ಪಾಕಿಸ್ತಾನ ವಿರುದ್ಧ ಟಿ20 ಸರಣಿಯಲ್ಲಿ ಸಮಬಲಕ್ಕೆ ತೃಪ್ತಿಪಟ್ಟ ಇಂಗ್ಲೆಂಡ್

ಮ್ಯಾಂಚೆಸ್ಟರ್: ಕರೊನಾ ಕಾಲದಲ್ಲಿ ಸತತ 4ನೇ ಸರಣಿ ಗೆಲುವು ದಾಖಲಿಸುವ ಹಂಬಲದಲ್ಲಿದ್ದ ಇಂಗ್ಲೆಂಡ್ ತಂಡ ಪ್ರವಾಸಿ ಪಾಕಿಸ್ತಾನ ವಿರುದ್ಧದ ಟಿ20 ಸರಣಿಯಲ್ಲಿ 1-1 ಸಮಬಲಕ್ಕೆ ತೃಪ್ತಿಪಟ್ಟಿದೆ. ಅನುಭವಿ ಆಟಗಾರ ಮೊಹಮದ್ ಹಫೀಜ್ (86*ರನ್, 52 ಎಸೆತ, 4 ಬೌಂಡರಿ, 6 ಸಿಕ್ಸರ್) ಮತ್ತು ಯುವ ಬ್ಯಾಟ್ಸ್‌ಮನ್ ಹೈದರ್ ಅಲಿ (54 ರನ್, 33 ಎಸೆತ, 5 ಬೌಂಡರಿ, 2 ಸಿಕ್ಸರ್) ಭರ್ಜರಿ ಬ್ಯಾಟಿಂಗ್ ನಿರ್ವಹಣೆಯ ನೆರವಿನಿಂದ ಪಾಕಿಸ್ತಾನ ತಂಡ 3ನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್‌ಗೆ 5 ರನ್‌ಗಳಿಂದ ಸೋಲುಣಿಸಿತು. ಸರಣಿಯ ಮೊದಲ ಪಂದ್ಯ ಮಳೆಯಿಂದಾಗಿ ರದ್ದುಗೊಂಡಿತ್ತು.

ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ಪಾಕಿಸ್ತಾನ ತಂಡ, 4 ವಿಕೆಟ್‌ಗೆ 190 ರನ್‌ಗಳ ಬೃಹತ್ ಮೊತ್ತ ಪೇರಿಸಿತು. 39 ವರ್ಷದ ಹಫೀಜ್ ಟಿ20 ಕ್ರಿಕೆಟ್‌ನಲ್ಲಿ ತಮ್ಮ ಜೀವನಶ್ರೇಷ್ಠ ಗಳಿಕೆಯನ್ನು ಸರಿಗಟ್ಟಿದರೆ, 19 ವರ್ಷದ ಹೈದರ್ ಅಲಿ ಚೊಚ್ಚಲ ಪಂದ್ಯದಲ್ಲೇ ಅರ್ಧಶತಕ ಸಿಡಿಸಿ ಗಮನಸೆಳೆದರು. ಪ್ರತಿಯಾಗಿ ಇಂಗ್ಲೆಂಡ್ ತಂಡ ಪಾಕ್ ವೇಗಿಗಳ ದಾಳಿಗೆ ಕುಸಿತ ಕಂಡು 8 ವಿಕೆಟ್‌ಗೆ 185 ರನ್ ಗಳಿಸಲಷ್ಟೇ ಶಕ್ತವಾಯಿತು. ಕೊನೇ ಹಂತದಲ್ಲಿ ಮೊಯಿನ್ ಅಲಿ (61ರನ್, 33 ಎಸೆತ, 4 ಬೌಂಡರಿ, 4 ಸಿಕ್ಸರ್) ಮತ್ತು ಸ್ಯಾಮ್ ಬಿಲ್ಲಿಂಗ್ಸ್ (26) ಪ್ರತಿಹೋರಾಟ ನಡೆಸಿದರೂ, ಅನುಭವಿ ವೇಗಿ ವಹಾಬ್ ರಿಯಾಜ್ (26ಕ್ಕೆ 2) ಅವರಿಬ್ಬರಿಗೆ ಕಡಿವಾಣ ಹಾಕಿದರು.

Leave a Reply

Your email address will not be published.