ನಿತ್ಯವಾಣಿ,ಬೆಂಗಳೂರು (ಮೇ. 22) : ಖಾಸಗಿ ಅನುದಾನರಹಿತ ಶಾಲಾ ಶಿಕ್ಷಕ-ಶಿಕ್ಷಕೇತರ ಸಮುದಾಯಕ್ಕೆ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಿಸಬೇಕು ಎಂದು ವಿಧಾನ ಪರಿಷತ್ ಸದಸ್ಯರಾದ ವೈ.ಎ.ನಾರಾಯಣಸ್ವಾಮಿ ಹಾಗೂ ಚಿದಾನಂದಗೌಡ ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದಾರೆ.
ಕೋವಿಡ್ ಕಾರಣದಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಕ್ಷೇತ್ರಗಳಲ್ಲಿ ಶಿಕ್ಷಣ ಕ್ಷೇತ್ರವೂ ಪ್ರಧಾನವಾದ ಕ್ಷೇತ್ರವಾಗಿದೆ. ಸರ್ಕಾರ ವಿಧಿಸಿದ ಲಾಕ್ ಡೌನ್ ರಾಜ್ಯಾದ್ಯಂತ ಇರುವ ಸಾವಿರಾರು ಖಾಸಗಿ ಅನುದಾನರಹಿತ ಶಿಕ್ಷಣ ಸಂಸ್ಥೆಗಳ ಮೇಲೆ ಅವಲಂಬಿಸಿದ್ದ ಹಲವು ವರ್ಗಗಳ ಜೀವನದ ಮೇಲೆ ಗಂಭೀರ ಪರಿಣಾಮ ಬೀರಿದೆ. ಕಳೆದ ಸಾಲಿನಲ್ಲಿ ಭೌತಿಕ ತರಗತಿಗಳು ನಡೆಯದ ಕಾರಣ, ಪೆÇೀಷಕರು ಮಕ್ಕಳ ಬೋಧನಾ ಶುಲ್ಕವನ್ನು ಪಾವತಿಸಲು ನಿರೀಕ್ಷಿತ ರೀತಿಯಲ್ಲಿ ಆಸಕ್ತಿ ತೋರಲಿಲ್ಲ. ಇದೂ ಕೂಡಾ ಬಹು ವಿಧದ ಸಾಮಾಜಿಕ ಸಮಸ್ಯೆಗಳಿಗೆ ಕಾರಣವಾಯಿತು ಎಂದಿದ್ದಾರೆ.
ಖಾಸಗಿ ಶಾಲೆಗಳಲ್ಲಿ, ವಿಶೇಷವಾಗಿ ಗ್ರಾಮಾಂತರ ಪ್ರದೇಶಗಳಲ್ಲಿರುವ ಬಜೆಟ್ ಶಾಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಬೋಧಕ, ಬೋಧಕೇತರ ಸಿಬ್ಬಂದಿ ಮುನ್ನೆಲೆಗೆ ಬಾರದ, ಅತಿಯಾದ ಸಮಸ್ಯೆಗೆ ಸಿಲುಕಿರುವ ಸಮುದಾಯವಾಗಿದ್ದಾರೆ. ಪೆÇೀಷಕ-ಶಾಲೆಗಳ ನಡುವಿನ ಸಮಸ್ಯೆಗಳ ನೇರ ಪರಿಣಾಮ ಈ ಸಮುದಾಯದ ಮೇಲಾಗಿದೆ. ಅಸಂಖ್ಯ ಶಿಕ್ಷಕರು, ನರೇಗಾ ಯೋಜನೆಯಡಿ ಕೂಲಿ ಕೆಲಸ ಮಾಡಿದ್ದಾರೆ, ಹಣ್ಣು ತರಕಾರಿ ಮಾರಿದ್ದಾರೆ. ಇದನ್ನು ನಾವು ಹಲವು ಮಾಧ್ಯಮಗಳಲ್ಲಿ ನೋಡಿದ್ದೇವೆ. ಕೇಳಿದ್ದೇವೆ. ಅವರ ನೆರವಿಗೆ ಧಾವಿಸುವುದೂ ಸಹ ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಸಿ.ಎಂ.ಗೆ ಮನವರಿಕೆ ಮಾಡಿದ್ದಾರೆ.
