ನಿತ್ಯವಾಣಿ,ಚಿತ್ರದುರ್ಗ,(ಜೂ.16) : ಜಿಲ್ಲೆಯ ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ಗಡಿಭಾಗದಲ್ಲಿ ಮದ್ಯ ಮಾರಾಟ ಮಾಡುವ ಅಂಗಡಿಗಳನ್ನು ರದ್ದುಪಡಿಸಿ ಹೊಸದಾಗಿ ಮದ್ಯದಂಗಡಿಗಳನ್ನು ತೆರೆಯಲು ಅನುಮತಿ ನೀಡಬಾರದೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ವತಿಯಿಂದ ಬುಧವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಮೊಳಕಾಲ್ಮರು ಗಡಿಭಾಗದಲ್ಲಿರುವ ಉಡೇವು, ಬಸಾಪುರ ಮತ್ತು ಓಬಳಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಏಳು ಮದ್ಯದಂಗಡಿಗಳನ್ನು ಹಾಗೂ ತಿಪ್ಪರೆಡ್ಡಿಹಳ್ಳಿ ಬಳಿ ಎರಡು ಮದ್ಯದಂಗಡಿಗಳನ್ನು ತೆರೆಯಲು ಅಬಕಾರಿ ಅಧೀಕ್ಷಕರು ಅನುಮತಿ ನೀಡಿದ್ದಾರೆ. ಆಂಧ್ರ ಹಾಗೂ ಕರ್ನಾಟಕದಿಂದ ನೂರಾರು ಬೈಕ್‍ಗಳಲ್ಲಿ ಆಗಮಿಸಿ ಮದ್ಯಸೇವಿಸುತ್ತಿದ್ದಾರೆ. ಕೊರೋನಾ ಮಹಾಮಾರಿ ಇಡಿ ಜಗತ್ತನ್ನೆ ಕಾಡುತ್ತಿದ್ದು, ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುತ್ತಿಲ್ಲ. ಇದರಿಂದ ಸೋಂಕು ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ಸಾಧ್ಯತೆಯಿದೆ. ಇದೆ ರೀತಿಯಾದರೆ ಕೊರೋನಾ ನಿಯಂತ್ರಣವಾಗುವುದಾದರೂ ಹೇಗೆ ಎಂದು ರೈತರು ಜಿಲ್ಲಾಧಿಕಾರಿಯನ್ನು ಪ್ರಶ್ನಿಸಿದರು.
ಅಬಕಾರಿ ಅಧೀಕ್ಷಕರು ಒಂದೇ ಪಂಚಾಯಿತಿಗೆ ಏಳು ಮದ್ಯದಂಗಡಿಗಳನ್ನು ತೆರೆಯಲು ಅನುಮತಿ ಕೊಟ್ಟಿದ್ದು, ಇದರಿಂದ ಗ್ರಾಮೀಣ ಭಾಗದ ಬಡ ಕೂಲಿಕಾರರು, ರೈತರು, ಜನಸಾಮಾನ್ಯರು ದಿನನಿತ್ಯದ ದುಡಿಮೆಯನ್ನೆಲ್ಲಾ ಕುಡಿತಕ್ಕೆ ವೆಚ್ಚ ಮಾಡುತ್ತಿದ್ದಾರೆ. ಪಾನಮತ್ತರಾಗಿ ಬರುವ ಪುರುಷರು ದಿನವೂ ಮನೆಯಲ್ಲಿ ಹೆಂಡತಿ ಮಕ್ಕಳಿಗೆ ಕಿರುಕುಳು ನೀಡುವುದು ತಪ್ಪಿಲ್ಲ. ಮಕ್ಕಳು ಶಿಕ್ಷಣದಿಂದಲೂ ವಂಚಿತರಾಗುತ್ತಿದ್ದಾರೆಂದು ಪ್ರತಿಭಟನಾನಿರತ ರೈತರು ಅಬಕಾರಿ ಅಧೀಕ್ಷಕರ ನಡೆಯನ್ನು ಖಂಡಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಕೆಡಿಪಿ.ಸಭೆಯಲ್ಲಿ ಅಬಕಾರಿ ಅಧೀಕ್ಷಕರ ವಿರುದ್ದ ಕ್ರಮ ಕೈಗೊಂಡು ಸೇವೆಯಿಂದ ಅಮಾನತ್ತುಗೊಳಿಸುವಂತೆ ಆದೇಶಿಸಿದ್ದರೂ ಇದುವರೆವಿಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಹೊಸದಾಗಿ ಯಾವುದೇ ಮದ್ಯದಂಗಡಿಗಳನ್ನು ತೆರೆಯಲು ಅವಕಾಶ ನೀಡಬಾರದೆಂದು ಸೂಚಿಸಿದ್ದರೂ ಸಚಿವರ ಆದೇಶವನ್ನು ಧಿಕ್ಕರಿಸಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ರಾಜ್ಯ ಉಪಾಧ್ಯಕ್ಷ ಕೆ.ಪಿ.ಭೂತಯ್ಯ ಆಪಾದಿಸಿದರು.
