ಪೊಲೀಸರು ಇರುವುದರಿಂದಲೇ ನಾಗರೀಕರು ನೆಮ್ಮದಿಯಾಗಿ ಇರಲು ಸಾಧ್ಯ :: ಜಿಲ್ಲಾಧಿಕಾರಿ ಕವಿತಾ ಮನ್ನಿಕೇರಿ

ಚಿತ್ರದುರ್ಗ,ನಿತ್ಯವಾಣಿ, ಏ. 02 : ಹೆಚ್.ಸಿಯಿಂದ ಎಎಸ್‍ಐ ಬಡ್ತಿಯನ್ನು ಹೊಂದುವ ಸಮಯದಲ್ಲಿ ಕೆಲವೊಂದು ತೊಂದರೆಗಳಿದ್ದು ಅವುಗಳನ್ನು ಸರಿಪಡಿಸಲು ಸರ್ಕಾರಕ್ಕೆ ಒತ್ತಡವನ್ನು ತರುವಂತೆ ನಿವೃತ್ತ ಆರಕ್ಷಕ ಉಪ ನಿರೀಕ್ಷಕರಾದ ಎಸ್.ಆರ್.ಶಿವಮೂರ್ತಿ ಒತ್ತಾಯಿಸಿದ್ದಾರೆ.

ಜಿಲ್ಲಾ ಪೊಲೀಸ್ ಇಲಾಖೆಯಿಂದ ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಶುಕ್ರವಾರ ಆಯೋಜಿಸಿದ್ದ ಪೊಲೀಸ್ ಕಲ್ಯಾಣ ಮತ್ತು ಧ್ವಜ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿ ಪೊಲೀಸರು ನಿರಂತರ ಜನಸಂಪರ್ಕದಲ್ಲಿ ಇರಬೇಕು. ಅವರೊಂದಿಗೆ ಉತ್ತಮವಾಗಿ ನಡೆದುಕೊಳ್ಳಬೇಕು. ಯಾವುದೇ ರೀತಿಯ ಅಪರಾಧ ಪ್ರಕರಣಗಳು ನಡೆದ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಸ್ಪಂದಿಸಬೇಕು. ಆಗ ಜನರು ಪೊಲೀಸರ ಬಗ್ಗೆ ನಂಬಿಕೆ, ವಿಶ್ವಾಸ ಮೂಡುತ್ತದೆ ಎಂದು ಸಲಹೆ ನೀಡಿದರು.

ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿಮಾಡಬೇಕು. ಈ ಮೂಲಕ ಪೊಲೀಸರನ್ನು ಒತ್ತಡ ಮುಕ್ತರನ್ನಾಗಿ ಮಾಡಬೇಕು. ಪೊಲೀಸರು ಬಿಡುವಿನ ವೇಳೆ ತಮ್ಮ ಕುಟುಂಬದ ಕಲ್ಯಾಣಕ್ಕೆ ಗಮನ ನೀಡಲು ಅವಕಾಶ ಲಭಿಸುವಂತೆ ಮಾಡಬೇಕು ಎಂದು ಮನವಿ ಮಾಡಿ ಹೆಚ್.ಸಿ.ಯಿಂದ ಎ.ಎಸ್.ಐ. ಬಡ್ತಿಯನ್ನು ಹೊಂದಿದಾಗ ರಜೆ, ಗಳಿಕೆ ರಜೆಯನ್ನು ರದ್ದು ಮಾಡಲಾಗಿದೆ ಇದರಿಂದ ತೊಂದರೆಯಾಗಲಿದೆ ಬಡ್ತಿ ಸಿಗದಿದ್ದರೆ ಚೆನ್ನಾಗಿತ್ತು ಎಂದು ಹೇಳಲಾಗುತ್ತಿದೆ. ಆರ್ಥಿಕವಾಗಿಯೂ ಸಹಾ ಕಡಿಮೆಯಾಗುತ್ತಿದೆ ಬಡ್ತಿ ಹೊಂದಿದ ಎಎಸ್‍ಐಗಳಿಗೆ ಉತ್ತಮ ಸಮವಸ್ತ್ರ ಹಾಗೂ ಅಧಿಕಾರ ಸಿಕ್ಕ ಸಂತೋಷ ಇರುತ್ತದೆ ಹೊರತು ಭತ್ಯೆ ಸಿಗುವುದಿಲ್ಲ. ಯಾವುದೇ ಆರ್ಥಿಕ ಸಹಾಯ ಸಿಗುವುದಿಲ್ಲ ಇದರ ಬಗ್ಗೆ ಸರ್ಕಾರದ ಗಮನ ಸೆಳೆಯುವಂತೆ ಎಂದು ಶಿವಮೂರ್ತಿ ಜಿಲ್ಲಾ ವರಿಷ್ಠಾಧಿಕಾರಿಗಳಿಗೆ ಮನವಿ ಮಾಡಿದರು.

