ಕರೊನಾ ಕೋಲಾಹಲ: ಶಾಸಕರೇ ನೀವು ಸೋಂಕಿತರು ಎನ್ನುವಷ್ಟರಲ್ಲಿಯೇ ಬಂತು ನೆಗೆಟಿವ್‌ ವರದಿ!

ದಾವಣಗೆರೆ: ಒಮ್ಮೆ ಪಾಸಿಟಿವ್, ಇನ್ನೊಮ್ಮೆ ನೆಗೆಟಿವ್‌. ಒಂದು ಆಸ್ಪತ್ರೆಯಲ್ಲಿ ಪಾಸಿಟಿವ್, ಇನ್ನೊಂದು ಆಸ್ಪತ್ರೆಯಲ್ಲಿ ನೆಗೆಟಿವ್‌, ಸ್ವಲ್ಪ ಕೆಮ್ಮಿದರೂ ಪಾಸಿಟಿವ್‌, ಕೆಮ್ಮು ನಿಂತ ಮೇಲೆ ನೆಗೆಟಿವ್‌… ಹೀಗೆ ಮೇಲಿಂದ ಮೇಲೆ ಕರೊನಾ ಪರೀಕ್ಷೆಯಲ್ಲಿ ಗೊಂದಲ ಆಗುತ್ತಿರುವುದು ಹೊಸ ವಿಷಯವೇನಲ್ಲ,ಈ ಎಲ್ಲ ಬೆಳವಣಿಗೆಯ ನಂತರ ಕರೊನಾ ಪರೀಕ್ಷೆಯ ಬಗ್ಗೆಯೇ ಜನರಿಗೆ ವಿಪರೀತ ಸಂದೇಹ ಶುರುವಾಗಿರುವ ಬೆನ್ನಲ್ಲೇ ಇದೀಗ ಖುದ್ದು ಶಾಸಕರಿಗೇ ಇಂಥದ್ದೊಂದು ಗೊಂದಲ ಉಂಟಾಗಿರುವುದು ಬೆಳಕಿಗೆ ಬಂದಿದೆ.ದಾವಣಗೆರೆಯ ಉತ್ತರ ಕ್ಷೇತ್ರದ ಶಾಸಕ ಎಸ್‌.ಎ. ರವೀಂದ್ರನಾಥ್ ಅವರಿಗೆ ರ‍್ಯಾಪಿಡ್‌ ಆಂಟಿಜನ್‌ ಟೆಸ್ಟ್‌ ಮಾಡಿಸಿದಾಗ ಒಮ್ಮೆ ಪಾಸಿಟಿವ್‌ ಬಂದಿದ್ದು, ಮಾರನೆಯ ದಿನ ಆರ್‌ಟಿ–ಪಿಸಿಆರ್‌ ಟೆಸ್ಟ್‌ ಮಾಡಿಸಿದಾಗ ನೆಗೆಟಿವ್‌ ಬಂದು ಗೊಂದಲ ಉಂಟು ಮಾಡಿದೆ.74 ವರ್ಷದ ಶಾಸಕ ರವೀಂದ್ರನಾಥ್‌ ಅವರು ಎರಡು ದಿನಗಳ ಹಿಂದೆ ರ‍್ಯಾಪಿಡ್‌ ಟೆಸ್ಟ್‌ ಮಾಡಿಸಿದ್ದರು. ಬಳಿಕ ಶನಿವಾರ ಆರ್‌ಟಿ–‍ಪಿಸಿಆರ್‌ ಟೆಸ್ಟ್‌ ಮಾಡಿಸಿದ್ದರು. ಹಿಂದಿನ ದಿನ ಅವರಿಗೆ ಪಾಸಿಟಿವ್‌ ಬಂದಿತ್ತು. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯಿಂದ ಬಿಡುಗಡೆ ಮಾಡುವ ಕರೊನಾ ಬುಲೆಟಿನ್‌ನಲ್ಲಿ ಕೂಡ ಇವರನ್ನೂ ಸೇರಿಸಲಾಗಿತ್ತು.ರಾಜ್ಯ ಬುಲೆಟಿನ್‌ ನಂಬರ್‌ 335558, ಹಾಗೂ ಜಿಲ್ಲಾ ಬುಲೆಟಿನ್‌ ನಂಬರ್‌ 9035ರಲ್ಲಿ ಶಿರಮಗೊಂಡನಹಳ್ಳಿ ನಿವಾಸಿ ಎಂಎಲ್‌ಎ ಎಂದು ತೋರಿಸಲಾಗಿತ್ತು. ಆದರೆ ಅಚ್ಚರಿಯ ಸಂಗತಿ ಎಂದರೆ ಈ ಬುಲೆಟಿನ್‌ ಬಿಡುಗೆಯಾಗುವ ಮೊದಲೇ ಮಾಡಿದ ಇನ್ನೊಂದು ವರದಿಯಲ್ಲಿ ನೆಗೆಟಿವ್‌ ಎಂದು ಬಂದಿದೆ!‘ನಾನು ಆರಾಮ ಇದ್ದೇನೆ. ರ‍್ಯಾಪಿಡಲ್ಲಿ ಪಾಸಿಟಿವ್‌, ಆಮೇಲಿನ ಟೆಸ್ಟಲ್ಲಿ ನೆಗೆಟಿವ್‌ ಬಂದಿದೆ. ಅದೇನು ದೊಡ್ಡ ವಿವಾದ ಮಾಡುವ ಸಂಗತಿ ಅಲ್ಲ’ ಎಂದು ಶಾಸಕ ರವೀಂದ್ರನಾಥ್‌ ಅವರೇನೋ ಸ್ಪಷ್ಟಪಡಿಸಿದ್ದಾರೆ. ಆದರೆ ಕರೊನಾ ಪರೀಕ್ಷೆಯ ಸತ್ಯಾಸತ್ಯತೆಯ ಬಗ್ಗೆ ಮತ್ತೊಮ್ಮೆ ಪ್ರಶ್ನೆ ಏಳುವಂತೆ ಮಾಡಿದೆ.

Leave a Reply

Your email address will not be published.