ಪತಂಜಲಿಯ ಕೊರೊನಿಲ್ ಮಾತ್ರೆಯಿಂದಾಗಿ ಇಕ್ಕಟ್ಟಿಗೆ ಸಿಲುಕಿದ್ರಾ ಕೇಂದ್ರ ಆರೋಗ್ಯ ಸಚಿವ!

ನವದೆಹಲಿ: ಆರಂಭದಿಂದಲೇ ಸಾಕಷ್ಟು ಪರ-ವಿರೋಧ ಅಭಿಪ್ರಾಯಗಳಿಗೆ ಈಡಾಗಿದ್ದ ಪತಂಜಲಿಯ ಕೊರೊನಿಲ್​ ಮಾತ್ರೆ ಈಗ ಮತ್ತೊಮ್ಮೆ ಸುದ್ದಿಯಲ್ಲಿದ್ದು, ಅದು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್​ ಅವರನ್ನು ಇಕ್ಕಟ್ಟಿನ ಪರಿಸ್ಥಿತಿಗೆ ಸಿಲುಕಿಸಿದಂತಾಗಿದೆ. ಕೊರೊನಿಲ್​ಗೆ ವಿಶ್ವ ಆರೋಗ್ಯ ಸಂಸ್ಥೆಯ ಪ್ರಮಾಣಪತ್ರ ಸಿಕ್ಕಿದೆ ಎಂದು ಪತಂಜಲಿ ಸಂಸ್ಥೆಯ ಮುಖ್ಯಸ್ಥ ಬಾಬಾ ರಾಮದೇವ್ ಸುಳ್ಳು ಹೇಳಿದ್ದಾರೆ ಎಂಬುದಾಗಿ ಭಾರತೀಯ ವೈದ್ಯಕೀಯ ಮಂಡಳಿ (ಐಎಂಎ) ತಗಾದೆ ತೆಗೆದಿದ್ದು, ಈ ಕುರಿತು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಅವರಿಂದಲೂ ಅದು ಸ್ಪಷ್ಟನೆಯನ್ನು ಕೋರಿದೆ.

ಕೊರೊನಿಲ್ ಮಾತ್ರೆ ಆಯುಷ್ ಸಚಿವಾಲಯದ ಪ್ರಮಾಣ ಪತ್ರ ಪಡೆದಿದ್ದು, ವಿಶ್ವ ಆರೋಗ್ಯ ಸಂಸ್ಥೆಯ ಪ್ರಮಾಣಪತ್ರ ಯೋಜನೆಯಡಿ ಕೋವಿಡ್​-19 ಚಿಕಿತ್ಸೆಗೆ ಇದು ಔಷಧ ಎಂದು ಫೆ. 19ರಂದು ಬಾಬಾ ರಾಮದೇವ್​ ಘೋಷಿಸಿಕೊಂಡಿದ್ದರು. ನಂತರ ಪತಂಜಲಿಯ ಎಂಡಿ ಆಚಾರ್ಯ ಬಾಲಕೃಷ್ಣ ಅವರು ವಿಶ್ವ ಆರೋಗ್ಯ ಸಂಸ್ಥೆಯ ಪ್ರಮಾಣಪತ್ರ ಯೋಜನೆಯನ್ವಯ ಆಯುಷ್​ ಸಚಿವಾಲಯ ಸೆಂಟ್ರಲ್​ ಡ್ರಗ್ಸ್ ಸ್ಟ್ಯಾಂಡರ್ಡ್​ ಕಂಟ್ರೋಲ್​ ಆರ್ಗನೈಜೇಷನ್​ನ ಪ್ರಮಾಣಪತ್ರ ಪಡೆದಿದೆ ಎಂದು ಸ್ಪಷ್ಟನೆ ನೀಡಿದ್ದರು. ಅಲ್ಲದೆ ಈ ಕೊರೊನಿಲ್ ಔಷಧ ಬಿಡುಗಡೆ ಕಾರ್ಯಕ್ರಮದಲ್ಲಿ ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಅವರು ಉಪಸ್ಥಿತರಿದ್ದರು.

ಆದರೆ ವಿಶ್ವ ಆರೋಗ್ಯ ಸಂಸ್ಥೆಯು ಪತಂಜಲಿ ಸಂಸ್ಥೆ ಹೇಳಿಕೊಂಡಿರುವುದನ್ನು ಟ್ವೀಟ್​ ಮೂಲಕ ಸ್ಪಷ್ಟವಾಗಿ ನಿರಾಕರಿಸಿದೆ. ಹೀಗಿರುವಾಗ ಈ ಅವೈಜ್ಞಾನಿಕ ಔಷಧದ ಪರವಾಗಿ ನಿಂತು ಕೇಂದ್ರ ಆರೋಗ್ಯ ಸಚಿವರು ದೇಶದ ಜನರಿಗೆ ಅನ್ಯಾಯ ಮಾಡಿದಂತಾಗಿದೆ. ಈ ಔಷಧದ ಕುರಿತ ಕ್ಲಿನಿಕಲ್ ಟ್ರಯಲ್ ಬಗ್ಗೆ ನಿಮ್ಮಿಂದ ಸ್ಪಷ್ಟನೆ ಸಿಗಬಹುದೇ? ದೇಶದ ಜನರಿಗೆ ನೀವು ಇದರ ಬಗ್ಗೆ ಸ್ಪಷ್ಟೀಕರಣ ನೀಡಬೇಕಾಗಿದೆ ಎಂದು ಐಎಂಎ ಕೇಂದ್ರ ಆರೋಗ್ಯ ಸಚಿವರಿಂದ ವಿವರಣೆಯನ್ನು ಕೋರಿದೆ

Leave a Reply

Your email address will not be published.