ಚಳ್ಳಕೆರೆ ತಾಲ್ಲೂಕಿನ ಆಂಧ್ರಪ್ರದೇಶ ಗಡಿ ವ್ಯಾಪ್ತಿಯ ಓಬಳಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿಯೂ ಅಕ್ರಮವಾಗಿ ಮದ್ಯ ಮಾರಾಟ ಮಾಡುವುದನ್ನು ನಿಲ್ಲಿಸಬೇಕು ಎಂದು ದೊಡ್ಡಬಾದಿಹಳ್ಳಿ ಗ್ರಾಮಸ್ಥರು ಜಿಲ್ಲಾಧಿಕಾರಿಯವರಲ್ಲಿ ವಿನಂತಿಸಿದರು.
ಓಬಳಾಪುರ ಪಂಚಾಯಿತಿಯ ದೊಡ್ಡಬಾದಿಹಳ್ಳಿ, ಪಾತಪ್ಪನಗುಡಿ, ದಾಸರ್ಲಹಳ್ಳಿ, ತಿಪ್ಪರೆಡ್ಡಿಹಳ್ಳಿಯಲ್ಲಿಯೂ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವುದನ್ನು ನಿಷೇಧಿಸಿ ಹೊಸದಾಗಿ ಬಾರ್ ಮತ್ತು ರೆಸ್ಟೋರೆಂಟ್ ತೆರೆಯಲು ಅವಕಾಶ ನೀಡಬಾರದೆಂದು ನ್ಯಾಯವಾದಿ ಎಸ್.ಜಿ.ಅಶೋಕ್‍ಕುಮಾರ್ ಇವರು ಜಿಲ್ಲಾಡಳಿತಕ್ಕೆ ಮನವಿ ಮಾಡಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಜಿಲ್ಲಾಧ್ಯಕ್ಷ ಕೆ.ಸಿ.ಹೊರಕೇರಪ್ಪ, ತಾಲ್ಲೂಕು ಅಧ್ಯಕ್ಷ ಧನಂಜಯ, ಎಂ.ಲಕ್ಷ್ಮಿಕಾಂತ, ತಿಪ್ಪೇಸ್ವಾಮಿ ಮೇಟಿಕುರ್ಕೆ, ಚಳ್ಳಕೆರೆ ತಾಲ್ಲೂಕು ಅಧ್ಯಕ್ಷ ಟಿ.ಹಂಪಣ್ಣ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.ಸುದ್ದಿಗಾಗಿ, ಜಾಹೀರಾತಿಗಾಗಿ ,👉ನಿತ್ಯವಾಣಿ ಕನ್ನಡ ದಿನಪತ್ರಿಕೆ, ಸಂಪಾದಕರು ಎಸ್ ಟಿ ನವೀನ್ ಕುಮಾರ್, ಚಿತ್ರದುರ್ಗ, ಮೊಬೈಲ್ -9901254020 www.nithyavaninews.com