ಚಿತ್ರದುರ್ಗ, ನಿತ್ಯವಾಣಿ , (ಏ.12) : ಯುವಕನೊಬ್ಬ ಚಿರತೆಯಿಂದ ತಪ್ಪಿಸಿಕೊಂಡು ಬಚಾವ್ ಆದ ಘಟನೆ ನಗರದ ಕೋಟೆಯ ಕರವತ್ತಿ ಬಳಿ ಇರುವ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಸೋಮವಾರ ರಾತ್ರಿ ನಡೆದಿದೆ. ನಗರದ ಉತ್ಸವಾಂಬ ದೇವಸ್ಥಾನದ ಬಳಿಯ ನಿವಾಸಿ ಫಣಿರಾಜ್ ಚಿರತೆ ಬಾಯಿಂದ ತಪ್ಪಿಸಿಕೊಂಡು ಜೀವ ಉಳಿಸಿಕೊಂಡ ಯುವಕ, ಯುಗಾದಿ ಹಿನ್ನೆಲೆಯಲ್ಲಿ ಕರುವರ್ತಿ ಬಳಿಯಲ್ಲಿ ಮಾವು ಹಾಗೂ ಬೇವಿನ ಎಲೆ ತಂದಿದ್ದಾನೆ. ಉಳಿದ ಮಾವು, ಬೇವಿನ ಸೊಪ್ಪನ್ನು ದೇವಸ್ಥಾನ ಬಳಿ ಇಡಲು ರಾತ್ರಿ ಒಂಬತ್ತುರ ಸುಮಾರಿಗೆ ಹೋಗಿದ್ದಾನೆ. ಈ ವೇಳೆ ಬೈಕ್ ನಲ್ಲಿ ಹಿಂತಿರುಗುವಾಗ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಹಿಂಬಂದಿಯಿಂದ ಚಿರತೆ ದಾಳಿಗೆ ಮುಂದಾಗಿದೆ.
ಗಾಬರಿಗೊಂಡು ಬೈಕ್ ನಲ್ಲಿ ಹೇಗೋ ತಪ್ಪಿಸಿಕೊಂಡು ಬಂದೆ. ಇಂದು ಅಮವಾಸ್ಯೆ ಇತ್ತು ಹೇಗೋ ನನ್ನನ್ನು ಆಂಜನೇಯ ಸ್ವಾಮಿಯೇ ಕಾಪಾಡಿದ್ದಾನೆ ಎಂದು
ಕ್ಷಣ ಮಾತ್ರದಲ್ಲಿ ಚಿರತೆ ಬಾಯಿಂದ ಪಾರಾಗಿದ್ದೇನೆ ಎಂದು ಯುವಕ ತನಗಾದ ಅನುಭವವನ್ನು ತಿಳಿಸಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಆರ್ ಎಫ್ ಒ ಸಂದೀಪ್ ನಾಯಕ್,ಮಾತನಾಡುತ್ತಾ ಆಡುಮಲ್ಲೇಶ್ವರ, ಜೋಗಿಮಟ್ಟಿ ಅರಣ್ಯ ಧಾಮ ಸೇರಿದಂತೆ, ಕೋಟೆಯ ಬೆಟ್ಟದ ಭಾಗದಲ್ಲಿ ಚಿರತೆಗಳು ಸರ್ವೇಸಾಮಾನ್ಯವಾಗಿ ಸಂಚರಿಸುತ್ತವೆ. ಚಿರತೆ ಸ್ವಾಭಾವಿಕ ಮನುಷ್ಯರನ್ನು ನೋಡಿದಾಗ ವಾಸನೆಯನ್ನು ಗ್ರಹಿಸಿದಾಗ ಹೆದರುತ್ತವೆ.
ಕೋಟೆ, ಮಾಳಪ್ಪನಹಟ್ಟಿ ಗುಡ್ಡ ಅಡಿಕೆ ತೋಟಗಳಲ್ಲಿ ಸಂಚರಿಸಿ ನಾಯಿಗಳನ್ನು ಬೇಟೆಯಾಡುತ್ತವೆ. ಚಿರತೆಗಳು ಸಾಮಾನ್ಯವಾಗಿ ಒಂದೇ ಕಡೆ ನಿಲ್ಲದೇ ಸಂಚರಿಸುತ್ತಿರುತ್ತವೆ.
ಆದರೂ ಸಾರ್ವಜನಿಕರು, ವಾಯುವಿಹಾರಿಗಳು ಕೊಂಚ ಎಚ್ಚರಿಕೆಯಿಂದ ಇರಬೇಕು. ಸಾಧ್ಯವಾದಷ್ಟು ಕತ್ತಲಿರುವಾಗ ವಾಯುವಿಹಾರಕ್ಕೆ ತೆರಳುವುದು ಒಳಿತಲ್ಲ. ನಾಳೆ ಬೆಳಗ್ಗೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಲಾಗುವುದು. ಒಂದು ವೇಳೆ ಚಿರತೆ ಚಲನವಲನ ಕಂಡು ಬಂದಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.