ಹೊಸದಿಲ್ಲಿ, ಮಾ.: ಇತ್ತೀಚೆಗೆ ಶತಾಬ್ದಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಬೆಂಕಿ ಅನಾಹುತ ಸಂಭವಿಸಿದ ಹಿನ್ನೆಲೆಯಲ್ಲಿ, ರೈಲಿನಲ್ಲಿ ಧೂಮಪಾನ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಂಡು ಭಾರೀ ದಂಡ ವಿಧಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ರೈಲ್ವೇಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಮಾರ್ಚ್ 13ರಂದು ಉತ್ತರಾಖಂಡ ಬಳಿ ದಿಲ್ಲಿ-ಡೆಹ್ರಾಡೂನ್ ಶತಾಬ್ದಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಬೆಂಕಿ ಅನಾಹುತ ಸಂಭವಿಸಿತ್ತು. ಇದರ ಕಾರಣ ಪತ್ತೆಹಚ್ಚಲು ನೇಮಿಸಿದ್ದ ಸಮಿತಿಯು, ರೈಲ್ವೇಯ ಶೌಚಾಲಯದಲ್ಲಿ ಪ್ರಯಾಣಿಕರು ಸೇದಿ ಕಸದ ಡಬ್ಬಿಗೆ ಎಸೆದಿದ್ದ ಬೀಡಿ/ಸಿಗರೇಟ್‌ನ ತುಂಡಿನಲ್ಲಿದ್ದ ಬೆಂಕಿ ಕಸಕಡ್ಡಿಗೆ ತಗುಲಿ ಬೆಂಕಿ ಹರಡಿರುವ ಸಾಧ್ಯತೆಯಿದೆ ಎಂದು ವರದಿ ಒಪ್ಪಿಸಿತ್ತು. ಈಗ, ಸಹಪ್ರಯಾಣಿಕ ಆಕ್ಷೇಪಿಸಿದರೂ ರೈಲಿನ ಬೋಗಿಯೊಳಗೆ ಧೂಮಪಾನ ನಡೆಸುವುದು ಕಂಡುಬಂದರೆ ಅವರಿಗೆ 100 ರೂ.ವರೆಗೆ ದಂಡ ವಿಧಿಸಬಹುದಾಗಿದೆ. ಈ ನಿಯಮವನ್ನು ಬದಲಿಸಿ, ಭಾರೀ ಮೊತ್ತದ ದಂಡ ಮತ್ತು ಜೈಲುಶಿಕ್ಷೆ ವಿಧಿಸಲು ರೈಲ್ವೇ ಇಲಾಖೆ ನಿರ್ಧರಿಸಿದೆ.
ಕೇಂದ್ರ ರೈಲ್ವೇ ಸಚಿವ ಪಿಯೂಷ್ ಗೋಯಲ್ ಇತ್ತೀಚೆಗೆ ರೈಲ್ವೇ ಮಂಡಳಿಯ ಸದಸ್ಯರು ಹಾಗೂ ವಲಯಗಳ ಪ್ರಧಾನ ವ್ಯವಸ್ಥಾಪಕರ ಜೊತೆ ಸಭೆ ನಡೆಸಿದ್ದು, ರೈಲಿನಲ್ಲಿ ಧೂಮಪಾನದ ವಿರುದ್ಧ ಪ್ರಯಾಣಿಕರಲ್ಲಿ ಜಾಗೃತಿ ಮೂಡಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂದು ಮೂಲಗಳು ಹೇಳಿವೆ.