ಚಿತ್ರದುರ್ಗ: ಮಠಕ್ಕೆ ಹಣ ನೀಡದಿದ್ದರೂ ಪರವಾಗಿಲ್ಲ. ಪಂಚಮಸಾಲಿಗಳನ್ನು ಮಂತ್ರಿ ಮಾಡಿ ಎಂದು ಕೇಳುವುದಿಲ್ಲ. ನಮಗೆ ಮೀಸಲಾತಿ ಕೊಡದಿದ್ದರೆ ಬಿಡಲ್ಲ. ಹತ್ತು ಲಕ್ಷ ಜನ ಸೇರಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಿ ನ್ಯಾಯಯುತವಾದ ಹಕ್ಕನ್ನು ಪಡೆದೆ ಪಡೆಯುತ್ತೇವೆಂದು ಕೂಡಲ ಸಂಗಮದ ಬಸವ ಜಯಮೃತ್ಯುಂಜಯ ಸ್ವಾಮೀಜಿ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆಯ ಸಂದೇಶ ರವಾನಿಸಿದರು.
ಪಂಚಮಸಾಲಿ ಸಮಾಜವನ್ನು ರಾಜ್ಯ ಸರ್ಕಾರ 2 ಎ ಹಾಗೂ ಲಿಂಗಾಯಿತ ಬಡ ಸಮಾಜವನ್ನು ಕೇಂದ್ರ ಸರ್ಕಾರದ ಓ.ಬಿ.ಸಿ. ಮೀಸಲಾತಿಗೆ ಸೇರಿಸುವಂತೆ ಕಳೆದ ತಿಂಗಳ ಹದಿನಾಲ್ಕರಂದು ಕೂಡಲ ಸಂಗಮದಿಂದ ಬೆಂಗಳೂರಿನ ವಿಧಾನಸೌಧಕ್ಕೆ ಹೊರಟಿರುವ ಪಂಚಲಕ್ಷ ಹೆಜ್ಜೆಗಳ ಐತಿಹಾಸಿಕ ಬೃಹತ್ ಪಾದಯಾತ್ರೆ ಮಂಗಳವಾರ ಚಿತ್ರದುರ್ಗಕ್ಕೆ ಆಗಮಿಸಿದ ಸಂದರ್ಭದಲ್ಲಿ ಹಳೆ ಮಾಧ್ಯಮಿಕ ಶಾಲಾ ಆವರಣದಲ್ಲಿ ಬಹಿರಂಗ ಸಭೆಯ ಸಾನಿಧ್ಯ ವಹಿಸಿ ಮಾತನಾಡಿದರು.
1994 ರಲ್ಲಿ ಪಂಚಮಸಾಲಿ ಸಮಾಜ ಕಟ್ಟಿದೆವು. ರಾಜ್ಯದಲ್ಲಿ ನಮ್ಮದು ಬಲಿಷ್ಟ ಸಮಾಜ. ಹಾಗಂತ ಕೈಕಟ್ಟಿ ಸುಮ್ಮನೆ ಕುಳಿತುಕೊಂಡರೆ ನಮ್ಮ ನ್ಯಾಯಯುತವಾದ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಆಗುವುದಿಲ್ಲ.
ಒಗ್ಗಟ್ಟಾಗಿ ನಮ್ಮ ಪಾಲು ಕೇಳುವುದು ಪಾದಯಾತ್ರೆಯ ಉದ್ದೇಶ. ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಮಗೆ ಕೊಟ್ಟಿರುವ ಅನುದಾನದ ಆದೇಶ ಪತ್ರವನ್ನು ಬುಧವಾರ ಜಿಲ್ಲಾಧಿಕಾರಿಗೆ ವಾಪಸ್ ನೀಡಿ ಮೀಸಲಾತಿ ಅಭಿಯಾನ ಮುಂದುವರೆಸುತ್ತೇವೆ. ಜಿಲ್ಲೆಯ ಪಂಚಮಸಾಲಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಎಂದು ಕರೆ ನೀಡಿದರು.
