ಚಿತ್ರದುರ್ಗ: ಕುರುಬ ಸಮುದಾಯವನ್ನು ಪರಿಶಿಷ್ಟ ವರ್ಗಕ್ಕೆ ಸೇರಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರುವುದಕ್ಕಾಗಿ ಕಾಗಿನೆಲೆ ಮಹಾಸಂಸ್ಥಾನದಿಂದ ನಿರಂಜನಾನಂದಪುರಿ ಮಹಾಸ್ವಾಮಿಗಳು ಹಾಗೂ ಹೊಸದುರ್ಗ ಶಾಖಾ ಮಠದ ಈಶ್ವರಾನಂದಪುರಿ ಸ್ವಾಮೀಜಿಗಳ ನೇತೃತ್ವದಲ್ಲಿ ಜ.15 ರ ಇಂದಿನಿಂದ ಕಾಗಿನೆಲೆ ಮಹಾಸಂಸ್ಥಾನದಿಂದ ಆರಂಭಗೊಳ್ಳಲಿರುವ ಪಾದಯಾತ್ರೆ ಇದೇ ತಿಂಗಳ 23 ರಂದು ಚಿತ್ರದುರ್ಗಕ್ಕೆ ಆಗಮಿಸಲಿದ್ದು, ಅಂದು ಐತಿಹಾಸಿಕ ಚಿತ್ರದುರ್ಗ ನಗರವನ್ನು ವರ್ಣರಂಜಿತವಾಗಿ ಅಲಂಕರಿಸಲು ಎಸ್.ಟಿ.ಹೋರಾಟದ ಚಿತ್ರದುರ್ಗ ನಗರ ಅಲಂಕಾರ ಸಮಿತಿ ತೀರ್ಮಾನಿಸಿತು.
ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠ ಹಾಗೂ ಚಿತ್ರದುರ್ಗ ಕುರುಬರ ಸಂಘದ ಅಡಿಯಲ್ಲಿ ರಚನೆಯಾಗಿರುವ ಎಸ್.ಟಿ.ಹೋರಾಟದ ಚಿತ್ರದುರ್ಗ ನಗರ ಅಲಂಕಾರ ಸಮಿತಿ ಸಂಚಾಲಕರುಗಳು ಚಿತ್ರದುರ್ಗ ಟೌನ್ ಕೋ-ಆಪರೇಟಿವ್ ಸೊಸೈಟಿಯಲ್ಲಿ ಗುರುವಾರ ಸೇರಿದ್ದ ಸಭೆಯಲ್ಲಿ ಚಿತ್ರದುರ್ಗವನ್ನು ಅಲಂಕರಿಸಿ ಪಾದಯಾತ್ರೆಯನ್ನು ಬರಮಾಡಿಕೊಳ್ಳುವ ಕುರಿತು ಚರ್ಚಿಸಲಾಯಿತು.
ಎಸ್.ಟಿ.ಹೋರಾಟದ ಚಿತ್ರದುರ್ಗ ನಗರ ಅಲಂಕಾರ ಸಮಿತಿ ಸಂಚಾಲಕರಾದ ಆರ್.ಮಂಜುನಾಥ್ ಸಭೆಯಲ್ಲಿ ಮಾತನಾಡುತ್ತ ಜ.23 ರಂದು ಮಧ್ಯಾಹ್ನ 2 ಗಂಟೆಗೆ ಮಾಳಪ್ಪನಹಟ್ಟಿ ಮಾರ್ಗವಾಗಿ ಕನಕ ವೃತ್ತಕ್ಕೆ ಶ್ರೀಗಳ ಪಾದಯಾತ್ರೆ ಆಗಮಿಸಲಿದ್ದು, ನಿರಂಜನಾನಂದಪುರಿ ಮಹಾಸ್ವಾಮಿಗಳು ಭಕ್ತ ಕನಕದಾಸರ ಪ್ರತಿಮೆಗೆ ಮಾಲಾರ್ಪಣೆ ಮಾಡಲಿದ್ದಾರೆ. ಅಲ್ಲಿಂದ ಸಾಂಪ್ರದಾಯಿಕ ವಾದ್ಯಗಳೊಂದಿಗೆ ಬರಮಾಡಿಕೊಳ್ಳಲಾಗುವುದು ಎಂದು ತಿಳಿಸಿದರು.
ಹೊಸದುರ್ಗ ಶಾಖಾ ಮಠದ ಈಶ್ವರಾನಂದಪುರಿ ಸ್ವಾಮೀಜಿ ಕ್ರಾಂತಿವೀರ ಸಂಗೊಳ್ಳಿರಾಯಣ್ಣ ಪ್ರತಿಮೆಗೆ ಮಾಲಾರ್ಪಣೆ ಮಾಡುವರು. ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್, ವೀರವನಿತೆ ಒನಕೆ ಓಬವ್ವ ಪ್ರತಿಮೆ ಹಾಗೂ ರಾಜಾವೀರ ಮದಕರಿನಾಯಕನ ಪ್ರತಿಮೆಗೆ ಮಾಲಾರ್ಪಣೆ ಸಲ್ಲಿಸಿ ತಳಿರು ತೋರಣಗಳಿಂದ ಸಿಂಗರಿಸಲಾಗುವುದು. ಪಾದಯಾತ್ರೆಯಲ್ಲಿ ಕುರುಬ ಸಮಾಜದ ಮುಖಂಡರುಗಳಾದ ಕೆ.ಎಸ್.ಈಶ್ವರಪ್ಪ, ರೇವಣ್ಣ ಸೇರಿದಂತೆ ಇನ್ನು ಅನೇಕರು ಭಾಗವಹಿಸಲಿದ್ದಾರೆ. ಕುರುಬ ಸಮಾಜದ ಭಾಂದವರು ಅಂದು ಹೆಚ್ಚಿನ ಸಂಖ್ಯೆಯಲ್ಲಿ ಮೆರವಣಿಗೆಯಲ್ಲಿ ಪಾಲ್ಗೊಂಡು ಸರ್ಕಾರಕ್ಕೆ ಶಕ್ತಿ ಪ್ರದರ್ಶಿಸುವಂತೆ ಆರ್.ಮಂಜುನಾಥ್ ಮನವಿ ಮಾಡಿದರು.
ಎಸ್.ಟಿ.ಹೋರಾಟದ ಚಿತ್ರದುರ್ಗ ನಗರ ಅಲಂಕಾರ ಸಮಿತಿಯ ಸಂಚಾಲಕರುಗಳಾದ ಎಂ.ನಿಶಾನಿ ಜಯಣ್ಣ, ಮಲ್ಲಿಕಾರ್ಜುನ್ ಎಸ್.ಬಿ.ಎಲ್., ಡಿ.ವಿ.ಟಿ.ಕರಿಯಪ್ಪ, ಜೆ.ಶಶಿಧರ್, ಸಿ.ಸುರೇಶ್‍ಬಾಬು, ಜೆ.ಸುರೇಶ್(ತಕ್ಕಡಿ), ಆರ್.ಉಮಾಶಂಕರ್, ಮಲ್ಲಿಕಾರ್ಜುನ್, ವೆಂಕಟೇಶ್, ಶಿವಕುಮಾರ್ ಸಭೆಯಲ್ಲಿ ಹಾಜರಿದ್ದರು.