ಕೊರೋನಾ ಸಮಯದಲ್ಲಿ ಜಿಲ್ಲಾ ಪೋಲಿಸ್ ಉತ್ತಮವಾದ ಕೆಲಸವನ್ನು ಮಾಡಿದ್ದಾರೆ. ಸರ್ಕಾರ ಲಾಕ್‍ಡೌನ್ ಘೋಷಿಸಿದಾಗ ಜಿಲ್ಲೆಯಲ್ಲಿ ಬೇರೆ ರಾಜ್ಯದ ಕಾರ್ಮಿಕರು ಇಲ್ಲಿ ಬಂದಿದ್ದರು ಅವರನ್ನು ಅವರ ರಾಜ್ಯಕ್ಕೆ ಕಳುಹಿಸುವಲ್ಲಿ ಉತ್ತಮವಾದ ಕಾರ್ಯವನ್ನು ಮಾಡಿದ್ದಾರೆ. ಇದೇ ರೀತಿ ಪೋಲಿಸ್ ಸಿಬ್ಬಂದಿಗೆ ಆರೋಗ್ಯದ ಬಗ್ಗೆಯೂ ಸಹಾ ಕಾಳಜಿಯನ್ನು ವಹಿಸುವುದರ ಮೂಲಕ ಜನತೆಯಲ್ಲಿಯೂ ಸಹಾ ಜಾಗೃತಿಯನ್ನು ಮೂಡಿಸಿದ್ದಾರೆ ಎಂದು ಜಿಲ್ಲಾ ರಕ್ಷಣಾಧಿಕಾರಿಗಳಾದ ಶ್ರೀಮತಿ ರಾಧಿಕಾರವರ ಕಾರ್ಯವನ್ನು ಶ್ಲಾಘೀಸಿದರು.

ಜಿಲ್ಲಾ ರಕ್ಷಣಾಧಿಕಾರಿ ಜಿ.ರಾಧಿಕಾ ಮಾತನಾಡಿ, ಪೊಲೀಸರ ಕಲ್ಯಾಣಕ್ಕಾಗಿ ಇಲಾಖೆ ಬದ್ದವಾಗಿದೆ ಪೊಲೀಸ್ ಧ್ವಜವನ್ನು ಮಾರಾಟ ಮಾಡಿ 11.70 ಲಕ್ಷ ರೂಪಾಯಿ ಸಂಗ್ರಹ ಮಾಡಲಾಗಿದೆ. ಇದರಲ್ಲಿ ಶೇಕಡ 50 ರಷ್ಟು ಹಣವನ್ನು ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ದಿ ನಿಧಿಗೆ, 25ರಷ್ಟು ಹಣ ಘಟಕ ಜಿಲ್ಲಾ ಪೊಲೀಸ್ ಕಲ್ಯಾಣ ನಿಧಿ, ಇನ್ನು ಉಳಿದ ಹಣವನ್ನು ಕೇಂದ್ರ ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ದಿ ನಿಧಿಗೆ ನೀಡಲಾಗುವುದು ಎಂದು ತಿಳಿಸಿದರು.

2020-21ನೇ ಸಾಲಿನಲ್ಲಿ ಐವರು ಮೃತಪಟ್ಟಿದ್ದು ತಲಾ 10 ಸಾವಿರ ರೂಪಾಯಿ ನೀಡಲಾಗಿದೆ. ನಿವೃತ್ತ 237 ಸಿಬ್ಬಂದಿ ಆರೋಗ್ಯ ಸೇವೆ ಪಡೆದಿದ್ದಾರೆ. ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಆವರಣದಲ್ಲಿ ಕ್ಯಾಂಟಿನ್ ತೆರೆಯಲಾಗಿದೆ. ಎಲ್ಲ ರೀತಿಯಲ್ಲಿಯೂ ಪೊಲೀಸರ ಕಲ್ಯಾಣಕ್ಕೆ ಇಲಾಖೆ ಬದ್ದವಾಗಿದೆ ಎಂದು ಹೇಳಿದರು.