ನಾಲ್ಕು ನೂರಕ್ಕಿಂತ ಹೆಚ್ಚು ಕಿ.ಮೀ.ಪಾದಯಾತ್ರೆಯ ಈ ಬೃಹತ್ ಚಳುವಳಿಯಲ್ಲಿ ನಾವುಗಳು ಮೀಸಲಾತಿಯನ್ನು ಪಡೆಯದಿದ್ದರೆ ಇನ್ನು ಯಾವ ಮುಖ್ಯಮಂತ್ರಿ ಬಂದರೂ ನಮಗೆ ಮೀಸಲಾತಿ ಸಿಗುವುದಿಲ್ಲ. ಶಿಕ್ಷಣ, ಉದ್ಯೋಗದಿಂದ ಪಂಚಮಸಾಲಿ ಸಮಾಜ ವಂಚಿತವಾಗಿದೆ. ಅದಕ್ಕಾಗಿ ನಮ್ಮ ಸಮಾಜದ ಮಕ್ಕಳ ಮುಂದಿನ ಭವಿಷ್ಯಕ್ಕಾಗಿ ನಮ್ಮ ಹೋರಾಟವೇ ವಿನಃ ರಾಜಕೀಯಕ್ಕಾಗಿ ಅಲ್ಲ. ನಮ್ಮ ಸೋದರ ಸಮಾಜಕ್ಕೆ ಮೀಸಲಾತಿ ಕೊಟ್ಟಾಗ ನಾವು ಎಚ್ಚೆತ್ತುಕೊಳ್ಳುವಂತಾಯಿತು. ಆರ್ಥಿಕವಾಗಿ ಸಂಕಷ್ಟದಲ್ಲಿದ್ದೇವೆ. ಕೃಷಿಯಿಂದ ಬಂದ ಸಮಾಜ ನಮ್ಮದು. ರಾಷ್ಟ್ರನಾಯಕ ಎಸ್.ನಿಜಲಿಂಗಪ್ಪನವರನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಿದ ಸಮಾಜ ನಮ್ಮದು. ಜಾತಿಪಟ್ಟಿಯಲ್ಲಿ ಪಂಚಮಸಾಲಿ ಸಮಾಜದ ಹೆಸರಿಲ್ಲ. ಕಂದಾಯ ಕೊಟ್ಟು, ಚುನಾವಣೆಯಲ್ಲಿ ಓಟು ಕೊಟ್ಟು ಸರ್ಕಾರ ತಂದಿದ್ದೇವೆ. ಅದರೆ ನಮಗೆ ಸಿಕ್ಕಿದ್ದು, ಶೂನ್ಯ. 2012 ರಲ್ಲಿ ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆದ ಅಧಿವೇಶನಕ್ಕೆ ಮುತ್ತಿಗೆ ಹಾಕಿದಾಗ ಅಂದಿನ ಮುಖ್ಯಮಂತ್ರಿ ಜಗದೀಶ್‍ಶೆಟ್ಟರ್ ಭರವಸೆ ಕೊಟ್ಟು ಬೇರೆಯವರಿಗೆ ಮೀಸಲಾತಿ ಕೊಟ್ಟಾಗ ದೊಡ್ಡ ಅನ್ಯಾಯವಾಯಿತು. ಅದನ್ನು ಸಹಿಸಿಕೊಂಡೆವು. ಈಗ ಯಾವುದೇ ಕಾರಣಕ್ಕೂ ಮೀಸಲಾತಿ ಪಡೆಯದೆ ಬಿಡುವುದಿಲ್ಲ ಪಂಚಮಸಾಲಿಗಳೆಲ್ಲಾ ಒಗ್ಗಟ್ಟಾಗಿ ಬೆಂಗಳೂರಿನವರೆಗೆ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿ ಎಂದು ಜಾಗೃತಿಗೊಳಿಸಿದರು.
