ನಿತ್ಯವಾಣಿ,ಚಿತ್ರದುರ್ಗ, (ಜ.20) : ಫ್ಲೋರೈಡ್ ಅಂಶ ಹೆಚ್ಚಾಗಿರುವ ಆಹಾರ ಹಾಗೂ ನೀರು ಸೇವನೆಯಿಂದ ಫ್ಲೋರೋಸಿಸ್ ಉಂಟಾಗುತ್ತದೆ.
ಇದನ್ನು ತಡೆಗಟ್ಟುವುದು ಅವಶ್ಯಕ. ಸಾಮಾನ್ಯವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಾಗಿ ಕೊಳವೆ ಬಾವಿಯ ನೀರು ಸೇವಿಸುವುದರಿಂದ ಈ ರೀತಿಯ ಸಮಸ್ಯೆ ತಲೆದೂರುತ್ತದೆ. ಬಾಗೇನಹಾಳ್ ಗ್ರಾಮದಲ್ಲಿ ಈಗಾಗಲೇ ಶುದ್ಧ ಕುಡಿಯುವ ನೀರಿನ ಘಟಕವಿದ್ದು ಗ್ರಾಮಸ್ಥರು ಇದರ ಉಪಯೋಗ ಪಡೆದುಕೊಳ್ಳಬೇಕು ಕೇವಲ ಎರಡು ಮೂರು ರೂಪಾಯಿ ಉಳಿಸುವುದಕ್ಕಾಗಿ ನಿಮ್ಮ ಕುಟುಂಬಸ್ತರ ಆರೋಗ್ಯ ಹಾಳು ಮಾಡಬೇಡಿ” ಎಂದು ಚಿತ್ರದುರ್ಗ ಜಿಲ್ಲಾ ಫ್ಲೋರೋಸಿಸ್ ಸಲಹೆಗಾರರಾದ ಡಾ.ಹೆಚ್. ರಾಕೇಶ್ ಮನವಿ ಮಾಡಿದರು.
ಅವರು ಇಂದು ತಾಲ್ಲೂಕಿನ ಬಾಗೇನಹಾಳ್ ಗ್ರಾಮದ ಚೌಡೇಶ್ವರಿ ದೇವಾಲಯದ ಆವರಣ ಹಾಗೂ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರೀಯ ಫ್ಲೋರೋಸಿಸ್ ತಡೆ ಹಾಗೂ ನಿಯಂತ್ರಣ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳು ಹಾಗೂ ಸಾರ್ವಜನಿಕರ ಆರೋಗ್ಯ ತಪಾಸಣೆ ನಡೆಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಹಾಜರಿದ್ದ ಬೆಳಗಟ್ಟ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ನಿರೀಕ್ಷಣಾಧಿಕಾರಿ ಮಹೇಶ್ ಡಿ. ಮಾತನಾಡಿ ” ಫ್ಲೋರೋಸಿಸ್ ರೋಗದಿಂದ ಮುಕ್ತರಾಗಲು ‘ಸಿ’ ಅನ್ನಾಂಗ ಹೆಚ್ಚಿರುವ ನಿಂಬೆ, ನೆಲ್ಲಿಕಾಯಿ, ಕಿತ್ತಳೆ, ಮೋಸಂಬಿ, ಸೀಬೆ ಹಣ್ಣುಗಳನ್ನು ಆಹಾರದಲ್ಲಿ ಸೇವಿಸುವುದು.ಕ್ಯಾಲ್ಸಿಯಂ ಹೆಚ್ಚಿರುವ ಪದಾರ್ಥಗಳಾದ ಹಾಲು, ಬೆಲ್ಲ, ಹಸಿರು ಸೊಪ್ಪು, ತರಕಾರಿಗಳು, ರಾಗಿ ಮುಂತಾದ ಆಹಾರ ಪದಾರ್ಥಗಳನ್ನು ಸೇವಿಸುವುದನ್ನು ರೂಢಿಸಿಕೊಳ್ಳಿ ” ಎಂದು ಸಲಹೆ ನೀಡಿದರು.
ಈ ಸಂಧರ್ಭದಲ್ಲಿ ಅರೋಗ್ಯ ಕೇಂದ್ರದ ಯೋಗ ತರಬೇತುದಾರ ರವಿ ಕೆ.ಅಂಬೇಕರ್ ಗ್ರಾಮಸ್ಥರಿಗೆ ಫ್ಲೋರೈಡ್ ನಿಂದ ಉಂಟಾಗುವ ಕೀಲುನೋವು ನಿವಾರಣೆಗೆ ಅವಶ್ಯಕ ಸೂಕ್ಷ್ಮ ವ್ಯಾಯಾಮದ ತರಬೇತಿ ನೀಡಿ ಪ್ರತಿದಿನ ಅಭ್ಯಾಸ ಮಾಡುವಂತೆ ತಿಳಿಸಿದರು.
ಅರೋಗ್ಯ ಇಲಾಖೆಯ ಜಿಲ್ಲಾ ಕಾರ್ಯಕ್ರಮ ಸಂಯೋಜಕ ಕೆ.ಎಸ್.ಮೇಟಿ, ಕೂನಬೇವು ಆರೋಗ್ಯ ಕ್ಷೇಮಕೇಂದ್ರದ ಆರೋಗ್ಯ ಸಂರಕ್ಷಣಾಧಿಕಾರಿ ಶ್ರೀಮತಿ ಭಾರತಿ ಕಟ್ಟಿಮನಿ, ಜಿಲ್ಲಾ ಆಶಾ ಮೆಂಟರ್ ಪೂರ್ಣಿಮಾ, ಜಿಲ್ಲಾ ಶುಶ್ರೂಷಾ ಅಧಿಕಾರಿ ಶಾಂತಮ್ಮ, ಜಿಲ್ಲಾ ಫ್ಲೋರೋಸಿಸ್ ವಿಭಾಗದ ಲ್ಯಾಬ್ ಟೆಕ್ನಿಷಿಯನ್ ಅಶೋಕ್, ಬಾಗೇನಹಾಳ್ ಆಶಾ ಕಾರ್ಯಕರ್ತೆಯರಾದ ಶ್ರೀಮತಿ ಮಾಂತಮ್ಮ, ನಿಂಗಮ್ಮ, ಶಾಲಾ ಶಿಕ್ಷಕಿ ರತ್ನಮ್ಮ ಹಾಗೂ ಗ್ರಾಮದ ಮುಖಂಡರು ಭಾಗವಹಿಸಿದ್ದರು.