ಮತ್ತೆ ಸುದೀಪ್​ಗೆ ಆ್ಯಕ್ಷನ್-ಕಟ್​ ಹೇಳಲಿರುವ ಪ್ರೇಮ್​!

ಸುದೀಪ್​ ಜತೆಗೆ ಮತ್ತೆ ಯಾವಾಗ ಚಿತ್ರ ಮಾಡುತ್ತೀರಾ?

ಹಾಗಂತ ನಿರ್ದೇಶಕ ‘ಜೋಗಿ’ ಪ್ರೇಮ್​ ಅವರನ್ನು ಜನ ಕೇಳುತ್ತಲೇ ಇದ್ದರು. ಆದರೆ, ಪ್ರೇಮ್​ ಮಾತ್ರ ‘ದಿ ವಿಲನ್​’ ನಂತರ, ತಮ್ಮ ಬಾಮೈದ ರಾಣಾ ಅಭಿನಯದಲ್ಲಿ ‘ಏಕ್​ ಲವ್​ ಯಾ’ ಚಿತ್ರ ಮಾಡಿದ್ದರು. ಆ ಚಿತ್ರದ ಚಿತ್ರೀಕರಣ ಬಹುತೇಕ ಮುಗಿದಿದ್ದು, ಮುಂದಿನ ವರ್ಷ ಬಿಡುಗಡೆಯಾಗಲಿದೆ.ಈ ಮಧ್ಯೆ, ಸುದೀಪ್​ ಜತೆಗೆ ಒಂದು ಚಿತ್ರ ಮಾಡುವುದಾಗಿ ಪ್ರೇಮ್​ ಹೇಳಿಕೊಂಡಿದ್ದಾರೆ. ಇದುವರೆಗೂ ಕಾಣಿಸಿಕೊಳ್ಳದ ಹೊಸ ಅವತಾರದಲ್ಲಿ ಸುದೀಪ್​ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಪ್ರೇಮ್​ ಹೇಳಿಕೊಂಡಿದ್ದಾರೆ.ಇಂದು ಸುದೀಪ್​ ಅವರ 47ನೇ ಹುಟ್ಟುಹಬ್ಬ, ಈ ಸಂದರ್ಭದಲ್ಲಿ ಅವರಿಗೆ ಶುಭಾಶಯ ತಿಳಿಸಿರುವ ಪ್ರೇಮ್​, ತಮ್ಮ ಡಾರ್ಲಿಂಗ್​ ಜತೆಗೆ ಇನ್ನೊಂದು ಚಿತ್ರ ಮಾಡುವುದಾಗಿ ಹೇಳಿಕೊಂಡಿದ್ದಾರೆ.

ಈ ಕುರಿತು ಟ್ವೀಟ್​ ಮಾಡಿರುವ ಅವರು, ‘ನನ್ನ ಮುಂದಿನ ಚಿತ್ರ ಯಾವುದು ಮತ್ತು ನನ್ನ ಡಾರ್ಲಿಂಗ್​ ಸುದೀಪ್​ ಅವರ ಜತೆಗೆ ಮತ್ತೆ ಯಾವಾಗ ಕೆಲಸ ಮಾಡುತ್ತೀನಿ ಎಂದು ಎಲ್ಲರೂ ಕೇಳುತ್ತಲೇ ಇದ್ದರು. ಸುದೀಪ್​ ಅವರ ಹುಟ್ಟುಹಬ್ಬದ ಶುಭಸಂದರ್ಭದಲ್ಲಿ, ಅವರ ಜತೆಗೆ ಇನ್ನೊಂದು ಚಿತ್ರ ಮಾಡುತ್ತಿರುವುದಾಗಿ ಘೋಷಿಸುತ್ತಿದ್ದೇನೆ. ಇದುವರೆಗೂ ಕಾಣಿಸಿಕೊಳ್ಳದ ಹೊಸ ಅವತಾರದಲ್ಲಿ ಸುದೀಪ್​ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ’ ಎಂದು ಪ್ರೇಮ್​ ಹೇಳಿದ್ದಾರೆ.ಇದಕ್ಕೂ ಮುನ್ನ ಶಿವರಾಜಕುಮಾರ್ ಮತ್ತು ಸುದೀಪ್​ ಅಭಿನಯದಲ್ಲಿ ‘ದಿ ವಿಲನ್​’ ಚಿತ್ರ ಮಾಡಿದ್ದರು ಪ್ರೇಮ್​. ಈ ಚಿತ್ರ ನಿರೀಕ್ಷಿತ ಯಶಸ್ಸು ಕಾಣಲಿಲ್ಲ. ಆದರೆ, ಪ್ರೇಮ್​ ಕೆಲಸ ಮತ್ತು ಅವರಿಗಿರುವ ಸಿನಿಮಾ ಪ್ರೀತಿಯ ಬಗ್ಗೆ ಸುದೀಪ್​ ಹಾಡಿ ಹೊಗಳಿದ್ದರು. ಚಿತ್ರದ ಯಶಸ್ಸು, ಸೋಲು ಪಕ್ಕಕ್ಕಿಟ್ಟು ಮುಂದೊಂದು ದಿನ ಅವಕಾಶ ಸಿಕ್ಕರೆ ಅವರ ಜತೆಗೆ ಮತ್ತೆ ಕೆಲಸ ಮಾಡುವುದಾಗಿ ಹೇಳಿದ್ದರು. ಅದಕ್ಕೆ ತಕ್ಕ ಹಾಗೆ, ಪ್ರೇಮ್​ ಇದೀಗ ಒಂದು ವೇದಿಕೆ ಕಲ್ಪಿಸಿದ್ದಾರೆ.

ಸುದೀಪ್​ ಮತ್ತು ಪ್ರೇಮ್​ ಇಬ್ಬರೂ ತಮ್ತಮ್ಮ ಚಿತ್ರಗಳಲ್ಲಿ ಬ್ಯುಸಿ ಇರುವುದರಿಂದ, ಹಳೆಯ ಕಮಿಟ್​ಮೆಂಟ್​ಗಳೆಲ್ಲಾ ಮುಗಿದ ನಂತರ ಈ ಚಿತ್ರ ಪ್ರಾರಂಭವಾಗುವ ಸಾಧ್ಯತೆ ಇದೆ.

Leave a Reply

Your email address will not be published.