ಸರ್ಕಾರಿ ಶಿಕ್ಷಕರ ಬದುಕಿನಲ್ಲಿ ಅಷ್ಟೊಂದು ಪರಿಣಾಮ ಬೀರದಿದ್ದರೂ ಖಾಸಗಿ ಶಾಲೆಯ ಶಿಕ್ಷಕರ ಬದುಕುದೇವರಿಗೆ ಪ್ರೀತಿ ಎನ್ನುವಂತಾಗಿದೆ. ಕೆಲವು ಶಾಲೆಗಳು ಅಲ್ಪಸ್ವಲ್ಪ ಸಂಬಳ ನೀಡುತ್ತಿದ್ದರೆ, ಕೆಲವು ಶಾಲೆಗಳು ಬಿಡಿಗಾಸು ನೀಡುತ್ತಿಲ್ಲ, ಕಳೆದೆರೆಡು ವರ್ಷಗಳಿಂದ ಮನೆ ಬಾಡಿಗೆ, ಮಕ್ಕಳ ವಿದ್ಯಾಭ್ಯಾಸ, ಸಂಸಾರನಿರ್ವಹಣೆ ಸಾಧ್ಯವಾಗದೆ ಏನು ಮಾಡಬೇಕೆಂಬ ಚಿಂತೆ ಕಾಡುತ್ತಿದೆ. ಬೇರೆ ಉದ್ಯೋಗ ಗೊತ್ತಿಲ್ಲ, ಶಿಕ್ಷಕ ವೃತ್ತಿಯಲ್ಲಿ ಸಂಬಳ ಸಿಗುತ್ತಿಲ್ಲ. ಸಂಸಾರ ಸಾಗಿಸುವುದು ಹೇಗೆ ಎಂದು ಗೊತ್ತಾಗುತ್ತಿಲ್ಲ ಇದರಿಂದ ಖಾಸಗಿ ಶಾಲಾ ಶಿಕ್ಷಕ ಸ್ಥಿತಿ ಅತಂತ್ರವಾಗಿದೆ ಎಂದಿದ್ದಾರೆ.
ಕೋವಿಡ್ ಕಾರಣದಿಂದ ಸಂಕಷ್ಟಕ್ಕೆ ಸಿಲುಕಿರುವ, ಬಜೆಟ್ ಅನುದಾನರಹಿತ ಶಾಲೆ ಕಾಲೇಜುಗಳಲ್ಲಿ ಕೆಲಸ ಮಾಡುವ ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿಗೆ 25 ಸಾವಿರ ರೂ.ಗಳ ಪ್ಯಾಕೇಜ್, ಪ್ರತಿಯೊಬ್ಬರಿಗೆ ತಲಾ 25 ಕೆ.ಜಿ.ಅಕ್ಕಿಯನ್ನು ಉಚಿತವಾಗಿ ವಿತರಿಸಲು ತಕ್ಷಣವೇ ಘೋಷಣೆ ಮಾಡುವಂತೆ ಮುಖ್ಯಮಂತ್ರಿಗಳನ್ನು ಇಬ್ಬರು ಶಾಸಕರು ಒತ್ತಾಯಿಸಿದ್ದು ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡುವ ಮೂಲಕ ಈ ಸಮುದಾಯಕ್ಕೆ ವಿಶ್ವಾಸ ತುಂಬಬೇಕೆಂದು ನಾರಾಯಣಸ್ವಾಮಿ ಹಾಗೂ ಚಿದಾನಂದಗೌಡ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ.