ಮೆರವಣಿಗೆಯಲ್ಲಿ ವೀರಗಾಸೆ, ನಂದಿಕೋಲು, ಪೂರ್ಣಕುಂಭದ ಸಮೇತ ವಿವಿಧ ಕಲಾತಂಡಗಳು ಪಾಲ್ಗೊಳ್ಳಲಿವೆ. ಲಿಂಗಾಯಿತ ಸಮಾಜವನ್ನು ಓ.ಬಿ.ಸಿ.ಗೆ ಸೇರಿಸುವಂತೆ 1998 ರಲ್ಲಿಯೇ ಸರ್ಕಾರದ ಆದೇಶವಾಗಿದೆ. ಅದರಂತೆ ನಮಗೆ ಮೀಸಲಾತಿ ಕೊಡುವಂತೆ ಒತ್ತಾಯಿಸಿ ಬಸವ ಜಯಮೃತ್ಯುಂಜಯ ಸ್ವಾಮೀಜಿಗಳ ನೇತೃತ್ವದಲ್ಲಿ ಹೊರಟಿರುವ ಪಾದಯಾತ್ರೆಯಲ್ಲಿ ವೀರಶೈವ ಲಿಂಗಾಯಿತ ಸಮಾಜದ ಅನೇಕ ಮುಖಂಡರುಗಳು ಭಾಗವಹಿಸಲಿದ್ದಾರೆ. ವಚನಾನಂದ ಸ್ವಾಮಿಗಳು ನಗರದಲ್ಲಿ ಕೆಲವು ಪ್ರಮುಖರ ಮನೆಗಳಿಗೆ ಭೇಟಿ ನೀಡಲಿದ್ದಾರೆ. ಲಿಂಗಾಯಿತ ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸರ್ಕಾರಕ್ಕೆ ಶಕ್ತಿ ಪ್ರದರ್ಶಿಸುವಂತೆ ವೀರಶೈವ ಲಿಂಗಾಯಿತ ಯುವ ವೇದಿಕೆ ಜಿಲ್ಲಾಧ್ಯಕ್ಷ ಹೆಚ್.ಎಂ.ಮಂಜುನಾಥ್ ಮನವಿ ಮಾಡಿದರು.ತಿಪ್ಪೇಸ್ವಾಮಿ, ಎಂ.ಎಸ್.ಗಿರೀಶ್ ಪತ್ರಿಕಾಗೋಷ್ಟಿಯಲ್ಲಿ ಹಾಜರಿದ್ದರು.