ನಿತ್ಯವಾಣಿ,ಚಿತ್ರದುರ್ಗ,(ಸೆ.28) : ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಕೊಡಿಸುವಲ್ಲಿ ಕೆಲವು ಲಿಂಗಾಯತ ಮಠಾಧೀಶರು ಮತ್ತು ಕೆಲವು ರಾಜಕಾರಣಿಗಳು ಹಿನ್ನಡೆ ಮಾಡುತ್ತಿದ್ದಾರೆ. ಆದರೆ 2ಎ ಮೀಸಲಾತಿಗಾಗಿ ಮತ್ತೆ ಬೃಹತ್ ಹೋರಾಟ ಮಾಡುತ್ತೇವೆ ಎಂದು ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜದ ರಾಷ್ಟ್ರೀಯ ಅಧ್ಯಕ್ಷರಾದ ವಿಜಯಾನಂದ ಕಾಶಪ್ಪನವರ್ ಹೇಳಿದರು.
ನಗರದ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜದಿಂದ ಹಮ್ಮಿಕೊಳ್ಳಲಾಗಿದ್ದ 2ಎ ಮೀಸಲಾತಿ ಹಕ್ಕೊತ್ತಾಯಕ್ಕಾಗಿ ಪ್ರತಿಜ್ಞಾ ಪಂಚಾಯತ್ ಬೃಹತ್ ರಾಜ್ಯ ಅಭಿಯಾನದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.ಲಿಂಗಾಯತ ಪಂಚಮಸಾಲಿ ಮೀಸಲಾತಿ ಬೇಡಿಕೆಗಾಗಿ ಮತ್ತೆ ಹೋರಾಟ ನಡೆಸಲಿದ್ದು ಕೂಡಲಸಂಗಮದ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ಅವರ ಆದೇಶದಂತೆ ಪಂಚಮಸಾಲಿ ಸಮುದಾಯದವರು ಸಿದ್ದರಾಗಿ ಹೋರಾಟ ಮಾಡುವ, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ನಮಗೆ ಮೀಸಲಾತಿ ಕೊಟ್ಟೇ ಕೊಡುತ್ತಾರೆ ಎಂದರು.
ಪಂಚಮಸಾಲಿ ಮೀಸಲಾತಿ ಹೋರಾಟ ಸಮಿತಿ ಅಧ್ಯಕ್ಷರಾದ SML ತಿಪ್ಪೇಸ್ವಾಮಿ ಮಾತನಾಡಿ ಈ ಹಿಂದೆ ಪಂಚಮಸಾಲಿ 2 ಎ ಮೀಸಲಾತಿಗೆ ಹೋರಾಟ ನಡೆದಿದೆ. ಈಗಾಗಲೇ ಪಾದಯಾತ್ರೆ ಮಾಡಿದ್ದೇವೆ. ಅಧಿವೇಶನದಲ್ಲಿ ಯಡಿಯೂರಪ್ಪ ನವರು ಸಿಎಂ ಮಾತುಕೊಟ್ಟಿದ್ದರು. ಆರು ತಿಂಗಳೊಳಗೆ ಬೇಡಿಕೆ ಈಡೇರಿಸುತ್ತೇವೆ ಎಂದಿದ್ದರು. ಅವರ ಮಾತು ಸೆಪ್ಟಂಬರ್ ೧೫ ಕ್ಕೆ ಮುಕ್ತಾಯವಾಗಿದೆ. ಹೀಗಾಗಿ ನಾವು ಮತ್ತೊಮ್ಮೆ ಹೋರಾಟ ಮಾಡ್ತೇವೆ ಎಂದರು.
ಕೂಡಲ ಸಂಗಮದ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ಸಾನಿಧ್ಯವಹಿಸಿ ಮಾತನಾಡಿ, ಈ ನಾಡಿಗೆ ಮೂವರು ಮುಖ್ಯಮಂತ್ರಿಗಳಾದ ಎಸ್. ನಿಜಲಿಂಗಪ್ಪ, ಜೆ.ಹೆಚ್.ಪಾಟೀಲ್, ವೀರೇಂದ್ರ ಪಾಟೀಲ್ ರನ್ನು ನೀಡಿದ ಸಮಾಜ ನಮ್ಮದು, ಅಂತಹ ಸಮಾಜ ಇನ್ನೂ ಹಿಂದೆ ಇದೆ. ನಾವು ಮೀಸಲಾತಿಗಾಗಿ ಕ್ರಾಂತಿಯ ಕಿಡಿಗಳಾಗಬೇಕು. ಪಂಚಮಸಾಲಿ ಗುಡುಗಿದರೆ ವಿಧಾನಸೌಧ ನಡುಗುತ್ತದೆ. ಅಷ್ಟು ಶಕ್ತಿಯುತವಾದ ಸಮಾಜ ನಮ್ಮದು ಎಂದರು.
ಪಂಚಮಸಾಲಿಗಳು ಒರಿಜಿನಲ್ ಲಿಂಗಾಯತರು, ನಮ್ಮ ಪಾದಯಾತ್ರೆಯ ಶಕ್ತಿ ಅತ್ಯುತ್ತಮವಾಗಿತ್ತು. ಸಾವಿರಾರು ವರ್ಷಗಳ ಇತಿಹಾಸದ ನಮ್ಮ ಸಮಾಜಕ್ಕೆ 2ಎ ಮೀಸಲಾತಿಬೇಕು. ಮತ್ತೆ ಹೋರಾಟ, ಸತ್ಯಾಗ್ರಹ ಮಾಡೋಣ, ಬೃಹತ್ ರಾಜ್ಯ ಅಭಿಯಾನದಲ್ಲಿ ಸಿದ್ದರಾಗಿ ಎಂದರು
ಪಂಚಸೇನೆ ರಾಜ್ಯಾಧ್ಯಕ್ಷರಾದ ಬಿ.ಎಸ್.ಪಾಟೀಲ್ ಮಾತನಾಡಿ, ನಮ್ಮ ಹೋರಾಟ ಯಾರನ್ನೋ ಮಂತ್ರಿ ಶಾಸಕರನ್ನು ಮಾಡಲು ಅಲ್ಲ. ನಮ್ಮ ಸಮಾಜದ ಬಡ ಮಕ್ಕಳಿಗೆ, ಬಡ ಜನರಿಗಾಗಿ, ನಮ್ಮ ಸಮುದಾಯದ ಅಭಿವೃದ್ಧಿಗಾಗಿ ಮೀಸಲಾತಿ ಅಗತ್ಯ, ಅದಕ್ಕಾಗಿ ಎಲ್ಕರೂ ಒಂದಾಗಿ ಬನ್ನಿ ಎಂದರು.
ಅಖಿಲಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷರಾದ ಮಹಡಿ ಶಿವಮೂರ್ತಿ ಮಾತನಾಡಿದರು. ಗೌಡ ಲಿಂಗಾಯತ ಸಂಘದ ರಾಜ್ಯಾಧ್ಯಕ್ಷರಾದ ಶಂಭುಲಿಂಗೇ ಗೌಡ ಪಾಟೀಲ್, ಮುಖಂಡರಾದ ಜಿತೇಂದ್ರ ಎನ್ ಹುಲಿಕುಂಟೆ, ವೀರಶೈವ ಯುವ ವೇದಿಕೆ ಜಿಲ್ಲಾಧ್ಯಕ್ಷ ಹೆಚ್ ಎಂ ಮಂಜುನಾಥ್ ಇತರರು ಹಾಜರಿದ್ದರು.