ಜಿಲ್ಲಾಧಿಕಾರಿ ಕವಿತಾ ಮನ್ನಿಕೇರಿ ಮಾತನಾಡಿ, ಸಣ್ಣ ಸಣ್ಣ ವಯಸ್ಸಿನಲ್ಲಿಯೇ ಪೊಲೀಸ್ ಸಿಬ್ಬಂದಿ ಅಕಾಲಿಕ ಮರಣಕ್ಕೆ ತುತ್ತಾಗಿರುತ್ತಿರುವುದು ಶೋಚನೀಯ ಸಂಗತಿ.ಅದಕ್ಕಾಗಿ ಜೀವನದಲ್ಲಿ ಪ್ಲಾನ್ ಮಾಡಿಕೊಳ್ಳಬೇಕು. ಉಳಿತಾಯ ಎಷ್ಟು ಮಾಡಬೇಕು. ಖರ್ಚು ಎಷ್ಟು ಮಾಡಬೇಕು ಎಂಬುದನ್ನು ಸರಿಯಾಗಿ ಕಲಿತುಕೊಂಡು ಕುಟುಂಬದ ಜೊತೆ ಉತ್ತಮವಾಗಿ ಕಾಲ ಕಳೆಯುವಂತೆ ಸಲಹೆ ನೀಡಿದರು.

ಪೊಲೀಸರು ಇರುವುದರಿಂದಲೇ ನಾಗರೀಕರು ನೆಮ್ಮದಿಯಾಗಿ ಇರಲು ಸಾಧ್ಯ. ಸುಲಿಗೆ, ದರೋಡೆ ಸೇರಿದಂತೆ ಕಾನೂನು ಬಾಹಿರ ಚಟುವಟಿಕೆಗಳನ್ನು ನಿಯಂತ್ರಿಸುತ್ತಿರುವುದು ಪೊಲೀಸರು. ಎಲ್ಲರೂ ಪೊಲೀಸರಿಗೆ ಚಿರಋಣಿಯಾಗಿರಬೇಕು ಎಂದರು.

ಹೆಚ್ಚುವರಿ ರಕ್ಷಣಾಧಿಕಾರಿ ಮಹಾಲಿಂಗ ನಂದಗಾವಿ, ಐಮಂಗಲ ಪೋಲಿಸ್ ಪ್ರಾಂಶುಪಾಲರಾದ ಪಾಪಣ್ಣ ಭಾಗವಹಿಸಿದ್ದರು ಇದೇ ಸಂದರ್ಭದಲ್ಲಿ ನಿವೃತ್ತಿ ಹೊಂದಿದ ವಿವಿಧ ರೀತಿಯ ಹುದ್ದೆಗಳ ಸಿಬ್ಬಂದಿ, ಅಧಿಕಾರಿಗಳನ್ನು ಸನ್ಮಾನಿಸಲಾಯಿತು.

ಮೊಳಕಾಲ್ಮೂರು ತಾಲ್ಲೂಕಿನ ರಾಂಪುರ ಪೊಲೀಸ್ ಪೇದೆ ತಿಮ್ಮಪ್ಪ ಅಪಘಾತದಲ್ಲಿ ಮೃತಪಟ್ಟಿದ್ದು ಅವರ ಕುಟುಂಬಕ್ಕೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ವತಿಯಿಂದ ವಿಮೆ ಹಣ 30 ಲಕ್ಷ ರೂಪಾಯಿ ಚೆಕ್ ಅನ್ನು ವಿತರಿಸಲಾಯಿತು. ಅಪಘಾತದಲ್ಲಿ ತಲೆಗೆ ತೀವ್ರ ಪೆಟ್ಟು ಬಿದ್ದು 15 ದಿನ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದರೂ ಪ್ರಯೋಜನವಾಗದೆ ಮೃತಪಟ್ಟಿದ್ದರು. ಇವರು ಸ್ಯಾಲರಿ ಯೋಜನೆಗೆ ಒಳಪಟ್ಟಿದ್ದರಿಂದ ಇವರ ಕುಟುಂಬಕ್ಕೆ 30 ಲಕ್ಷ ರೂಪಾಯಿ ವಿಮೆ ಚೆಕ್ ಅನ್ನು ಬ್ಯಾಂಕಿನ ಮುಖ್ಯ ಪ್ರಬಂಧಕ ಸುರೇಶ್ ವಿತರಿಸಿದರು.

ಸಾರ್ವಜನಿಕರಿಗೆ ಧ್ವಜಗಳನ್ನು ಮಾರಾಟ ಮಾಡುವ ಮೂಲಕ ಕಲ್ಯಾಣ ನಿಧಿಗೆ ಹಣ ಸಂಗ್ರಹಿಸಲಾಯಿತು.

 

Leave a Reply

Your email address will not be published.