ಬೆಂಗಳೂರು : ರಾಜ್ಯದಲ್ಲಿ ಇನ್ನೆರೆಡು ದಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಕನ್ನಡ, ಉಡುಪಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು, ರಾಮನಗರದಲ್ಲಿ ಮಳೆಯಾಗಲಿದೆ.
ಬಳ್ಳಾರಿ, ಉತ್ತರ ಕನ್ನಡ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ಶಿವಮೊಗ್ಗ, ತಮಕೂರಿನಲ್ಲಿ ಒಣಹವೆ ಮುಂದುವರೆಯಲಿದದೆ. ಬೀದರ್‌ನಲ್ಲಿ 13.4 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ. ಬೆಂಗಳೂರಿನಲ್ಲಿ ಮೋಡಕವಿದ ವಾತಾವರಣವಿದ್ದು, 26 ಡಿಗ್ರಿ ಗರಿಷ್ಠ ಉಷ್ಣಾಂಶ, 18 ಡಿಗ್ರಿ ಕನಿಷ್ಠ ಉಷ್ಣಾಂಶ ದಾಖಲಾಗಿದೆ.ಮಳೆಯಾಗುವ ಸಾಧ್ಯತೆ ಹೆಚ್ಚಾಗಿದೆ. ಸುಮಾರು 2 ವಾರಗಳಿಂದ ಕಡಿಮೆಯಾಗಿದ್ದ ಮಳೆ ಕರ್ನಾಟಕದ ಹಲವು ಭಾಗಗಳಲ್ಲಿ ಇಂದಿನಿಂದ ಮತ್ತೆ ಆರ್ಭಟಿಸುವ ಸಾಧ್ಯತೆಯಿದೆ. ಬಂಗಾಳಕೊಲ್ಲಿಯಲ್ಲಿ ಮೇಲ್ಮೈ ಸುಳಿಗಾಳಿಯಿಂದ ಇಂದು ಮೋಡ ಕವಿದ ವಾತಾವರಣವಿರಲಿದ್ದು, ಸಣ್ಣ ಪ್ರಮಾಣದಲ್ಲಿ ಮಳೆ ಬೀಳುವ ಸಾಧ್ಯತೆಯಿದೆ. ಇಂದು ತಮಿಳುನಾಡಿನ ಕರಾವಳಿ ತೀರದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇರುವುದರಿಂದ ಅದರ ಪರಿಣಾಮವಾಗಿ ಕೇರಳ ಮತ್ತು ಕರ್ನಾಟಕದ ದಕ್ಷಿಣ ಮತ್ತು ಕರಾವಳಿ ಭಾಗದಲ್ಲೂ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಹೀಗಾಗಿ, ಇಂದಿನಿಂದ ಮೂರು ದಿನಗಳ ಕಾಲ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಹೆಚ್ಚಾಗಿದೆ. ತಮಿಳುನಾಡು, ಪುದುಚೇರಿ ಮತ್ತು ಕಾರೈಕಾಲ್ನಲ್ಲಿ ಇಂದಿನಿಂದ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ. ತಮಿಳುನಾಡಿನಲ್ಲಿ ಡಿಸೆಂಬರ್ 22ರವರೆಗೂ ಮಳೆ ಮುಂದುವರಿಯಲಿದೆ. ಜೊತೆಗೆ, ಲಕ್ಷದ್ವೀಪ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಆಂಧ್ರ ಪ್ರದೇಶದಲ್ಲೂ ಮಳೆಯಾಗುವ ಸಾಧ್ಯತೆ ಹೆಚ್ಚಾಗಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.