ವಾಲ್ಮೀಕಿ ಸಮುದಾಯ, ಹಾಲುಮತಸ್ಥರು ಮೀಸಲಾತಿಗಾಗಿ ಹೋರಾಟಕ್ಕೆ ಇಳಿದಾಗ ನಾವುಗಳು ಏಕೆ ಕೇಳಬಾರದು. ನಮ್ಮವರೆ ರಾಜ್ಯದ ಮುಖ್ಯಮಂತ್ರಿಯಾಗಿರುವಾಗ ಮೀಸಲಾತಿ ಕೊಡದಿದ್ದರೆ ಬೇರೆಯವರು ಕೊಡುತ್ತಾರೆಯೇ ಎಂದು ಖಾರವಾಗಿ ಪ್ರಶ್ನಿಸಿದ ಬಸವ ಜಯಮೃತ್ಯುಂಜಯ ಸ್ವಾಮೀಜಿ. ಶಾಂತಿಯ ಖಡ್ಗ, ಸ್ವಾಭಿಮಾನದ ಕುದುರೆಯೇರಿ ಪ್ರತಿಯೊಬ್ಬರು ಸೈನಿಕರಂತೆ ವಿಧಾನಸೌಧಕ್ಕೆ ಮುತ್ತಿಗೆ ಹಾಕೋಣ. ಇದು ಪಂಚಮಸಾಲಿ ಸಮಾಜದ ಸ್ವಾಭಿಮಾನ, ಆತ್ಮಗೌರವದ ಹೋರಾಟ. ಧರ್ಮಗುರುಗಳು ಮೀಸಲಾತಿಗಾಗಿ ಪಾದಯಾತ್ರೆ ಮಾಡಿದ ಇತಿಹಾಸವಿಲ್ಲ. ಚಿತ್ರದುರ್ಗ ಜಿಲ್ಲೆಯಲ್ಲಿ ಎಲ್ಲಾ ಮಠಗಳು ನಮ್ಮ ಹೋರಾಟಕ್ಕೆ ಬೆಂಬಲಿಸಿವೆ. ಆದರೆ ಮುರುಗೇಶನ ಬೆಂಬಲ ಸಿಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಸ್ವಾಮಿಗಳು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪಂಚಮಸಾಲಿಗಳನ್ನು ಕೈಬಿಟ್ಟರೆ ಪಾದಯಾತ್ರೆ ಗಟ್ಟಿಧ್ವನಿಯಾಗಿ ಮುಂದುವರೆಯತ್ತೆ ಎಂದು ಬೆದರಿಕೆ ಹಾಕಿದರು.
ಪಂಚಮಸಾಲಿ ಸಮಾಜದ ರಾಷ್ಟ್ರೀಯ ಅಧ್ಯಕ್ಷ ವಿಜಯ ಕಾಶಪ್ಪನವರ್ ಮಾತನಾಡಿ 26 ವರ್ಷಗಳಿಂದ ಮೀಸಲಾತಿಗಾಗಿ ಬೇಡುತ್ತಿದ್ದೇವೆ. ಯಾವ ಸರ್ಕಾರಗಳು ನಮ್ಮ ಕೂಗನ್ನು ಕೇಳಿಸಿಕೊಳ್ಳಲಿಲ್ಲ. ಅಂತಿಮವಾಗಿ ಬಸವ ಜಯಮೃತ್ಯುಂಜಯ ಸ್ವಾಮಿ ಹಾಗೂ ಹರಿಹರ ಪಂಚಮಸಾಲಿ ಮಠದ ವಚನಾನಂದ ಸ್ವಾಮೀಜಿಗಳು ಪಾದಯಾತ್ರೆ ಮೂಲಕ ಮೀಸಲಾತಿಗಾಗಿ ಬೀದಿಗಿಳಿದಿದ್ದಾರೆ. ಸರ್ಕಾರದಲ್ಲಿ ನಮ್ಮ ಸಮಾಜದ 17 ಶಾಸಕರುಗಳಿದ್ದಾರೆ. ಬಿಜೆಪಿ.