ಬೆಂಗಳೂರು: ರಾಜ್ಯ ಪೊಲೀಸರ ಕ್ಷೇಮಾಭಿವೃದ್ಧಿ ಜತೆಗೆ ಇಲಾಖೆಯ ಅತ್ಯಾಧುನೀಕರಣಕ್ಕೆ ಆದ್ಯತೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಪೊಲೀಸ್ ಧ್ವಜಾ ದಿನಾಚರಣೆ ಅಂಗವಾಗಿ ಶುಕ್ರವಾರ ಕೋರಮಂಗಲದ ಕೆಎಸ್‌ಆರ್‌ಪಿ ಪರೇಡ್ ಮೈದಾನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗೌರವ ವಂದನೆ ಸ್ವೀಕರಿಸಿ ಮಾತನಾಡಿದರು.
ಪೊಲೀಸರ ಕ್ಷೇಮಾಭಿವೃದ್ಧಿಗೆ ಮತ್ತು ಪೊಲೀಸ್ ವ್ಯವಸ್ಥೆ ಆಧುನೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಪೊಲೀಸರ ಗೃಹ-2025 ಯೋಜನೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಚಾಲನೆ ನೀಡಿದ್ದು, ಯೋಜನೆ ಅಡಿಯಲ್ಲಿ ಅಧಿಕಾರಿ-ಸಿಬ್ಬಂದಿಗೆ 2 ಸಾವಿರ ಕೋಟಿ ರೂ. ವೆಚ್ಚದಲ್ಲಿ 10,0034 ಮನೆಗಳನ್ನು ನಿರ್ಮಿಸಿಕೊಡಲಾಗುತ್ತದೆ. ಜತೆಗೆ ಸ್ವಂತ ಕಟ್ಟಡ ಇಲ್ಲದ ರಾಜ್ಯದ 100 ಠಾಣೆಗಳಿಗೆ ಮುಂದಿನ ಐದು ವರ್ಷಗಳಲ್ಲಿ 200 ಕೋಟಿ ರೂ.ಕೊಡಲಾಗುತ್ತದೆ.
ಪೊಲೀಸ್ ಅಧಿಕಾರಿ-ಸಿಬ್ಬಂದಿ ಆರೋಗ್ಯಗಾಗಿ ಆರೋಗ್ಯ ಭಾಗ್ಯ ಯೋಜನೆ ಅಡಿಯಲ್ಲಿ ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿರುವ ಒಟ್ಟು 110 ಕೋಟಿ ರೂ. ಈಗಾಗಲೇ ಬಿಡುಗಡೆ ಮಾಡಲಾಗಿದೆ. ನಿವೃತ್ತ ಪೊಲೀಸ್ ಅಧಿಕಾರಿ-ಸಿಬ್ಬಂದಿಗಾಗಿ 20 ಕೋಟಿ ರೂ. ಅನುದಾನ ಮೀಸಲಿಟ್ಟಿದ್ದು, 7.5 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದರು.
ಡ್ರಗ್ಸ್ ವಿರುದ್ಧ ಸಮರ: ಕಳೆದ ಕೆಲ ವರ್ಷಗಳ ಅವಧಿಯಲ್ಲಿ ಅತಿ ಹೆಚ್ಚು ಡ್ರಗ್ಸ್ ಪತ್ತೆ ಹಚ್ಚಿ ಜಪ್ತಿ ಮಾಡಲಾಗಿದೆ. ರಾಜ್ಯದ ಮೂಲೆ ಮೂಲೆಗಳಲ್ಲಿ ಹೋಗಿ ಮಾದಕ ವಸ್ತುಗಳ ಮಾರಾಟ ಜಾಲಗಳನ್ನು ಪತ್ತೆ ಹಚ್ಚಲಾಗಿದೆ. ಅದಕ್ಕೆ ಮುಂದಿನ ದಿನಗಳಲ್ಲಿ ಸಾರ್ವಜನಿಕರು ಕೂಡ ಸಹಕಾರ ನೀಡಬೇಕು ಎಂದರು.
ಇದೇ ವೇಳೆ ಕಾರ್ಯಕ್ರಮದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ 125 ಮಂದಿ ಅಧಿಕಾರಿ-ಸಿಬ್ಬಂದಿಗೆ ಮುಖ್ಯಮಂತ್ರಿ ಪೊಲೀಸ್ ಪದಕ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಗೃಹ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಡಾ. ರಜನೀಶ್ ಗೋಯಲ್, ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್, ಕೆಎಸ್‌ಆರ್‌ಪಿ ಎಡಿಜಿಪಿ ಅಲೋಕ್ ಕುಮಾರ್ ಹಾಗೂ ಇತರೆ ಹಿರಿಯ ಅಧಿಕಾರಿಗಳು ಇದ್ದರು.