ಸರ್ಕಾರದ ವಿರುದ್ಧ ಒನಕೆ ಪ್ರದರ್ಶನ ಮಾಡಲಾಗುವುದೆಂದು ಪಂಚಮಸಾಲಿ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ವೀಣಾ ವಿ.ಕಾಶಪ್ಪನವರ್

ಚಿತ್ರದುರ್ಗ : ಪಂಚಮಸಾಲಿ ಸಮಾಜವನ್ನು 2ಎ ಗೆ ಸೇರಿಸುವುದು ಹಾಗೂ ಬಡ ಲಿಂಗಾಯಿತ ಸಮಾಜಕ್ಕೆ ಕೇಂದ್ರ ಓಬಿಸಿ ಮೀಸಲಾತಿ ನೀಡುವಂತೆ ಪಂಚಮಸಾಲಿ ಸಮಾಜ ಕೂಡಲ ಸಂಗಮದಿಂದ ಪಾದಯಾತ್ರೆ ಹೊರಟಿದ್ದರು ಸಿಎಂ ಬಿ.ಎಸ್.ಯಡಿಯೂರಪ್ಪನವರ ಕಣ್ಣು ಇನ್ನು ತೆರೆಯುತ್ತಿಲ್ಲ. ಹಾಗಾಗಿ ಮಂಗಳವಾರ ಚಿತ್ರದುರ್ಗಕ್ಕೆ ಪಾದಾರ್ಪಣೆ ಮಾಡಲಿರುವ ಪಾದಯಾತ್ರೆಯಲ್ಲಿ ಸರ್ಕಾರದ ವಿರುದ್ಧ ಒನಕೆ ಪ್ರದರ್ಶನ ಮಾಡಲಾಗುವುದೆಂದು ಪಂಚಮಸಾಲಿ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ವೀಣಾ ವಿ.ಕಾಶಪ್ಪನವರ್ ತಿಳಿಸಿದರು.

ಪತ್ರಕರ್ತರ ಭವನದಲ್ಲಿ ಸೋಮವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಬಸವ ಜಯಮೃತ್ಯುಂಜಯ ಸ್ವಾಮಿ ಹಾಗೂ ವಚನಾನಂದಸ್ವಾಮಿಗಳು ಬೀದಿಗಿಳಿದು ಪಾದಯಾತ್ರೆ ಹೊರಟಿದ್ದರೂ ಸರ್ಕಾರ ಇನ್ನು ಮೌನವಾಗಿರುವುದು ಮುಖ್ಯಮಂತ್ರಿಗೆ ಶೋಭೆಯಲ್ಲ. ಅದಕ್ಕಾಗಿ ವೀರವನಿತೆ ಒನಕೆ ಓಬವ್ವಳ ನಾಡು ಚಿತ್ರದುರ್ಗದಲ್ಲಿ ಸರ್ಕಾರದ ವಿರುದ್ದ ಒನಕೆ ಪ್ರದರ್ಶಿಸಲಾಗುವುದು. ಮಹಿಳೆಯರು ಸಹಸ್ರಾರು ಸಂಖ್ಯೆಯಲ್ಲಿ ಭಾಗವಹಿಸಿ ಪಾದಯಾತ್ರೆಗೆ ಶಕ್ತಿ ತುಂಬುವಂತೆ ಮನವಿ ಮಾಡಿದರು.

ಸಮುದಾಯದ ಮೋಕ್ಷರುದ್ರಸ್ವಾಮಿ ಮಾತನಾಡಿ, ನೀಲಕಂಠೇಶ್ವರಸ್ವಾಮಿ ದೇವಸ್ಥಾನದಿಂದ ಪೂರ್ಣಕುಂಭಮೇಳ ಆರತಿಯೊಂದಿಗೆ ಮೆರವಣಿಗೆ ಹೊರಡಲಿದ್ದು, ಜಿಲ್ಲೆಯಾದ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಪಂಚಮಸಾಲಿ, ಲಿಂಗಾಯಿತ ಸಮುದಾಯದ ಮಹಿಳೆಯರು ಪಾಲ್ಗೊಳ್ಳುವಂತೆ ಮನವಿ ಮಾಡಿದರು.

ಶಾಂತ, ಅನ್ನಪೂರ್ಣಸಜ್ಜನ್, ಲತಾ ಉಮೇಶ್, ಸುಜಾತ ಹಿರೇಮಠ್, ಮಂಜುಳ ರವಿ, ರುದ್ರಾಣಿ ಗಂಗಾಧರ್, ಆರತಿ ಮಹಡಿ ಶಿವಮೂರ್ತಿ, ಆಶಾ ಕಲ್ಲಪ್ಪ, ಜ್ಯೋತಿ ದೇವೇಂದ್ರಪ್ಪ ಇದ್ದರು.

Leave a Reply

Your email address will not be published.