ಗೆ ಪಂಚಮಸಾಲಿಯ ದೊಡ್ಡ ಕೊಡುಗೆಯಿದೆ. ಬೀದಿಯಲ್ಲಿ ಬಿಸಿಲಲ್ಲಿ ನಡೆಯುತ್ತಿದ್ದೇವೆ. ಮೀಸಲಾತಿ ಕೊಡಿದಿದ್ದರೆ ಬಿಡಲ್ಲ. ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ಅದಕ್ಕೆ ಕಿವಿಗೊಡುವುದು ಬೇಡ. ಆಶ್ವಾಸನೆ ಭರವಸೆ ಕೇಳಲ್ಲ. ಎಲ್ಲಾ ಜಿಲ್ಲಾಧಿಕಾರಿಗಳ ಕಚೇರಿಗೆ ಆದೇಶ ಪತ್ರ ಹೊರಡಿಸುವತನಕ ಹೋರಾಟ ಕೈಬಿಡುವುದಿಇಲ್ಲ ಎಂದು ಘರ್ಜಿಸಿದರು.
ಮಾಜಿ ಸಚಿವ ಹೆಚ್.ಆಂಜನೇಯ ಮಾತನಾಡುತ್ತ ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಪಂಚಮಸಾಲಿ ಲಿಂಗಾಯಿತರನ್ನು ನಿರ್ಲಕ್ಷಿಸಬಾರದಿತ್ತು. ಮೀಸಲಾತಿಯನ್ನು ಯಾವಗಲೋ ಕೊಡಬೇಕಿತ್ತು. ಈಗಲಾದರೂ ಎಚ್ಚೆತ್ತುಕೊಂಡು ಪಾದಯಾತ್ರೆ ವಿಧಾನಸೌಧಕ್ಕೆ ಮುತ್ತಿಗೆ ಹಾಕುವುದರೊಳಗೆ ಮೀಸಲಾತಿ ಕೊಡಲಿ. ನಿಮ್ಮ ಹೋರಾಟಕ್ಕೆ ನಮ್ಮ ಜನಾಂಗದ ಬೆಂಬಲ ಸದಾ ಇರುತ್ತದೆ ಎಂದು ಭರವಸೆ ನೀಡಿದರು.
ಮಾಜಿ ಸಚಿವ ಹೆಚ್.ಕೆ.ಪಾಟೀಲ್ ಮಾತನಾಡಿ ಪಂಚಮಸಾಲಿ ಸಮುದಾಯ ಬಡ ರೈತ ವರ್ಗವಿದ್ದಂತೆ. ನಿಮ್ಮದು ರೈತನ ಬದುಕಿನಂತೆ ಕಠಿಣವಾಗಿದೆ. ಪಂಚಮಸಾಲಿ ಸಮಾಜವನ್ನು ರಾಜ್ಯ ಸರ್ಕಾರ 2 ಎಗೆ ಹಾಗೂ ಬಡ ಲಿಂಗಾಯಿತ ಸಮಾಜವನ್ನು ಕೇಂದ್ರ ಓ.ಬಿ.ಸಿ.ಮೀಸಲಾತಿಗೆ ಸೇರಿಸುವಂತೆ ಪಾದಯಾತ್ರೆ ಹೊರಟಿರುವುದು ಸಮಂಜಸವಾಗಿದೆ ಎಂದು ಹೇಳಿದರು.
