ಅಪರಿಚಿತ ಹಾಗೂ ಅನಾಥ ವೃದ್ದನ ಶವವನ್ನು ಸುಮಾರು 2 ಕಿ.ಮೀ.ದೂರ ಹೊತ್ತು ಸಾಗಿದ ಆಂಧ್ರಪ್ರದೇಶದ ಮಹಿಳಾ ಸಬ್ ಇನ್ಸ್ ಪೆಕ್ಟರ್ ಅಂತರ್ಜಾಲದಲ್ಲಿ ಎಲ್ಲರ ಹೃದಯ ಗೆದ್ದಿದ್ದಾರೆ.
ಗದ್ದೆಯಲ್ಲಿ ಪತ್ತೆಯಾದ ಅನಾಥ ಶವವನ್ನು ಹೊತ್ತೊಯ್ಯಲು ಗ್ರಾಮಸ್ಥರು ನಿರಾಕರಿಸಿದ ಕಾರಣ ಪೊಲೀಸ್ ಅಧಿಕಾರಿ ಕೆ.ಸಿರಿಶಾ ಶವ ಸಾಗಾಟಕ್ಕೆ ಹೆಗಲು ಕೊಟ್ಟಿದ್ದಲ್ಲದೆ ಲಲಿತಾ ಚಾರಿಟೇಬಲ್ ಟ್ರಸ್ಟ್ ಗೆ ಶವವನ್ನು ಹಸ್ತಾಂತರಿಸಿ ಅಂತ್ಯಕ್ರಿಯೆಗೆ ನೆರವಾದರು.
ಶ್ರೀಕಾಕುಲಂ ಜಿಲ್ಲೆಯ ಕರಾವಳಿಪಟ್ಟಣ ಪಲಾಸದ ಗದ್ದೆಯೊಂದರಲ್ಲಿ ಪತ್ತೆಯಾದ ಶವವನ್ನು ತಾತ್ಕಾಲಿಕ ಸ್ಟ್ರೆಚರ್ ಮೇಲೆ ಇಟ್ಟು ಸಾಗಿಸಲಾಯಿತು. ಸಬ್ ಇನ್ಸ್ ಪೆಕ್ಟರ್ ಕೆ.ಸಿರಿಶಾ ಪೊಲೀಸ್ ಸಮವಸ್ತ್ರದಲ್ಲೆ ಸ್ಟ್ರೆಚರ್ ನ ಮುಂದೆ ನಿಂತು ಶವವನ್ನು ಸಾಗಿಸುತ್ತಿರುವ ಚಿತ್ರಗಳು ಹಾಗೂ ವೀಡಿಯೊಗಳು ಸೋಮವಾರದಿಂದ ಅಂತರ್ಜಾಲದಲ್ಲಿ ವ್ಯಾಪಕ ವೈರಲ್ ಹಾಗೂ ಶೇರ್ ಆಗಿವೆ. ಪೊಲೀಸ್ ಅಧಿಕಾರಿಣಿಯ ಮಾನವೀಯ ನಡೆಗೆ ಆಂಧ್ರಪ್ರದೇಶ ಪೊಲೀಸ್ ಇಲಾಖೆ, ರಾಜಕಾರಣಿಗಳು ಸಹಿತ ಎಲ್ಲರಿಂದ ಪ್ರಶಂಸೆ ವ್ಯಕ್ತವಾಗಿದೆ.