ಪೆಟ್ರೋಲ್, ಡಿಸಲ್ ಜಿಎಸ್ಟಿ ವ್ಯಾಪ್ತಿಗೆ ತನ್ನಿ ಎಂದು ರಾಷ್ಟ್ರಪತಿಗಳಿಗೆ ಮನವಿ ಪತ್ರ : ಎಸ್. ವೆಂಕಟೇಶ್ ಐಹೊಳೆ

ನಿತ್ಯವಾಣಿ,ಚಿತ್ರದುರ್ಗ, ಜೂ.10 : ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅವೈಜ್ಞಾನಿಕ ತೆರಿಗೆ ರದ್ದುಗೊಳಿಸಿ, ಜನ ಸಾಮಾನ್ಯರ ಮೇಲೆ ಬೀಳುವ ಹೊರೆಯನ್ನು ತಪ್ಪಿಸಿ, ಅವುಗಳನ್ನು ಜಿಎಸ್ಪಿ ವ್ಯಾಪ್ತಿಗೆ ತರುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿನೆ ನೀಡಬೇಕು ಎಂದು ಒತ್ತಾಯಿಸಿ ಬಹುಜನ ಸಮಾಜ ಪಾರ್ಟಿಯವರು ಇಂದು ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.

ಕೇಂದ್ರ ಸರ್ಕಾರವು ಅವೈಜ್ಞಾನಿಕವಾಗಿ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಶೇಕಡ ಮುನ್ನೂರಕ್ಕೂ ಹೆಚ್ಚು ಪ್ರತಿಶತ ತೆರಿಗೆ ವಿಧಿಸಿದೆ. ಇದರಿಂದ ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಲೀಟರ್ ಗೆ 100 ರೂಪಾಯಿಗಿಂತಲೂ ಹೆಚ್ಚಾಗಿದ್ದು, ಜಗತ್ತಿನ ಯಾವ ದೇಶದಲ್ಲೂ ಸಹ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಇಷ್ಟೊಂದು ತೆರಿಗೆ ವಿಧಿಸಿ ತನ್ನ ದೇಶದ ಪ್ರಜೆಗಳನ್ನು ಶೋಷಣೆ ಮಾಡುವ ಇನ್ನೊಂದು ಸರ್ಕಾರವಿಲ್ಲ ಎಂದು ಸರ್ಕಾರದ ಕಾರ್ಯವೈಖರಿ ವಿರುದ್ದ ಕಿಡಿಕಾರಿದರು. ಕೋವಿಡ್ 19 ಮತ್ತು ಲಾಕ್ ಡೌನ್ ನಿಂದ ಲಕ್ಷಾಂತರ ಜನ ಬಲಿಯಾಗಿದ್ದಾರೆ. ಹಾಗೆಯೇ ಕೋಟ್ಯಂತರ ಜನ ಉದ್ಯೋಗ ಕಳೆದುಕೊಂಡು ಬಡತನ ಮತ್ತು ಹಸಿವಿನಿಂದ ತತ್ತರಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಬೆಲೆ ಏರಿಕೆ, ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಮೂಲ ಕಾರಣವಾಗಿದೆ. ಅಡುಗೆ ಎಣ್ಣೆ ಲೀಟರ್ ಗೆ 200 ರೂಪಾಯಿ ದಾಟಿದೆ. ಅಡುಗೆ ಸಿಲಿಂಡರ್ ಬೆಲೆ ಸಾವಿರ ರೂಪಾಯಿ ಸಮೀಪಿಸುತ್ತಿದೆ. ಇವುಗಳ ಜೊತೆಗೆ ಆಹಾರ ಧಾನ್ಯಗಳು ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಗಗನ ಮುಟ್ಟಿದೆ. ಇಂತಹ ಸಂದರ್ಭದಲ್ಲಿ ಜನ ಸಾಮಾನ್ಯರ ನೆರವಿಗೆ ನಿಲ್ಲಬೇಕಾದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮನಬಂದಂತೆ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ತೆರಿಗೆ ವಿಧಿಸಿ ಜನರನ್ನು ಮತ್ತಷ್ಟು ಶೋಷಣೆ ಮಾಡುತ್ತಿವೆ. ಆದ್ದರಿಂದ ರಾಷ್ಟ್ರಪತಿಗಳು ಮಧ್ಯಪ್ರವೇಶ ಮಾಡಿ ಇಂತಹ ಅವೈಜ್ಞಾನಿಕ ತೆರಿಗೆ ಏರಿಕೆಯನ್ನು ತಡೆಯಲು ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಜಿಎಸ್ಟಿ ವ್ಯಾಪ್ತಿಗೆ ಸೇರಿಸಲು ಕೇಂದ್ರ ಸರ್ಕಾರಕ್ಕೆ ಸೂಚಿಸಬೇಕೆಂದು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಎಸ್. ವೆಂಕಟೇಶ್ ಐಹೊಳೆ, ಎಸ್.ಕುಮಾರ್, ಗೀರೀಶ್, ಪಾಂಡುರಂಗಯ್ಯ, ತಿಮ್ಮಣ್ಣ, ಶಶಿ, ಮಂಜುನಾಥ್ ಸೇರಿದಂತೆ ಇತರರು ಹಾಜರಿದ್ದರು.

ಸುದ್ದಿಗಾಗಿ, ಜಾಯಿರಾತಿಗಾಗಿ 👉  ನಿತ್ಯವಾಣಿ  ಕನ್ನಡ ದಿನಪತ್ರಿಕೆ, ಸಂಪಾದಕರು ಎಸ್ ಟಿ ನವೀನ್ ಕುಮಾರ್, ಚಿತ್ರದುರ್ಗ, ಮೊಬೈಲ್ -9901254020

Leave a Reply

Your email address will not be published.