ಮಾಜಿ ಶಾಸಕ ಎಸ್.ಕೆ.ಬಸವರಾಜನ್ ಮಾತನಾಡುತ್ತ ನ್ಯಾಯಕ್ಕಾಗಿ ಪಂಚಮಸಾಲಿ ಸಮಾಜ ಹೋರಾಡುತ್ತಿದೆ. ಎಲ್ಲಾ ಲಿಂಗಾಯಿತರು ಬೆಂಬಲಿಸೋಣ. ಮನಸ್ಸೂರ್ಪಕವಾಗಿ ಇಬ್ಬರು ಸ್ವಾಮೀಜಿಗಳು ಒಂದಗೂಡಿರುವುದು ತುಂಬಾ ಸಂತೋಷದ ಸಂಗತಿ. ಒಳಪಂಗಡಗಳಿಗೂ ಮೀಸಲಾತಿ ಸಿಗಲಿ ಎಂದು ಆಶಿಸಿದರು.
ಬಸವನಗೌಡ ಪಾಟೀಲ್ ಯತ್ನಾಳ್, ಅರವಿಂದ ಬೆಲ್ಲದ್, ಅರುಣ್‍ಪೂಜಾರಿ, ಪಂಚಮಸಾಲಿ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ವೀಣ ಕಾಶಪ್ಪನವರ್, ಬಾವಿ ಬೆಟ್ಟಪ್ಪ, ಬಿ.ಸಿ.ಉಮಾಪತಿ, ವಿರಾಜ್‍ಪಾಟೀಲ್, ಯುವ ಘಟಕದ ಅಧ್ಯಕ್ಷ ರಾಜಶೇಖರ ಮೆಣಸಿನಕಾಯಿ, ನಂಜಣ್ಣಮಠ್, ಎಸ್.ಎಂ.ಎಲ್.ತಿಪ್ಪೇಸ್ವಾಮಿ, ಪಟೇಲ್ ಶಿವಣ್ಣ, ಭೀಮಸಮುದ್ರದ ಜಿ.ಎಸ್.ಮಂಜುನಾಥ್, ಸಂಗಮೇಶ್ ಬಬಲೇಶ್, ಪ್ರಕಾಶ್, ಮಾಜಿ ಶಾಸಕ ಹೆಚ್.ಎಸ್.ಶಿವಶಂಕರ್, ನಾಗನಗೌಡ, ಜಿಲ್ಲಾ ಪಂಚಮಸಾಲಿ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಮೋಕ್ಷರುದ್ರಸ್ವಾಮಿ, ರುದ್ರಾಣಿ ಗಂಗಾಧರ್, ವೀರಶೈವ ಲಿಂಗಾಯಿತ ಯುವ ವೇದಿಕೆ ಜಿಲ್ಲಾಧ್ಯಕ್ಷ ಹೆಚ್.ಎಂ.ಮಂಜುನಾಥ ಸೇರಿದಂತೆ ಪಂಚಮಸಾಲಿ ಲಿಂಗಾಯಿತ ಸಮಾಜದ ಅನೇಕ ಮುಖಂಡರುಗಳು ವೇದಿಕೆಯಲ್ಲಿದ್ದರು.
ಹರಿಹರ ಪಂಚಮಸಾಲಿ ಮಠದ ವಚನಾನಂದಸ್ವಾಮೀಜಿ, ತಿಪ್ಪೇರುದ್ರಸ್ವಾಮೀಜಿ ಇವರುಗಳು ಸಾನಿಧ್ಯ ವಹಿಸಿದ್ದರು.
ತೋಟಪ್ಪ ಉತ್ತಂಗಿ ಪ್ರಾರ್ಥಿಸಿದರು. ಜಿತೇಂದ್ರ ಹುಲಿಕುಂಟೆ , ನಿರಂಜನ ದೇವರ ಮನೆ ನಿರೂಪಿಸಿದರು.
ಮೆರವಣಿಗೆಯಲ್ಲಿ ಪೂರ್ಣಕುಂಭ ಮೇಳ ಸೇರಿದಂತೆ ವಿವಿಧ ಕಲಾತಂಡಗಳು ಭಾಗವಹಿಸಿದ್ದವು.