ಮಹಿಳಾ ಪೊಲೀಸ್​ ಎಸ್​ಐ ಆತ್ಮಹತ್ಯೆ ಸತ್ಯ ಬಹಿರಂಗ

ಭಾರಿ ಸುದ್ದಿಯಾಗಿದ್ದ ಉತ್ತರ ಪ್ರದೇಶದ ಮಹಿಳಾ ಪೊಲೀಸ್​ ಸಬ್​ ಇನ್ಸ್​ಪೆಕ್ಟರ್​ ಆತ್ಮಹತ್ಯೆ ಪ್ರಕರಣದಲ್ಲಿ ಪೊಲೀಸ್​ ದೈಹಿಕ ತರಬೇತಿ ಕಾಲೇಜಿನ ಬೋಧಕನ ವಿರುದ್ಧ ಭಾನುವಾರ ಎಫ್​ಐಆರ್​ ದಾಖಲಾಗಿದೆ.

ಆರೋಪಿಯನ್ನು ಉಮೇಶ್​ ಶರ್ಮಾ ಎಂದು ಗುರುತಿಸಲಾಗಿದೆ. ಆರ್ಜೋ ಪವಾರ್ (30) ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಅಡಿಯಲ್ಲಿ ಹಾಗೂ ಲೈಂಗಿಕ ಕಿರುಕುಳ ನೀಡಿ ಅತ್ಯಾಚಾರ ಎಸಗಿರುವ ಆರೋಪದ ಮೇಲೆ ಎಫ್​ಐಆರ್​ ದಾಖಲಿಸಲಾಗಿದೆ. ಬುಲಂದ್​ಶಹರ್​ನ ಅನೂಪ್​ಶಹರ್​ ಕೊಟ್ವಾಲಿ ಪೊಲೀಸ್​ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಆರ್ಜೋ ಪವಾರ್​ ಜನವರಿ 1ರಂದು ತಾವಿದ್ದ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು.

ಎಸ್​ಐ ಸಾವಿಗೀಡಾದ ಮೂರು ವಾರಗಳ ಬಳಿಕ ಸಹೋದರ ಮನೀಶ್​ ಎಂಬುವರು ಉಮೇಶ್​ ಶರ್ಮಾ ವಿರುದ್ಧ ದೂರು ದಾಖಲಿಸಿದ್ದರು. ಮೊರಾದಾಬಾದ್​ ಪೊಲೀಸ್​ ಟ್ರೈನಿಂಗ್​ ಕಾಲೇಜಿನಲ್ಲಿ ಬೋಧನಾಗಿರುವ ಉಮೇಶ್​, ಸಹೋದರಿಯನ್ನು ಆತ್ಮಹತ್ಯೆಗೆ ಬಲವಂತ ಮಾಡಿದ್ದಾರೆಂದು ಮನೀಶ್​ ಆರೋಪಿಸಿದ್ದರು. ಆರ್ಜೋ ಆತ್ಮಹತ್ಯೆ ಸುದ್ದಿ ಕೇಳಿ ತಾಯಿಗೆ ಬಿಪಿ ಹೆಚ್ಚಾಗಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೀಗಾಗಿ ಇಷ್ಟು ದಿನಗಳವರೆಗೆ ಪ್ರಕರಣ ಸಂಬಂಧ ಯಾವುದೇ ದೂರು ನೀಡಲಾಗಿರಲಿಲ್ಲ ಎಂದು ಮನೀಶ್​ ಸ್ಪಷ್ಟನೆ ನೀಡಿದ್ದರು.

ಇದೀಗ ಉಮೇಶ್​ ವಿರುದ್ಧ ಐಪಿಸಿ ಸೆಕ್ಸನ್​ 306 (ಆತ್ಮಹತ್ಯೆಗೆ ಪ್ರಚೋದನೆ) ಮತ್ತು 384 (ಬಲಾತ್ಕಾರವಾಗಿ ಪಡೆಯುವುದು) ಅಡಿಯಲ್ಲಿ ಎಫ್​ಐಆರ್​ ದಾಖಲಾಗಿದೆ ಎಂದು ಬುಲಂದ್​ಶಹರ್​ ಹಿರಿಯ ಪೊಲೀಸ್​ ವರಿಷ್ಠಾಧಿಕಾರಿ ಸಂತೋಷ್​ ಕುಮಾರ್​ ಸಿಂಗ್​ ಹೇಳಿದ್ದಾರೆ.

ಡಿಸೆಂಬರ್​ 29ರಂದು ಉಮೇಶ್​, ಬುಲಂದ್​ಶಹರ್​ನ ತಮ್ಮ ಗ್ರಾಮಕ್ಕೆ ಆರ್ಜೋರನ್ನು ಆಹ್ವಾನಿಸಿದ್ದರು. ಈ ವೇಳೆ ಟೀನಲ್ಲಿ ಮತ್ತು ಬರುವ ಪದಾರ್ಥ ಬೆರೆಸಿ ದೈಹಿಕ ಸಂಪರ್ಕ ಬೆಳೆಸಿದ್ದಾರೆ. ಅಲ್ಲದೆ, ತನ್ನ ಕೃತ್ಯದ ವಿಡಿಯೋವನ್ನು ಮಾಡಿ ನಿರಂತರವಾಗಿ ಬೆದರಿಕೆ ಹಾಕುತ್ತಿದ್ದ. ಇದರ ನಡುವೆ ಆರ್ಜೋ ಮದುವೆ ಸಿದ್ಧವಾದಾಗ ಮದುವೆ ರದ್ದು ಮಾಡುವಂತೆ ಒತ್ತಾಯಿಸುತ್ತಿದ್ದ. ಮದುವೆ ರದ್ದು ಮಾಡದಿದ್ದರೆ ಅಶ್ಲೀಲ ಫೋಟೋಗಳನ್ನು ಹರಿಬಿಡುವುದಾಗಿ ಹೆದರಿಸುತ್ತಿದ್ದ ಎಂದು ಎಫ್​ಐಆರ್​ನಲ್ಲಿ ಉಲ್ಲೇಖಿಸಲಾಗಿದೆ.

ತನಿಖೆ ನಡೆಯುತ್ತಿದ್ದ ಉಮೇಶ್​ ವಿರುದ್ಧದ ಆರೋಪ ಸಾಬೀತಾದಲ್ಲಿ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಬುಲಂದ್​ಶಹರ್​ ಎಸ್​ಎಸ್​ಪಿ ತಿಳಿಸಿದ್ದಾರೆ.

ಘಟನೆ ಹಿನ್ನೆಲೆ ಏನು?
ಮೂಲತಃ ಶಾಮ್ಲಿ ಜಿಲ್ಲೆಯ ಆರ್ಜೋ 2015ರಲ್ಲಿ ಸಬ್​ ಇನ್ಸ್​ಪೆಕ್ಟರ್​ ಆಗಿ ನೇಮಕವಾದರು. ಬುಲಂದ್​ಶಹರ್​ನಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಕಳೆದ ಜನವರಿ 1ರಂದು ಮಾಲಕಿ ಆರ್ಜೋ ಅವರಿಗೆ ಸಾಕಷ್ಟು ಬಾರಿ ಕರೆ ಮಾಡಿದ್ದಾರೆ. ಆದರೆ, ಕರೆ ಸ್ವೀಕರಿಸದಿದ್ದಾಗ ಅನುಮಾನಗೊಂಡ ಮಾಲಕಿ ಮನೆಯ ಬಳಿ ಹೋಗಿ ನೋಡಿದಾಗ ಒಳಗಡೆಯಿಂದ ಲಾಕ್​ ಮಾಡಿರುವುದು ತಿಳಿಯುತ್ತದೆ. ಬಳಿಕ ಬಾಗಿಲು ಬಡಿದಾಗಲೂ ಆ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಗ್ಲಾಸ್​ ವೆಂಟಿಲೇಟರ್​ ಮೂಲಕ ಒಳ ಹೋಗಿ ನೋಡಿದಾಗ ನೇಣು ಬಿಗಿದ ಸ್ಥಿತಿಯಲ್ಲಿ ಆರ್ಜೋ ಶವ ಕೋಣೆಯಲ್ಲಿ ಪತ್ತೆಯಾಗುತ್ತದೆ. ಈ ವೇಳೆ ಡೆತ್​ನೋಟ್​ ಸಹ ಪತ್ತೆಯಾಗಿತ್ತು

Leave a Reply

Your email address will not be published.